ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜ. 11 : ಮಹಾತ್ಮ ಗಾಂಧಿಯ ಹೆಸರಿನಲ್ಲಿ ಈಗ ಇರುವವರೆಲ್ಲಾ ನಕಲಿ ಗಾಂಧಿಗಳು, ಇವರು ಮಹಾತ್ಮ ಗಾಂಧಿಯವರ ಹೆಸರನ್ನು ಉಳಿಸಲಿಕ್ಕೆ ಅಲ್ಲ ಅಳಿಸಲಿಕ್ಕೆ ಇದ್ದಾರೆ, ಮಹಾತ್ಮ ಗಾಂಧಿಯರಿಗೂ ಇವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ನಕಲಿ ಗಾಂಧಿಗಳ ಬಗ್ಗೆ ಕಿಡಿ ಕಾರಿದರು.
ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿಯವರು ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಸಮಯದಲ್ಲಿ ದೇಶವು ಸ್ವರಾಜ್ಯ ಮತ್ತು ಗ್ರಾಮ ಅಭಿವೃದ್ಧಿಯಾಗಬೇಕೆಂಬ ಕನಸು ಕಂಡಿದ್ದರು. ಅದನ್ನು ಇಂದಿನ ಪ್ರಧಾನಿಗಳಾದ ನರೇಂದ್ರ ಮೋದಿಜೀಯವರು ಸಕಾರ ಮಾಡಲು ಮುಂದಾಗಿದ್ದಾರೆ ಆದರೆ ಇದನ್ನು ಸಹಿಸದ ಕಾಂಗ್ರೆಸ್ ನವರು ವಿನಹ ಕಾರಣ ಮೋದಿಜೀಯವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಈಗ ಕಾಂಗ್ರೆಸ್ನಲ್ಲಿ ಇರುವಂತಹ ಗಾಂಧಿಗಳು ಎಲ್ಲಾ ನಕಲಿ ಗಾಂಧಿಗಳಾಗಿದ್ದಾರೆ… ಇವರು ಯಾರು ಸಹ ಗಾಂಧೀಜಿಯವರ ವಂಶಸ್ಥರಲ್ಲ.ಗಾಂಧೀಜಿಯವರ ಹೆಸರಿನ ಮೇಲೆ ರಾಜಕೀಯ ಮಾಡುತ್ತಾ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ.ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರಿನಲ್ಲಿ ಹಲವಾರು ಯೋಜನೆ ಗಳನ್ನು ಸ್ಥಾಪಿಸಿಕೊಂಡಿದ್ದಾರೆ.ಇದರಲ್ಲಿ ಮಹಾತ್ಮ ಗಾಂಧೀಜಿಯವರ ನೆನಪು ಸಹ ಇಲ್ಲ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಈ ಯೋಜನೆ ಕಾಂಗ್ರೆಸ್ ನವರಿಗೆ ನುಂಗಲಾರದ ತುತ್ತಾಗಿದೆ ಏಕೆಂದರೆ ಕೇಂದ್ರ ಸರ್ಕಾರ ಈ ಯೋಜನೆಗೆ ಹಣವನ್ನು ನೀಡುತ್ತಿದೆ.. ಅದರ ಬಳಕೆಯಾದ ಮೇಲೆ ಅದಕ್ಕೆ ಸಂಬಂಧ ಪಟ್ಟ ಲೆಕ್ಕಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು ಆದರೆ ಇದುವರೆಗೂ ಸಹ ಲೆಕ್ಕವನ್ನು ನೀಡದೇ ನಕಲಿ ಬಿಲ್ಲುಗಳನ್ನು ತಯಾರಿಸಿಕೊಂಡು ಹಣವನ್ನು ಲೂಟಿ ಮಾಡುತ್ತಿದ್ದಾರೆ ಇದರಿಂದ ಗ್ರಾಮದ ಜನತೆಗಾಗಲೀ ಅಥವಾ ಗ್ರಾಮಕ್ಕಾಗಲೀ ಯಾವುದೇ ಉಪಯೋಗವಾಗುತ್ತಿಲ್ಲ.ಈ ಹಿನ್ನಲೆಯಲ್ಲಿ ಯೋಜನೆಗೆ ಸ್ವಲ್ಪ ಮಾರ್ಪಾಡನ್ನು ತಂದು ಜಾರಿ ಮಾಡಲಾಗುತ್ತಿದೆ ಎಂದರು.
ಕೇಂದ್ರದಲ್ಲಿ ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಕಾಂಗ್ರೆಸ್ನ ಹಲವು ಮುಖಂಡರುಗಳು ಈ ಯೋಜನೆಯ ಹೆಸರಿನಲ್ಲಿ ಹಣವನ್ನು ಲೂಟಿ ಮಾಡಿದ್ದಾರೆ ಈಗ ಈ ರೀತಿಯಾಗಿ ಹಣ ಲೂಟಿ ಮಾಡಲು ಆಗುವುದಿಲ್ಲ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ಮಾಡುವುದರ ಮೂಲಕ ಆ ಗ್ರಾಮಕ್ಕೆ ಅಗತ್ಯವಾಗಿ ಬೇಕಾದಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಪ್ರತಿಯೊಂದು ಹಂತದಲ್ಲೂ ಸಹ ಡಿಜಿಟಲೀಕರಣ ಮಾಡಲಾಗುತ್ತದೆ. ಇದರಿಂದಾಗಿ ನಕಲಿಬಿಲ್ಲು ಅಥವಾ ಹಣವನ್ನು ಲಪಟಾಯಿಸಲು ಆಗುವುದಿಲ್ಲ.ಇದರಿಂದ ಈ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಂಸದರು ತಿಳಿಸಿದರು.
ಈ ಹಿಂದೆ 100 ದಿನಕ್ಕೆ ಇದ್ದ ಕೂಲಿ ದಿನಗಳನ್ನು 125 ದಿನಕ್ಕೆ ಹೆಚ್ಚಳ ಮಾಡಲಾಗಿದೆ.ಇದಲ್ಲದೇ ಕೂಲಿಯ ಮೊತ್ತವನ್ನು ಸಹ ಹೆಚ್ಚಳ ಮಾಡಲಾಗಿದೆ.ಕೂಲಿ ಕೆಲಸ ಮಾಡಿದವರಿಗೆ ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ವಾರದ ಕೊನೆಯಲ್ಲಿ ಕೂಲಿಯ ಹಣ ಅವರ ಖಾತೆಗೆ ಜಮಾವಣೆ ಆಗಲಿದೆ.ಒಂದು ಕಾಮಗಾರಿಯನ್ನು ಕೈಗೆತ್ತಿಕೊಂಡರೆ ಅದು ಪೂರ್ಣಗೊಳ್ಳುವವರೆಗೂ ನಿಲ್ಲುವುದಿಲ್ಲ… ಈ ವಿಷಯವನ್ನು ಗ್ರಾಮೀಣ ಮಟ್ಟಕ್ಕೆ ತೆಗೆದುಕೊಂಡು ಹೋಗಿ ತಿಳಿಸಲಾಗುವುದು ಎಂದರು.
ದೇಶದಲ್ಲಿ ನಕಲಿ ಗಾಂಧಿಗಳ ಹುನ್ನಾರವನ್ನು ಯಾವುದೇ ಕಾರಣಕ್ಕೂ ಹೊರಗೆಳೆಯದೇ ಬಿಡುವುದಿಲ್ಲ.. ಯುಪಿಎ ಸರ್ಕಾರ ಇದ್ದಾಗ ಗಾಂಧೀಜಿಯವರು ವಾಸವಾಗಿದ್ದ ಶಬರಿಮತಿ ಆಶ್ರಮಕ್ಕೆ ಸಂಬಂಧಪಟ್ಟಂತೆ ಕಾರ್ಪೊರೇಷನ್ನ್ನು ಪ್ರಾರಂಭಿಸಿದ್ದರು ಆದರೆ ಅದಕ್ಕೆ ಯಾವುದೇ ರೀತಿಯಾದಂತಹ ಮೂಲಭೂತ ಸೌಕರ್ಯಗಳನ್ನಾಗಲೀ.ಅನುದಾನವನ್ನಾಗಲಿ ನೀಡಲಿಲ್ಲ.ಆದರೆ ಮೋದಿಜೀಯವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ಈ ಆಶ್ರಮದ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಅದನ್ನು ಪ್ರವಾಸಿ ತಾಣವನ್ನಾಗಿ ಮಾಡಿದ್ದಲ್ಲದೇ ಪಕ್ಕದಲ್ಲಿ ಹರಿಯುವ ನದಿಯ ನೀರನ್ನು ಸ್ವಚ್ಛಗೊಳಿಸಿ ವರ್ಷದ 12 ತಿಂಗಳು ಸಹ ನೀರು ಹರಿಯುವಂತೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ತೋರಿಕೆಗೆ ಮಾತ್ರ ಮಹಾತ್ಮ ಗಾಂಧಿಯವರನ್ನ ಬಳಸಿಕೊಳ್ಳುತಿದೆ. ನಿಜವಾಗಿಯೂ ಅವರಿಗೆ ಮಹಾತ್ಮ ಗಾಂಧೀಜಿಯವರ ಬಗ್ಗೆ ಕಾಳಜಿ ಇಲ್ಲ. ಕಾಳಜಿ ಇರುವುದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಮೇಲೆ ಮಾತ್ರ.. ಇದನ್ನು ಜನತೆ ತಿಳಿಯಬೇಕಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ತಿಳಿಸಿದ ಅವರು ಇವತ್ತು ನರೇಂದ್ರ ಮೋದಿಜೀ ಅವರು ತಮ ಹೆಸರನ್ನು ಒಂದೇ ಒಂದು ಸಂಸ್ಥೆಗಾಗಲೀ, ಯೋಜನೆಗಾಗಲೀ ಇಟ್ಟುಕೊಂಡಿಲ್ಲ. ಸರಕಾರದ ಹೆಸರೇ ಇದೆ. ನರೇಂದ್ರಮೋದಿಜೀ ಅವರು ವಿಕಸಿತ ಭಾರತ-ಕ್ಕೆ ಪೂರಕ ವಿಬಿ-ಜಿ ರಾಮ್ ಜಿ ಎಂಬ ಯೋಜನೆ ಜಾರಿಗೊಳಿಸಿ, ಭ್ರಷ್ಟಾಚಾರ ತಡೆ, ಆಸ್ತಿ ನಿರ್ಮಾಣ, ಗ್ರಾಮೀಣ ನಿಜವಾದ ಬಡವರಿಗೆ ಕೂಲಿ ಕೆಲಸ ಕೊಡಲು ಅನುಕೂಲ ಆಗುವ ಇದೊಂದು ಹೊಸ ವ್ಯವಸ್ಥೆ ತಂದಿದ್ದಾರೆ. ನರೇಗಾದಲ್ಲಿ ಯಾವುದಕ್ಕೂ ಹೊಣೆಗಾರಿಕೆ ಇರಲಿಲ್ಲ. ಇವತ್ತು ಲೆಕ್ಕ ಕೊಡಬೇಕಲ್ಲವೇ ಎಂಬುದು ಕಾಂಗ್ರೆಸ್ಸಿಗರ ಹೊಟ್ಟೆ ಉರಿ ವಿಮಾನ ನಿಲ್ದಾಣ, ಬಂದರುಗಳಿಗೆ ಇಂದಿರಾಗಾಂಧಿ, ರಾಹುಲ್ ಗಾಂಧಿ, ರಾಜೀವ್ ಗಾಂಧಿ ಹೆಸರು ಇಟ್ಟುಕೊಂಡು ಕುಳಿತಿದ್ದಾರಲ್ಲವೇ? ಇವರಿಗೆ ಮಹಾತ್ಮ ಗಾಂಧಿ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ವಿಬಿ-ಜಿ ರಾಮ್ ಜಿ ವಾಸ್ತವದಲ್ಲಿ ನರೇಗಾಗಿಂತ ‘ವಿಬಿ-ಜಿರಾಮ್ ಜಿ’ ಒಂದು ಉತ್ತಮ ಯೋಜನೆಯಾಗಿದೆ. ನರೇಗಾ ವ್ಯವಸ್ಥಿತವಾಗಿ ಲೂಟಿ ಮಾಡುವ ಯೋಜನೆಯಾಗಿತ್ತು. ಹೀಗಾಗಿ ಸರ್ಕಾರದ ಪ್ರತಿಯೊಂದು ಪೈಸೆಯೂ ಸದ್ಬಳಕೆಯಾಗಬೇಕು ಮತ್ತು ಆಯಾ ಗ್ರಾಮಗಳಲ್ಲಿ ಶಾಶ್ವತ ಆಸ್ತಿ ನಿರ್ಮಾಣ ಆಗಬೇಕೆಂಬುದೇ ಪ್ರಧಾನಿ ಮೋದಿ ಅವರ ಉದ್ದೇಶ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ, ಖಂಜಾಚಿ ಮಾಧುರಿ ಗೀರಿಶ್, ಮಾಜಿ ಅಧ್ಯಕ್ಷರಾಧ ಎ.ಮುರಳಿ, ಮುಖಂಡರಾದ ಅನಿತ್ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ನಗರಾಧ್ಯಕ್ಷ ಲೋಕೇಶ್ ಸೇರಿದಂತೆ ಇತರರತು ಭಾಗವಹಿಸಿದ್ದರು.
















