ಚಿತ್ರದುರ್ಗ ಜುಲೈ 25:- ರಾಜ್ಯದಲ್ಲಿ ಬಹುತೇಕ ಜಲಾಶಯಗಳು ತಳಮಟ್ಟಕ್ಕೆ ಬಂದಿದ್ದು, ಶೇ. 80ರಷ್ಟು ಕೆರೆಗಳು ಬತ್ತಿ ಹೋಗಿವೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಇಂದು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚಿತ್ರದುರ್ಗ ಪ್ರವಾಸ ಕೈಗೊಂಡು, ಹಿರಿಯೂರು ತಾಲೂಕಿನಲ್ಲಿ ಬರ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ, ಬರ ಪರಿಸ್ಥಿತಿಯನ್ನು ಅವಲೋಕನ ನಡೆಸಿದರು.

ಬಳಿಕ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪ ಸಭಾಂಗಣದಲ್ಲಿ ನಡೆದ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಡಿಸಿಎಂ ಜಿ.ಪರಮೇಶ್ವರ ಅವರು ಮಾತನಾಡಿದರು.
ರಾಜ್ಯದಲ್ಲಿ ಬರದ ಗಂಭೀರತೆಯನ್ನು ನೋಡಿದರೆ ಮೊದಲನೆಯ ಕಷ್ಟ ಕುಡಿಯುವ ನೀರಿಗೆ ತೊಂದರೆ ಆಗಬಹುದು. ಜಲಾಶಯಗಳಲ್ಲಿ ಲಭ್ಯತೆ ಇರುವ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸುವಂತಿಲ್ಲ. ಕುಡಿಯುವ ನೀರಿಗೆ ಮಾತ್ರ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜನರಿಗೆ ಬರದ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದು ಹೇ.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ. ಇದನ್ನು ಅರ್ಥ ಮಾಡಿಕೊಂಡು ಮಾನ್ಯ ಮುಖ್ಯಮಂತ್ರಿಯವರು ಬೆಳಗಾವಿ ಮತ್ತು ಕಲಬುರ್ಗಿ ವಿಭಾಗದ ಪರಿಶೀಲನೆ ನಡೆಸಿ, ಪರಿಸ್ಥಿತಿಯನ್ನು ಅವಲೋಕನ ನಡೆಸಿದ್ದಾರೆ.
ನಾನು ಕಂದಾಯ ಸಚಿವನಾಗಿ ಅನೇಕ ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದೇನೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಮುಂತಾದ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿದ್ದೇನೆ. ಬೇರೆ ಜಿಲ್ಲೆಗಳಿಗೂ ಭೇಟಿ ನೀಡಿ ಅವಲೋಕನ ನಡೆಸುತ್ತೇನೆ ಎಂದು ಹೇಳಿದರು.
ನಮಗೆ ಕಾಣುತ್ತಿರುವ ಬರದ ಚಿತ್ರಣ ಬಹಳ ಗಂಭೀರವಾಗಿದೆ. ಜೂನ್‌ನಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾದರೂ ಎಲ್ಲ ಭಾಗದಲ್ಲಿ ಮಳೆಯಾಗಿಲ್ಲ. ರೈತರು ಬಿತ್ತನೆ ಮಾಡಿದ್ದಾರೆ. ಈವರೆಗೆ ಶೇ.42ಕ್ಕೂ ಹೆಚ್ಚು ಮಳೆ ಕೊರತೆಯಾಗಿದೆ. ಮಳೆ ಕೊರತೆ ಪ್ರಮಾಣ ಅಂಕಿ-ಅಂಶ ಜಿಲ್ಲೆಯಿಂದ ಜಿಲ್ಲೆಗೆ ಬೇರೆಬೇರೆ ಇದೆ. ಇದರಿಂದ ಕೃಷಿ ಚಟುವಟಿಕೆಗಳು ಎಲ್ಲ ಕಡೆ ನಿಂತು ಹೋಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿತ್ತನೆ ಶೇ. 2ರಷ್ಟು ಆಗಿದೆ. ಕೋಲಾರದಲ್ಲಿ ಶೇ. 1.5 ರಿಂದ 2ರಷ್ಟಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇ. 3 ಮತ್ತು 4ರಷ್ಟಾಗಿದ್ದು, ಕೆಲವು ಕಡೆ ಶೇ.10ರಷ್ಟು ಬಿತ್ತನೆಯಾಗಿದೆ. ಇಡೀ ರಾಜ್ಯದಲ್ಲಿ ಒಟ್ಟಾರೆ ಶೇ.15ರಷ್ಟು ಬೀಜ ಬಿತ್ತನೆಯಾಗಿದೆ ಎಂದು ವಿವರಿಸಿದರು.
ಫೆಸಿಫಿಕ್ ಸಾಗರದ ಮೇಲ್ಮೈ ಭಾಗದ ಉಷ್ಣಾಂಶ ಶೇ. 2ರಷ್ಟು ಹೆಚ್ಚಾಗುತ್ತದೆ. ಉಷ್ಣಾಂಶ ಹೆಚ್ಚಾಗುವುದರಿಂದ ಮಳೆ ಮೋಡಗಳು ಸೃಷ್ಟಿಯಾಗುವುದಿಲ್ಲ. ಕಳೆದ 75 ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದಾಗ 25 ಸಲ ಎಲ್ ನೀನೋ ಉಂಟಾಗಿದೆ. ಸಾಮಾನ್ಯವಾಗಿ ಸಮುದ್ರ ಮೇಲ್ಮೈ ಉಷ್ಣಾಂಶ 1 ಡಿಗ್ರಿಯಿಂದ 2 ಡಿಗ್ರಿವರೆಗೆ ಹೆಚ್ಚಾಗುತ್ತಿತ್ತು. ಈ ಬಾರಿ 2 ಡಿಗ್ರಿಯಿಂದ 3 ಡಿಗ್ರಿವರೆಗೆ ಹೆಚ್ಚಾಗಿದೆ. ಸೂಪರ್ ಎಲ್ ನೀನೋ ಉಂಟಾಗಿರುವ ಕಾರಣದಿಂದ ಪ್ರಪಂಚದ ಶೇ. 50ರಷ್ಟು ಭಾಗ ಬರದ ವಾತಾವರಣವನ್ನು ನೋಡುತ್ತಿದ್ದೇವೆ. ಕರ್ನಾಟಕವಷ್ಟೇ ಅಲ್ಲದೇ, ದೇಶದ ಎಲ್ಲ ರಾಜ್ಯಗಳಲ್ಲಿ ಬರ ಎದುರಾಗಿದೆ ಎಂದು ಮಾಹಿತಿ ನೀಡಿದರು.
ಯೂರೋಪ್ ರಾಷ್ಟ್ರಗಳಲ್ಲಿ 35 ರಿಂದ 40 ಡಿಗ್ರಿ ಉಷ್ಣಾಂಶ ಹೆಚ್ಚಾಗಿದೆ. ಇದರಿಂದ ಯುರೋಪ್ ದೇಶಗಳಲ್ಲಿ 5,000 ಜನ ಸಾವಿಗೀಡಾಗಿದ್ದಾರೆ. ಪ್ರಪಂಚದ ಅರ್ಧ ಭಾಗದಲ್ಲಿ 20 ಸಾವಿರ ಜನ ಮೃತಪಟ್ಟಿದ್ದಾರೆ. ಸೂಪರ್ ಎಲ್ ನೀನೋ ಗಂಭೀರತೆ ಎಷ್ಟಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಅನೇಕ ರಾಜ್ಯಗಳು ಒಣ ಹವೆ ಎದುರಿಸುತ್ತಿದ್ದಾರೆ. ರಾಜ್ಯದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಸ್ವಲ್ಪ ಮಳೆಬಿದ್ದಿದೆ. ಮಹಾರಾಷ್ಟ್ರದಲ್ಲಿ ಮಳೆ ಆಗಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ನೀರು ಬರುತ್ತಿದೆ ಎಂದರು.
ಎಲ್ಲ ಜಲಾಶಯಗಳು ತಳಮಟ್ಟಕ್ಕೆ ಬಂದಿವೆ. ರಾಜ್ಯದಲ್ಲಿ ಬರದ ಗಂಭೀರತೆಯನ್ನು ನೋಡಿದರೆ ಶೇ.80 ರಷ್ಟು ಕೆರೆಗಳು ಒಣಗಿ ಹೋಗಿವೆ. ಮೊದಲನೆಯದು ಕುಡಿಯುವ ನೀರಿಗೆ ತೊಂದರೆ ಆಗಬಹುದು. ಬೆಂಗಳೂರು ವಿಭಾಗದಲ್ಲಿ ಮಳೆಯ ಪ್ರಮಾಣ ನೋಡಿದಾಗ ಬೆಂಗಳೂರು ನಗರ ಜಿಲ್ಲೆ -28, ಬೆಂಗಳೂರು ಗ್ರಾಮಾಂತರ ಜಿಲ್ಲೆ -18, ರಾಮನಗರ -24, ಕೋಲಾರ -36, ಚಿಕ್ಕಬಳ್ಳಾಪುರ -28, ತುಮಕೂರು -18, ಚಿತ್ರದುರ್ಗ -28, ದಾವಣಗೆರೆ -48, ಶಿವಮೊಗ್ಗ -48 ರಷ್ಟು ಮಳೆ ಕೊರತೆಯಾಗಿದೆ. ಬೆಂಗಳೂರು ಕಂದಾಯ ವಿಭಾಗದಲ್ಲಿ ಒಟ್ಟು -37 ಮಳೆ ಕೊರತೆಯಾಗಿದೆ. ಈ ವರ್ಷ ನಮ್ಮ ರಾಜ್ಯ ಅತ್ಯಂತ ಗಂಭೀರವಾದ ಬರ ಪರಿಸ್ಥಿತಿಗೆ ತಲುಪಿದೆ ಎಂದು ವಾಸ್ತವದ ಬಗ್ಗೆ ವಿವರಿಸಿದರು.
ಈ ಸನ್ನಿವೇಶದಲ್ಲಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಬಂದಿದೆ. ಸರ್ಕಾರ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಅದೆಲ್ಲವನ್ನೂ ಮಾಡಿದೆ. ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ 5 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಹಣವನ್ನು ಈಗಾಗಲೇ ಜಿಲ್ಲಾಧಿಕಾರಿಗಳು ಖರ್ಚು ಮಾಡುತ್ತಿದ್ದಾರೆ. ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಲಕ್ಷಾಂತರ ದನ ಕರುಗಳಿವೆ. ಮೇವಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮುಂದಿನ 30 ವಾರ, 40 ವಾರಕ್ಕೆ ಆಗುವಷ್ಟು ಮೇವು ಸಂಗ್ರಹವಿದೆ ಎಂದು ಮಾಹಿತಿ ನೀಡಿದ್ದಾರೆ. ಸಂಗ್ರಹವಿರುವ ಮೇವು ಸರಿಯಾಗಿ ಉಪಯೋಗಕ್ಕೆ ಬರಬೇಕು. ಇಲ್ಲವಾದರೆ ಕಷ್ಟಕ್ಕೆ ಸಿಲುಕುತ್ತೇವೆ. ನೀರು ಲಭ್ಯ ಇರುವ ಪ್ರದೇಶದ ರೈತರಿಗೆ ಮೇವಿನ ಬೀಜದ ಕಿಟ್ ನೀಡುವಂತೆ ಪಶುಸಂಗೋಪನಾ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ. ಅದರ ಪ್ರಕಾರ ಬೀಜದ ಕಿಟ್ ವಿತರಿಸಲಾಗುತ್ತಿದೆ ಎಂದರು.
ಈ ಹಿಂದೆ ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾದಗ ಪಕ್ಕದ ರಾಜ್ಯದಿಂದ ಮೇವು ತರಿಸಲಾಗುತ್ತಿತ್ತು. ಮೇವು ಬ್ಯಾಂಕ್, ಗೋಶಾಲೆ ಮಾಡಲಾಗುತ್ತಿತ್ತು. ಆದರೆ ನೆರೆ ರಾಜ್ಯಗಳಲ್ಲೂ ಮಳೆ ಇಲ್ಲದೆ ಬರ ಬಿದ್ದಿದೆ. ಅಲ್ಲಿಂದಲೂ ಮೇವು ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.
ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ಯಾದಗಿರಿ ಭಾಗದ ಜಿಲ್ಲೆಗಳಲ್ಲಿ ಗುಳೆ ಹೋಗುತ್ತಿರುವ ಬಗ್ಗೆ ವರದಿ ಬರುತ್ತಿವೆ. ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಜನರಿಗೆ ಉದ್ಯೋಗ ನೀಡುವಂತೆ ಸೂಚಿಸಲಾಗಿದೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಯಾರು ಕೂಡ ಆತಂಕಕ್ಕೆ ಒಳಗಾಗುವುದು ಬೇಡ. ಗುಳೆ ಹೋಗುತ್ತಿರುವ ಊರುಗಳಲ್ಲಿ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಪ್ರತಿ ತಾಲ್ಲೂಕಿನಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಪ್ರತಿವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಭೆ ನಡೆಸುವಂತೆ ಡಿಸಿ, ಸಿಇಒಗಳಿಗೆ ಸೂಚನೆ ನೀಡಲಾಗಿದೆ. ಆಗ ಬರ ಪರಿಸ್ಥಿತಿ ಗಮನಕ್ಕೆ ಬರುತ್ತದೆ. ಬರದ ವಸ್ತುಸ್ಥಿತಿ ಏನೆಂಬುದು ಮತ್ತು ಬರ ಪರಿಸ್ಥಿತಿಯನ್ನು ಎದುರಿಸಲು ಆ್ಯಕ್ಷನ್ ಪ್ಲಾನ್ ರೂಪಿಸಲು ಅನುಕೂಲವಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ದಿನದಿನ ಬದಲಾಗುತ್ತಿರುತ್ತದೆ ಎಂದರು.
ಮುಂದುವರೆದು ಮಾತನಾಡಿ, ಬೆಂಗಳೂರು ಕಂದಾಯ ವಿಭಾಗದಲ್ಲಿ 13.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ, 1.74 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಶೇ 13ರಷ್ಟು ಬಿತ್ತನೆಯಾಗಿದೆ. ಬರ ಪರಿಸ್ಥಿತಿಯ ಕುರಿತು ನಾನು ಮತ್ತು ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ಪತ್ರ ಬರೆದಿದ್ದೇವೆ. ನಾನು ಕೇಂದ್ರದ ಗೃಹ ಸಚಿವರಿಗೆ ಮತ್ತು ಕೃಷಿ ಸಚಿವರಿಗೂ ಪತ್ರ ಬರೆದು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದೇನೆ. ಬರ ಘೋಷಣೆ ಮಾಡಲು 10 ನಿಯಮಗಳನ್ನು ರೂಪಿಸಿದ್ದಾರೆ. ಈ ನಿಯಮಗಳನ್ನು ಸಡಿಲಿಕೆ ಮಾಡುವಂತೆ ಒತ್ತಾಯಿಸಲಾಗಿದೆ. ಬರ ಪರಿಸ್ಥಿತಿಯ ಕುರಿತು ಆಗಸ್ಟ್ 15ವರೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆಗಸ್ಟ್ ನಂತರ ಮಳೆ ಬಂದರೆ ಚಿತ್ರಣ ಬದಲಾಗಲಿದೆ. ಹೀಗಾಗಿ ಕೇಂದ್ರಕ್ಕೆ ವರದಿ ನೀಡಲು ವಿಳಂಬವಾಗಲಿದೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಿ. ವೀರಣ್ಣ ಅವರ ಅಗಲಿಕೆಗೆ ಸಂತಾಪ ಸೂಚಿಸಿದರು. ಅನೇಕ ಪ್ರಗತಿಪರ ಕೆಲಸಗಳನ್ನು ಮಾಡಿ ನಮ್ಮನ್ನು ಅಗಲಿರುವ ವೀರಣ್ಣ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರ ಮುಂತಾದವರು ಉಪಸ್ಥಿತರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













