Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

‘ನನ್ನನ್ನು ಬಂಧಿಸಿ’: ಸಿಬ್ಬಂದಿ ಜೊತೆಗೆ ಸೋನಮ್ ವಾಂಗ್ಚುಕ್ ರ ವೈರಲ್ ವಿಡಿಯೋಗೆ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ

---Advertisement---

ದೆಹಲಿ.ಜುಲೈ.25: ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್, ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಯೊಂದಿಗೆ ಬಿಸಿಬಿಸಿ ಚರ್ಚೆ ನಡೆಸಿ ಆಕ್ರೋಶ ಹೊರಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ. ತಮಗೆ ಆಸ್ಪತ್ರೆಯಿಂದ ಹೊರಹೋಗಲು ಅನುಮತಿ ನೀಡುವಂತೆ ಅಥವಾ ತಕ್ಷಣವೇ ಬಂಧಿಸುವಂತೆ ಅವರು ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ.

ಜುಲೈ 21 ರಂದು ಚಿತ್ರೀಕರಿಸಲಾಗಿದೆ ಎನ್ನಲಾದ ಈ ವಿಡಿಯೋದಲ್ಲಿ, ವಾಂಗ್ಚುಕ್ ತಮ್ಮನ್ನು ಅನಗತ್ಯವಾಗಿ ಆಸ್ಪತ್ರೆಯಲ್ಲಿ ತಡೆದು ಹಿಂಸಿಸಲಾಗುತ್ತಿದೆ ಎಂದು ಕಡಾಖಂಡಿತವಾಗಿ ಆರೋಪಿಸಿದ್ದಾರೆ. “ನನ್ನನ್ನು ಬಂಧಿಸುವುದಿದ್ದರೆ ಬಂಧಿಸಿ, ಇಲ್ಲಿ ಏಕಾಗಿ ಇಟ್ಟುಕೊಂಡಿದ್ದೀರಿ? ನಿಮ್ಮ ಕಿರುಕುಳದ ಒತ್ತಡದಿಂದ ನಾನು ಸತ್ತರೆ ಅದಕ್ಕೆ ನೀವೇ ಹೊಣೆ. ನೀವು ವೈದ್ಯರೋ ಅಥವಾ ಕಟುಕರೋ? ಆತ್ಮವನ್ನೇ ಮಾರಿಕೊಂಡಿರುವ ಅತ್ಯಂತ ಕೆಟ್ಟ ಸಂಸ್ಥೆ ಇದು” ಎಂದು ಸಿಬ್ಬಂದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಕೂಡ ಪೊಲೀಸರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿದೆ.

ಈ ವೈರಲ್ ವಿಡಿಯೋಗೆ ಸಫ್ದರ್ಜಂಗ್ ಆಸ್ಪತ್ರೆ ಸ್ಪಷ್ಟನೆ ನೀಡಿದ್ದು, ಆಸ್ಪತ್ರೆಯ ‘ವೀಡಿಯೋಗ್ರಫಿ ನಿಷೇಧಿತ’ ವಲಯದಲ್ಲಿ ಜುಲೈ 21 ರಂದು ವಾಂಗ್ಚುಕ್ ಅವರ ಬೆಂಬಲಿಗರು ಇದನ್ನು ಚಿತ್ರೀಕರಿಸಿದ್ದಾರೆ ಎಂದು ತಿಳಿಸಿದೆ. ದೆಹಲಿ ಹೈಕೋರ್ಟ್ನಿಂದ ವಾಂಗ್ಚುಕ್ ಅವರನ್ನು ಅವರ ಆಯ್ಕೆಯ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವ ಲಿಖಿತ ಆದೇಶ ತಲುಪುವ ಮೊದಲೇ, ಮಾಧ್ಯಮಗಳ ವರದಿ ಆಧಾರಿಸಿ ಅವರು ಹೊರಹೋಗಲು ಪಟ್ಟು ಹಿಡಿದಿದ್ದರು. ಅಧಿಕೃತ ಲಿಖಿತ ಆದೇಶ ತಲುಪಿದ ತಕ್ಷಣವೇ, ಅಂದೇ ಸಂಜೆ 6:40 ಕ್ಕೆ ಅವರನ್ನು ಮೇದಾಂತ ಗುರುಗ್ರಾಮ್ ಆಸ್ಪತ್ರೆಯ ವೈದ್ಯರ ತಂಡಕ್ಕೆ ಸುಗಮವಾಗಿ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ವಿವರಿಸಿದೆ.

ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ 26 ದಿನಗಳ ನಿರಹಾರ ಸತ್ಯಾಗ್ರಹ ನಡೆಸುತ್ತಿದ್ದ ವಾಂಗ್ಚುಕ್ ಅವರನ್ನು, ಹೈಕೋರ್ಟ್ ನಿರ್ದೇಶನದಂತೆ ಜಂತರ್ ಮಂತರ್ನಿಂದ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ತಮ್ಮನ್ನು ಖೈದಿಯಂತೆ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದ ವಾಂಗ್ಚುಕ್, ಪರೀಕ್ಷಾ ಸುಧಾರಣೆಗಳು ಹಾಗೂ ವಿದ್ಯಾರ್ಥಿಗಳಿಗೆ ಪರಿಹಾರ ನೀಡುವ ಕುರಿತು ಸರ್ಕಾರದಿಂದ ಧನಾತ್ಮಕ ಭರವಸೆಗಳು ದೊರೆತ ನಂತರ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.

Join WhatsApp

Join Now

Join Telegram

Join Now