ಸುದ್ದಿಒನ್, ಚಿತ್ರದುರ್ಗ, ಜುಲೈ. 25 : ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕಿನ 08 ಕೆರೆಗಳನ್ನು ಸೇರಿಸಿ, ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ ಎಂದು ಶಾಸಕ ವೀರೇಂದ್ರ ಪಪ್ಪಿ ಮನವಿ ಮಾಡಿದರು.
ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆ ಕಳೆದ 80 ವರ್ಷಗಳಲ್ಲಿ 60 ವರ್ಷ ಬರಗಾಲ ಕಂಡಿದೆ. ಹೀಗಾಗಿ ಇಲ್ಲಿನ ಜನರ ಬದುಕು ಹಸನಾಗಿಸಲು, ಭದ್ರಾ ಮೇಲ್ದಂಡೆ ಯೋಜನೆಯಡಿ, ಚಿತ್ರದುರ್ಗ ತಾಲ್ಲೂಕಿನ 08 ಕೆರೆಗಳು ಕೈಬಿಟ್ಟುಹೋಗಿವೆ. ಆದ್ದರಿಂದ 08 ಕೆರೆಗಳನ್ನು ಸೇರಿಸಿ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಬೇಕು. ಚಿತ್ರದುರ್ಗ ನಗರ ದಿನೇ ದಿನೇ ಬೆಳೆಯುತ್ತಿದ್ದು ವಿ.ವಿ. ಸಾಗರದಿಂದ ಮತ್ತೊಂದು ಹೊಸ ಪೈಪ್ ಲೈನ್ ಮೂಲಕ ಕುಡಿಯುವ ನೀರು ಪೂರೈಸುವ ಯೋಜನೆ ಮಂಜೂರು ಮಾಡಿ, ಅನುಮೋದನೆ ನೀಡಲು ಮನವಿ ಮಾಡಿದರು. ಹಾವೇರಿಯಲ್ಲಿ ಮೋಡಬಿತ್ತನೆ ಮಾಡಿದ್ದು, ಯಶಸ್ವಿಯಾಗಿದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಮೋಡ ಬಿತ್ತನೆ ಮಾಡಲು ಅವಕಾಶ ಮಾಡಿಕೊಡಲು ಮನವಿ ಮಾಡಿದರು.











