ಬೆಂಗಳೂರು: ಅಮೃತಧಾರೆ ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದ ನಟಿ ಶೃತಿ ಈಗ ಆಸ್ಪತ್ರೆಯಲ್ಲಿದ್ದಾರೆ. ಗಂಡನೇ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಹನುಮಂತ ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಹೊಟ್ಟೆ, ಕುತ್ತಿಗೆ ಭಾಗಕ್ಕೆ ಚಾಕು ಇರಿದಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಜುಳಾ ಅಲಿಯಾಸ್ ಶೃತಿ ಕಳೆದ 20 ವರ್ಷಗಳ ಹಿಂದೆ ಅಮರೇಶ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹನುಮಂತ ನಗರದಲ್ಲಿಯೇ ಮನೆ ಲೀಸ್ ಗೆ ಪಡೆದು ವಾಸವಿದ್ದರು. ಶೃತಿ ನಡವಳಿಕೆ ಅಮರೇಶ್ ಗೆ ಇಷ್ಟವಾಗುತ್ತಿರಲಿಲ್ಲವಂತೆ. ಆಗಾಗ ಇಬ್ಬರ ನಡುವೆ ಸಾಕಷ್ಟು ಜಗಳ ಆಗ್ತಾ ಇತ್ತಂತೆ. ಹೀಗಾಗಿ ಕಳೆದ ಏಪ್ರಿಲ್ ನಿಂದ ನಟಿ ಶೃತಿ, ಗಂಡನ ಮನೆ ತೊರೆದು ಅಣದಣನ ಮನೆಯಲ್ಲಿ ವಾಸವಾಗಿದ್ದರಂತೆ.
ಇದೆ ವೇಳೆ ಮನೆಯ ಲೀಸ್ ಹಣಕ್ಕಾಗಿ ಇಬ್ಬರ ನಡುವೆ ಜೋರು ಜಗಳವಾಗುತ್ತಿತ್ತಂತೆ. ಈ ಸಂಬಂಧ ಶೃತಿ ಹನುಮಂತ ನಗರ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದರಂತೆ. ಆಗ ರಾಜಿ ಸಂಧಾನದ ಮೂಲಕ ಮತ್ತೆ ಹೊಂದಾಗಿದ್ದರು ಗಂಡ ಹೆಂಡತಿ. ಇಂದು ಮಕ್ಕಳು ಕಾಲೇಜಿಗೆ ಹೋದ ಬಳಿಕ ಹೆಂಡತಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ, ಚಾಕುವಿನಿಂದ ಇರಿದಿದ್ದಾನೆ. ತಲೆಯನ್ನ ಗೋಡೆಗೆ ಗುದ್ದಿ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಸದ್ಯ ನಟಿ ಶೃತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









