ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 11 : ರಾಜ್ಯದ 20 ಜಿಲ್ಲೆಗಳಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ, ಕೊಲೆ, ಅತ್ಯಾಚಾರ ನಡೆಯುತ್ತಿರುವುದರಿಂದ ರಾಜ್ಯಾದ್ಯಂತ ಜನಜಾಗೃತಿ ಆಂದೋಲನ ನಡೆಸುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ದಾದಾ ಸಾಹೇಬ್ ಡಾ.ಎನ್.ಮೂರ್ತಿ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹರಳಯ್ಯ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿರುವವರನ್ನು ಗಡಿಪಾರು ಮಾಡಬೇಕಿತ್ತು. ಬೇರೆ ಸ್ವಾಮಿಜಿಗಳು ಇದನ್ನು ಖಂಡಿಸದಿರುವುದು ನೋವಿನ ಸಂಗತಿ. ಸ್ವಾಮೀಜಿಗೆ ರಕ್ಷಣೆ ಕೊಡಬೇಕು. ಇಲ್ಲವಾದರೆ ಗೃಹ ಮಂತ್ರಿ ಮನೆ ಮತ್ತು ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.
ಎಸ್ಸಿಪಿ. ಟಿಎಸ್ಪಿ. ಹಣ ಮೂರು ಲಕ್ಷ 84 ಸಾವಿರ ಕೋಟಿ ರೂ.ಗಳಲ್ಲಿ ಒಂದುವರೆ ಲಕ್ಷ ಕೋಟಿ ರೂ.ಗಳನ್ನು ಬಿಜೆಪಿ. ಜೆಡಿಎಸ್. ಕಾಂಗ್ರೆಸ್ ಸರ್ಕಾರಗಳು ದುರ್ಬಳಕೆ ಮಾಡಿಕೊಂಡಿವೆ. ಕಾಂಗ್ರೆಸ್ ಸರ್ಕಾರ 54 ಸಾವಿರ ಕೋಟಿ ಹಣವನ್ನು ಐದು ಗ್ಯಾರೆಂಟಿಗಳಿಗೆ ಬಳಸಿಕೊಂಡಿದೆ. ದಲಿತ ಸಂಘಟನೆಗಳು ಅನೇಕ ಬಾರಿ ವಿರೋಧಿಸಿ
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆದಿದ್ದರು ಬೆಲೆ ಕೊಡಲಿಲ್ಲ. ಪರಿಶಿಷ್ಟ ಜಾತಿಯ ಸಾಮಾಜಿಕ, ಆರ್ಥಿಕ, ಕೌಶಲ್ಯ ಅಭಿವೃದ್ದಿಗೆ ವಿನಿಯೋಗಿಸಬೇಕಾಗಿರುವ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡು ಎಸ್ಸಿಪಿ. ಟಿಎಸ್ಪಿ. ಕಾಯಿದೆಯನ್ನು ಉಲ್ಲಂಘಿಸಿದೆ ಎಂದು ದೂರಿದರು.
ರಾಜ್ಯದಲ್ಲಿ 56 ದಲಿತ ಶಾಸಕರು, ಮಂತ್ರಿಗಳಿದ್ದಾರೆ. ಯಾರು ಈ ಬಗ್ಗೆ ಮಾತನಾಡುತ್ತಿಲ್ಲ. 39 ಇಲಾಖೆಗಳಿಗೆ ಹಣ ಕೊಟ್ಟಿದೆ. ಶೇ.80 ರಷ್ಟು ಹಣ ಪೋಲಾಗಿದೆ. ಎಲ್ಲಾ ಪಕ್ಷಗಳು ಬೇಜವಾಬ್ದಾರಿ, ಉದ್ದಟತನ, ನಿರ್ಲಕ್ಷೆಯಿಂದ ಹಣ ಬಳಸಿಕೊಂಡಿರುವುದರ ವಿರುದ್ದ ಜನಜಾಗೃತಿ ಆಂದೋಲನಕ್ಕೆ ಮುಂದಾಗಿದ್ದೇವೆ. ರಾಜ್ಯದಲ್ಲಿ 25 ಸಾವಿರ
ಮ್ಯಾನ್ಯುವೆಲ್ ಸ್ಕ್ವಾವೆಂಜರ್‍ಗಳಿದ್ದು, 90 ಮಂದಿ ಮ್ಯಾನ್ ಹೋಲ್‍ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಇವರಿಗೆಲ್ಲಾ ಪರಿಹಾರ ಪುನರ್ವಸತಿ ಬೇಡವೆ? ಪಿಟಿಸಿಎಲ್ ಕಾಯಿದೆಯಡಿ 18172 ಕೇಸುಗಳು ದಾಖಲಾಗಿವೆ. ಭೂ ಮಾಲೀಕರ ಪರವಾಗಿ ಸಹಸ್ರಾರು ಕೇಸುಗಳು ತೀರ್ಪಾಗಿದೆ. ಕೇಂದ್ರದಲ್ಲಿ 1.6, ರಾಜ್ಯದಲ್ಲಿ 3.5 ರಷ್ಟು ಶಿಕ್ಷೆಯಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಬುದ್ದ, ಬಸವ ಇವರುಗಳ ಬಗ್ಗೆ ಅವಹೇಳನವಾಗಿ ಮಾತನಾಡಿರುವವರ ಮೇಲೆ ಕೋಮು ಪ್ರಚೋದನೆ ಕಾಯಿದೆಯಡಿ ಕೇಸು ದಾಖಲಿಸಬೇಕಿತ್ತು. ಎಸ್ಸಿ. ಎಸ್ಟಿ.ಗಳನ್ನು ರಾಜಕೀಯ ಪಕ್ಷಗಳು ಓಟ್ ಬ್ಯಾಂಕ್‍ಗಳನ್ನಾಗಿ ಮಾಡಿಕೊಂಡಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ ದೌರ್ಜನ್ಯಗಳಾಗುತ್ತಿದ್ದರೂ ಕೇಸುಗಳು ದಾಖಲಾಗುತ್ತಿಲ್ಲದಿರುವುದರ ವಿರುದ್ದ ನಮ್ಮ ಹೋರಾಟ ನಿರಂತರವಾಗಿರುತ್ತದೆಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ವಿಶ್ವನಾರಾಯಣಮೂರ್ತಿ ಮಾತನಾಡಿ ಎಸ್ಸಿಪಿ. ಟಿಎಸ್ಪಿ. ಹಣವನ್ನು ರಾಜ್ಯ ಸರ್ಕಾರ ಬೇರೆ ಬೇರೆ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಂಡಿದೆ. ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರಗಳು ಜಾಸ್ತಿಯಾಗಿದೆ. ಜಾತಿ ನಿಂದನೆ ಕೇಸು ದಾಖಲಿಸಿದರೆ ಅಟ್ರಾಸಿಟಿಯನ್ನು ದಲಿತರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಮೇಲ್ಜಾತಿಯವರು ಆರೋಪಿಸುತ್ತಿದ್ದಾರೆ. ಹಾಗಾಗಿ ಡಾ.ಎನ್.ಮೂರ್ತಿರವರ ನೇತೃತ್ವದಲ್ಲಿ ರಾಜ್ಯಾದ್ಯಂತ ಜನಜಾಗೃತಿ ಆಂದೋಲನ ನಡೆಯಲಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಪಾಧ್ಯಕ್ಷ ಹೆಚ್.ಶಿವಮೂರ್ತಿ ಬಹದ್ದೂರ್‍ಘಟ್ಟ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಬೈಲಹೊನ್ನಯ್ಯ, ರಾಜ್ಯ ಕಮಿಟಿ ಸದಸ್ಯ ಕೋದಂಡರಾಮಯ್ಯ, ಜಿಲ್ಲಾಧ್ಯಕ್ಷ ಜಿ.ಗುರುಮೂರ್ತಿ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮಹಿಳಾ ಹೋರಾಟಗಾರ್ತಿ ಲಲಿತಮ್ಮ ಹಾಗೂ ಹಿರಿಯೂರು, ಭರಮಸಾಗರ, ಚಿತ್ರದುರ್ಗದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮತ್ತು ತಾಲ್ಲೂಕು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.











