ಬೆಂಗಳೂರು: ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳು ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ, ಮಾರ್ಗದರ್ಶನ ಹಾಗೂ ಉಸ್ತುವಾರಿಗಾಗಿ ಹೊಸದಾಗಿ ‘ಜಿಲ್ಲಾ ನೋಡಲ್ ಅಧಿಕಾರಿಗಳನ್ನು’ ನಿಯೋಜಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಮಹತ್ವದ ಅಧಿಕೃತ ಆದೇಶ ಹೊರಡಿಸಿದೆ.
ಇಲಾಖೆಯ ಕೆಲವು ಅಧಿಕಾರಿಗಳ ವರ್ಗಾವಣೆ ಹಾಗೂ ನಿವೃತ್ತಿಯ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಆಯುಕ್ತಾಲಯದ ಉಪನಿರ್ದೇಶಕರು, ಹಿರಿಯ ತಜ್ಞರು ಮತ್ತು ಕಾರ್ಯಕ್ರಮ ಅಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಪ್ರತಿ ತಿಂಗಳು ಕಡ್ಡಾಯ ಜಿಲ್ಲಾ ಭೇಟಿ ಮತ್ತು ವರದಿ ಸಲ್ಲಿಕೆ:
ಆದೇಶದ ಪ್ರಕಾರ, ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳು ಆರೋಗ್ಯ ಇಲಾಖೆಯ ಆಯುಕ್ತರ ಪೂರ್ವಾನುಮತಿ ಪಡೆದು ಪ್ರತಿ ತಿಂಗಳು ಕಡ್ಡಾಯವಾಗಿ ಎರಡು ಬಾರಿ ತಮಗೆ ಹಂಚಿಕೆಯಾದ ಜಿಲ್ಲೆಗಳಿಗೆ ಭೇಟಿ ನೀಡಬೇಕಾಗಿದೆ. ತುರ್ತು ಸಂದರ್ಭಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿಯೂ ಭೇಟಿ ನೀಡಲು ಸೂಚಿಸಲಾಗಿದೆ.
ಜಿಲ್ಲಾ ಭೇಟಿಯ ಸಂದರ್ಭದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಹಾಗೂ ಆಡಳಿತಾತ್ಮಕ ವಿಷಯಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ಪ್ರವಾಸ ಮುಗಿದ ತಕ್ಷಣವೇ ಪ್ರವಾಸದ ನಂತರದ ಪರಿಶೀಲನಾ ವರದಿಯನ್ನು (Tour Report) ನಿಗದಿತ ಇ-ಮೇಲ್ ಮುಖಾಂತರ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಪ್ರಗತಿ ಪರಿಶೀಲನಾ ಸಭೆಗೆ ಹಾಜರಾತಿ ಕಡ್ಡಾಯ:
ಉಪನಿರ್ದೇಶಕರು (ಆರೋಗ್ಯ ಮತ್ತು ಯೋಜನೆ-2) ಇವರಿಂದ ಕ್ರೋಢೀಕರಿಸಲ್ಪಟ್ಟ ವರದಿಯ ಸಾರಾಂಶವನ್ನು ಆಯುಕ್ತರು ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಭಿಯಾನ ನಿರ್ದೇಶಕರಿಗೆ ಸಲ್ಲಿಸಲಾಗುತ್ತದೆ. ಆಯುಕ್ತರು ಮತ್ತು ಅಭಿಯಾನ ನಿರ್ದೇಶಕರ ಜಂಟಿ ಅಧ್ಯಕ್ಷತೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ನಡೆಯುವ ಪ್ರಗತಿ ಪರಿಶೀಲನಾ ಸಭೆಗೆ ಎಲ್ಲಾ ನೋಡಲ್ ಅಧಿಕಾರಿಗಳು ಅಗತ್ಯ ಮಾಹಿತಿ ಮತ್ತು ಚೆಕ್‌ಲಿಸ್ಟ್‌ನೊಂದಿಗೆ ತಪ್ಪದೇ ಹಾಜರಾಗಬೇಕು ಎಂದು ಆದೇಶದಲ್ಲಿ ಕಠಿಣ ಸೂಚನೆ ನೀಡಲಾಗಿದೆ.
ಜಿಲ್ಲಾವಾರು ನಿಯೋಜನೆಗೊಂಡ ಪ್ರಮುಖ ಅಧಿಕಾರಿಗಳ ವಿವರ:
ಒಟ್ಟು 34 ಜಿಲ್ಲೆ/ಉಪವಿಭಾಗಗಳಿಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅವರಲ್ಲಿ ಕೆಲವು ಪ್ರಮುಖರು ಈ ಕೆಳಗಿನಂತಿದ್ದಾರೆ:

ಬೆಂಗಳೂರು ನಗರ: ಡಾ|| ಚಂದ್ರಮೋಹನ್ (ತರಬೇತಿ ಅಧಿಕಾರಿಗಳು, HET)
ಬೆಂಗಳೂರು ಗ್ರಾಮಾಂತರ: ಡಾ|| ವಿವೇಕ್ ದೊರೆ (ಉಪನಿರ್ದೇಶಕರು, ವೈದ್ಯಕೀಯ-2)
ಚಿತ್ರದುರ್ಗ: ಡಾ|| ಗೀತಾ ವಿ ಮಕ್ಕಣ್ಣವರ್ (ಉಪನಿರ್ದೇಶಕರು, KSAPS)
ದಾವಣಗೆರೆ: ಡಾ|| ಚಂದು ಶೇಖರ್ ಬಿ (ಹಿರಿಯ ತಜ್ಞರು)
ಶಿವಮೊಗ್ಗ: ಡಾ|| ರಘುನಂದನ್ (ಉಪನಿರ್ದೇಶಕರು, ಡಯಾಲಿಸಿಸ್)
ರಾಮನಗರ: ಡಾ|| ನಾಗಮೂರ್ತಿ (ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿ)
ದಕ್ಷಿಣ ಕನ್ನಡ: ಡಾ|| ಸುರೇಶ್ ಶಾಸ್ತ್ರಿ (ಉಪನಿರ್ದೇಶಕರು, IEC)
ಮೈಸೂರು: ಡಾ|| ಪ್ರಭುದೇವ ಗೌಡ (ಉಪನಿರ್ದೇಶಕರು, ಆಶಾ & EMS)
ಬೆಳಗಾವಿ: ಡಾ|| ಶಶಿಕಲಾ (ಉಪನಿರ್ದೇಶಕರು, State Blood Cell)
ತುಮಕೂರು: ಡಾ|| ಅನಿಲ್ ಎಸ್ (ಉಪನಿರ್ದೇಶಕರು, ಕ್ಷಯ)
ಉಡುಪಿ: ಡಾ|| ಮಮತ ಎಂ.ಎಸ್ (ಉಪನಿರ್ದೇಶಕರು ಹಾಗೂ ಪ್ರಭಾರಿ ಜಂಟಿ ನಿರ್ದೇಶಕರು)
(ಉಳಿದಂತೆ ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ, ಕೊಪ್ಪಳ, ಬಳ್ಳಾರಿ, ವಿಜಯನಗರ, ಧಾರವಾಡ ಸೇರಿದಂತೆ ರಾಜ್ಯದ ಒಟ್ಟು 34 ಕ್ಷೇತ್ರಗಳಿಗೆ ಪ್ರತ್ಯೇಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.)
ಈ ಆದೇಶದ ಪ್ರತಿಯನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ), ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು, ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು (DHO) ಹಾಗೂ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳ ಮಾಹಿತಿಗಾಗಿ ರವಾನಿಸಲಾಗಿದೆ. ಈ ನೂತನ ವ್ಯವಸ್ಥೆಯಿಂದಾಗಿ ಗ್ರಾಮೀಣ ಹಾಗೂ ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಸೇವೆಗಳ ಗುಣಮಟ್ಟ ಮತ್ತಷ್ಟು ಸುಧಾರಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










