ವಿಶೇಷ ವರದಿ: ಬೋರೇಶ ಎಂ.ಜೆ ಬಚ್ಚಬೋರನಹಟ್ಟಿ
ಚಿತ್ರದುರ್ಗ, ಮೊ : 99163 46546
ಸುದ್ದಿಒನ್, ಚಿತ್ರದುರ್ಗ, ಜುಲೈ. 01 : “ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ಊರೆಲ್ಲಾ ಹುಡುಕಿದರು”, “ಹಿತ್ತಲ ಗಿಡ ಮದ್ದಲ್ಲ” ಎಂಬ ಮಾತುಗಳು ನಮ್ಮ ಚಿತ್ರದುರ್ಗದ ನೆಲಕ್ಕೆ ಅನ್ವಯಿಸುವಂತಿದೆ. ಈ ಕೋಟೆನಾಡಿನ ಜನ ನೆರೆಹೊರೆಯವರನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ಹೃದಯವಂತರೇನೋ ಹೌದು, ಆದರೆ ನಮ್ಮದೇ ನೆಲದ ಪ್ರತಿಭೆಗಳನ್ನು ಗುರುತಿಸುವಲ್ಲಿ ಎಲ್ಲೋ ಒಂದು ಕಡೆ ಹಿಂದೆ ಬಿದ್ದಿದ್ದೇವಾ ಅನಿಸದಿರದು. ಅದಕ್ಕೆ ಸಾಕ್ಷಿ ಎಂಬಂತೆ, ನಮ್ಮೊಂದಿಗೆ ಸದಾ ಹೆಜ್ಜೆ ಹಾಕುವ ಕೆ.ಪಿ.ಓಂಕಾರಮೂರ್ತಿ ಅವರೊಳಗೊಬ್ಬ ಅದ್ಭುತ ಕಥೆಗಾರನಿದ್ದಾನೆ ಎಂಬುದನ್ನು ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಇಡೀ ರಾಜ್ಯಕ್ಕೆ ಪರಿಚಯಿಸಿಕೊಟ್ಟಿದೆ.
ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸದ್ಯ ಚಿತ್ರದುರ್ಗದ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಸಹಾಯಕ ವರದಿಗಾರರಾಗಿರುವ ಕೆ.ಪಿ.ಓಂಕಾರಮೂರ್ತಿ ಅವರು ಸುದ್ದಿಮನೆಯ ದಿನನಿತ್ಯದ ‘ಡೆಡ್‌ಲೈನ್’ ಕರೆಗಂಟೆಯನ್ನೇ ವಸ್ತುವಾಗಿಸಿಕೊಂಡು ಬರೆದ ಕಥೆ ಈಗ ರಾಜ್ಯಮಟ್ಟದಲ್ಲಿ ಸದ್ದು ಮಾಡಿದೆ.
ರಾಯಚೂರು ರಿಪೋರ್ಟರ್ಸ್ ಗಿಲ್ಡ್‌ನ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಇವರ ‘ಡೆಡ್‌ಲೈನ್’ ಕಥೆಗೆ ಪ್ರಥಮ ಬಹುಮಾನ ಒಲಿದಿದ್ದು, 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಲಭಿಸಿದೆ. ಈ ಮೂಲಕ ಮಧ್ಯ ಕರ್ನಾಟಕದ ಪತ್ರಿಕಾ ವಲಯದಲ್ಲಿ ಓಂಕಾರಮೂರ್ತಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.
ಮೂಲತಃ ಕೋಟೆನಾಡು ಚಿತ್ರದುರ್ಗದವರಾದ ಕೆ.ಪಿ. ಓಂಕಾರಮೂರ್ತಿ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಯುವ ಪತ್ರಕರ್ತರಾಗಿದ್ದಾರೆ. ಮೈಸೂರಿನ ಪ್ರಸಿದ್ಧ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪೂರೈಸಿದ ಇವರು, ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಅತ್ಯಂತ ಪ್ರತಿಭಾವಂತರಾಗಿದ್ದ ಓಂಕಾರಮೂರ್ತಿ ಅವರು, ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾಧನೆಗಾಗಿ ಪ್ರತಿಷ್ಠಿತ ‘ಸಂಪೆಮನೆ ಕೃಷ್ಣಮೂರ್ತಿ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದರು. ಕಾಲೇಜು ದಿನಗಳಲ್ಲಿ ವಿವಿಧ ಪತ್ರಿಕೋದ್ಯಮ ಹಾಗೂ ಸಾಹಿತ್ಯಕ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಹೆಗ್ಗಳಿಕೆ ಇವರದ್ದಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ಬರವಣಿಗೆಯ ತೀವ್ರ ನಂಟು ಹೊಂದಿದ್ದ ಇವರು ‘ಉದಯವಾಣಿ’ ಸೇರಿದಂತೆ ನಾಡಿನ ಪ್ರಮುಖ ದಿನಪತ್ರಿಕೆಗಳಿಗೆ ನಿಯಮಿತವಾಗಿ ವೈಚಾರಿಕ ಹಾಗೂ ಪ್ರಚಲಿತ ವಿದ್ಯಮಾನಗಳ ಲೇಖನಗಳನ್ನು ಬರೆಯುತ್ತಿದ್ದರು. ಪ್ರಸ್ತುತ ಚಿತ್ರದುರ್ಗದ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಸಹಾಯಕ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಓಂಕಾರಮೂರ್ತಿ ಅವರು, ವೃತ್ತಿಪರ ವರದಿಗಾರಿಕೆಯ ಜೊತೆಗೆ ಸೃಜನಶೀಲ ಸಾಹಿತ್ಯ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ.
ಎನ್. ಗೌರಿಪುರದಿಂದ ಸುದ್ದಿಮನೆಯವರೆಗೆ….
ನಾಯಕನಹಟ್ಟಿ ಸಮೀಪದ ಎನ್. ಗೌರಿಪುರದ ಮಣ್ಣಿನಲ್ಲಿ ಹುಟ್ಟಿ ಅಕ್ಷರದ ಬೆನ್ನತ್ತಿದ ಓಂಕಾರಮೂರ್ತಿ ಅವರ ಪತ್ರಿಕೋದ್ಯಮದ ಪಯಣವೇ ಒಂದು ರೋಚಕ ಕಾದಂಬರಿಯಂತಿದೆ. ಚಿತ್ರದುರ್ಗದ ‘ಪ್ರಜಾಪ್ರಗತಿ’ ಪತ್ರಿಕೆಯಿಂದ ವೃತ್ತಿ ಬದುಕು ಆರಂಭಿಸಿದ ಅವರು, ನಂತರ ಮೈಸೂರು, ಚಿತ್ರದುರ್ಗ ಮತ್ತು ದಾವಣಗೆರೆ, ಬೆಂಗಳೂರಿನಲ್ಲಿ ‘ವಿಜಯವಾಣಿ’, ದಾವಣಗೆರೆಯಲ್ಲಿ ಕೆಲ ತಿಂಗಳು ‘ವಿಜಯಕರ್ನಾಟಕ’ ಪತ್ರಿಕೆಗಳ ವರದಿಗಾರರಾಗಿ ಜನಮೆಚ್ಚುಗೆ ಗಳಿಸಿದ್ದರು.
ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದಿಂದ ತೀವ್ರ ಪ್ರಭಾವಿತರಾಗಿರುವ ಓಂಕಾರಮೂರ್ತಿ ಅವರಿಗೆ ‘ಕರ್ವಾಲೊ’ ಮತ್ತು ‘ಜುಗಾರಿ ಕ್ರಾಸ್’ ಕೈಬಿಡದ ಸಂಗಾತಿಗಳು. ತೇಜಸ್ವಿಯವರಂತೆ ನೇರ, ನಿಷ್ಠುರ ಹಾಗೂ ಸರಳ ನಿರೂಪಣೆಯ ಮೂಲಕ ವರದಿಗಳನ್ನು ಕಟ್ಟುವುದು ಇವರ ಶೈಲಿ. ಮಾನವೀಯತೆಯೇ ಇವರ ಇಡೀ ವರದಿಗಾರಿಕೆಯ ಜೀವಾಳ.
ಪತ್ರಿಕೋದ್ಯಮದ ಬಿಡುವಿಲ್ಲದ ಕೆಲಸಗಳ ನಡುವೆಯೂ ಸದಾ ಪುಸ್ತಕದೊಳಗೆ ಮುಳುಗಿರುವ ಇವರನ್ನು ನೋಡಿದರೆ ‘ನಡೆಯುವ ಗ್ರಂಥಾಲಯ’ ಎಂದೇ ಅನ್ನಿಸುತ್ತದೆ. ಈ ನಿರಂತರ ಓದು-ಬರಹವೇ ಇವರನ್ನು ಸಾಹಿತ್ಯ ವಲಯದಲ್ಲಿ ಗುರುತಿಸುವಂತೆ ಮಾಡಿದೆ.
ಸುದ್ದಿಮನೆಯ ಅಂತರಂಗದ ಧ್ವನಿ:
ಪ್ರಶಸ್ತಿ ಗೆದ್ದ ‘ಡೆಡ್‌ಲೈನ್’ ಕಥೆಯು ಸುದ್ದಿಮನೆಯೊಳಗಿನ ವರದಿಗಾರ ಎದುರಿಸುವ ಮಾನಸಿಕ ತುಮುಲಗಳು, ಸತ್ಯ ಮತ್ತು ಸುಳ್ಳಿನ ನಡುವಿನ ಸಂಘರ್ಷ ಹಾಗೂ ಸಂಪಾದಕೀಯ ಒತ್ತಡಗಳ ನಡುವೆ ಸಿಕ್ಕಿಬಿದ್ದ ಪತ್ರಕರ್ತನ ಅಂತರಂಗದ ದನಿಯನ್ನು ಕಣ್ಣಿಗೆ ಕಟ್ಟುವಂತೆ ದಾಖಲಿಸಿದೆ. ಸ್ಪರ್ಧೆಯ ತೀರ್ಪುಗಾರರಾಗಿದ್ದ ಕಥೆಗಾರ ಮಹಾಂತೇಶ ನವಲಕಲ್ ಅವರು, “ವರದಿಗಾರಿಕೆಯ ಒಳಸುಳಿಗಳನ್ನು ಕಥೆಯಾಗಿಸಿರುವ ಪರಿ ಅನನ್ಯ” ಎಂದು ಮುಕ್ತಕಂಠದಿಂದ ಮೆಚ್ಚಿಕೊಂಡಿದ್ದಾರೆ.
ಇನ್ನು ಕವನ ವಿಭಾಗದಲ್ಲಿ ಮೈಸೂರಿನ ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿಗಾರ ಎಂ.ಶ್ರೀನಿವಾಸ ಅವರ ‘ಮುಸ್ಸಂಜೆ’ ಕವನ ಪ್ರಥಮ ಸ್ಥಾನ ಪಡೆದಿದೆ. ಆಗಸ್ಟ್ ಕೊನೆಯ ವಾರದಲ್ಲಿ ರಾಯಚೂರಿನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ವಿತರಿಸಲಾಗುವುದು.
ಚಿತ್ರದುರ್ಗದ ಚಳ್ಳಕೆರೆ ಗೇಟ್ ಸಮೀಪ ಒಂದೇ ಕುಟುಂಬದ ಐವರ ಅಸ್ಥಿಪಂಜರ ಪತ್ತೆಯಾದ ಘಟನೆ ಇಡೀ ರಾಜ್ಯವನ್ನೇ ನಡುಗಿಸಿತ್ತು. ಓಂಕಾರಮೂರ್ತಿ ಅವರು ಇದನ್ನು ಕೇವಲ ಒಂದು ‘ಕ್ರೈಮ್ ಸ್ಟೋರಿ’ಯಾಗಿ ನೋಡದೆ, ಆ ಐದು ಜೀವಗಳ ಹಿಂದಿದ್ದ ನೋವಿನ ಕಥೆಯನ್ನು ಕೆದಕಿ, ಸಾಮಾಜಿಕ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದರು. ಹಿರಿಯ ಪತ್ರಕರ್ತರೇ ಇವರ ಬರಹದ ಗಟ್ಟಿತನಕ್ಕೆ ಬೆರಗಾಗಿದ್ದರು. ಈ ವರದಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ಹಂಚಿಕೆಯಾಗಿ, ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
ಪತ್ರಿಕಾ ದಿನಾಚರಣೆಗೆ ಬೆಳಕು :
ಜುಲೈ 1ರ ‘ಪತ್ರಿಕಾ ದಿನಾಚರಣೆ’ಯ ಹೊಸ್ತಿಲಲ್ಲೇ ದುರ್ಗದ ಯುವಕನಿಗೆ ಈ ಪ್ರಶಸ್ತಿ ಸಂದಿರುವುದು ಕೋಟೆನಾಡಿನ ಪತ್ರಕರ್ತರಲ್ಲಿ ಸಡಗರ ಮೂಡಿಸಿದೆ. ಈಗಾಗಲೇ ಸ್ನೇಹಿತರು, ಹಿರಿಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಪತ್ರಿಕಾ ದಿನಾಚರಣೆಯ ಸಮಾರಂಭದಲ್ಲಿ ಓಂಕಾರಮೂರ್ತಿ ಅವರನ್ನು ವಿಶೇಷವಾಗಿ ಸನ್ಮಾನಿಸಲು ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘಟನೆಗಳು ಸಿದ್ಧತೆ ನಡೆಸಿವೆ.

ಚಿತ್ರರಂಗದತ್ತ ಒಲವು :
ವಿಶೇಷ ಹಾಗೂ ಮಾನವೀಯ ವರದಿಗಳ ಜೊತೆಗೆ ಓಂಕಾರಮೂರ್ತಿ ಅವರಿಗೆ ಚಿತ್ರರಂಗದ ಬಗ್ಗೆಯೂ ಅಪಾರ ಆಸಕ್ತಿ. ಸಿನಿಮಾಗಳನ್ನು ಅಚ್ಚುಕಟ್ಟಾಗಿ ವಿಮರ್ಶಿಸುವ ಇವರು, ರಾಜ್ಯದ ಪ್ರಮುಖ ನಟರು, ನಿರ್ದೇಶಕರು ಹಾಗೂ ಗಾಯಕರನ್ನು ಸಂದರ್ಶಿಸಿದ್ದಾರೆ. ಇವರ ವರದಿಗಳನ್ನು ಒಮ್ಮೆ ಓದಲು ಆರಂಭಿಸಿದರೆ ಮುಗಿಸುವವರೆಗೂ ಕಣ್ಣು ಹೊರಳದಂತೆ ಹಿಡಿದಿಟ್ಟುಕೊಳ್ಳುವ ಶಕ್ತಿ ಇವರ ಅಕ್ಷರಗಳಿಗಿದೆ. ವರದಿಗಾರಿಕೆ ಮತ್ತು ಸಾಹಿತ್ಯವನ್ನು ಎರಡು ಕಣ್ಣುಗಳಂತೆ ಪೋಷಿಸುತ್ತಿರುವ ಕೆ.ಪಿ.ಓಂಕಾರಮೂರ್ತಿ ಅವರಿಗೆ ಅಭಿನಂದನೆಗಳು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
























