ಬೆಂಗಳೂರು : ಮಧ್ಯಾಹ್ನದ ವೇಳೆ 20 ನಿಮಿಷಗಳ ಕಾಲ ಮಾಡುವ ಕಿರುನಿದ್ದೆ ಸುದೀರ್ಘ ನಿದ್ದೆಗಿಂತ ಹೆಚ್ಚು ಉಲ್ಲಾಸ, ಏಕಾಗ್ರತೆ ಮತ್ತು ಚೈತನ್ಯವನ್ನು ನೀಡುತ್ತದೆ ಎಂದು ನಿದ್ರಾ ತಜ್ಞರು ವಿಶ್ಲೇಷಿಸಿದ್ದಾರೆ. 90 ನಿಮಿಷಗಳ ನಿದ್ದೆ ದೇಹದ ನಿದ್ರಾ ಚಕ್ರವನ್ನು ಪೂರ್ಣಗೊಳಿಸಿದರೂ, ಮಧ್ಯಾಹ್ನ ಹೆಚ್ಚು ಹೊತ್ತು ಮಲಗುವುದು ಆಲಸ್ಯಕ್ಕೆ ಕಾರಣವಾಗಬಹುದು. ಮೆದುಳು ನಿದ್ರೆಯ ವಿವಿಧ ಹಂತಗಳ ಮೂಲಕ ಹೇಗೆ ಚಲಿಸುತ್ತದೆ ಎಂಬುದರ ಆಧಾರದ ಮೇಲೆ ಈ ವ್ಯತ್ಯಾಸವನ್ನು ಗುರುತಿಸಲಾಗಿದೆ.
ಅಧ್ಯಯನದ ಪ್ರಮುಖ ಅಂಶಗಳು ಇಲ್ಲಿವೆ
ನಿದ್ದೆಯ ಜಡತ್ವ (Sleep Inertia) ಎಂದರೇನು?

ಸುದೀರ್ಘ ನಿದ್ದೆಯಿಂದ ಎದ್ದ ತಕ್ಷಣ ಗೊಂದಲ, ಆಯಾಸ ಮತ್ತು ದೇಹ ಭಾರವಾದಂತೆ ಅನಿಸುವುದನ್ನೇ ‘ನಿದ್ದೆಯ ಜಡತ್ವ’ ಎನ್ನಲಾಗುತ್ತದೆ. ಆಳವಾದ ನಿದ್ದೆಯಲ್ಲಿರುವಾಗ (Slow-wave sleep) ಏಕಾಏಕಿ ಎಚ್ಚರವಾದರೆ ಮೆದುಳಿನ ನಿರ್ಧಾರ ತೆಗೆದುಕೊಳ್ಳುವ ಮತ್ತು ಗಮನಹರಿಸುವ ಭಾಗವು (ಪ್ರಿಫ್ರಂಟಲ್ ಕಾರ್ಟೆಕ್ಸ್) ತಕ್ಷಣವೇ ಸಕ್ರಿಯವಾಗುವುದಿಲ್ಲ. ಇದು ಪೂರ್ಣವಾಗಿ ಸಕ್ರಿಯವಾಗುವವರೆಗೆ ಮೂಡ್ ಬದಲಾಗುವುದು ಮತ್ತು ಸಣ್ಣ ಕೆಲಸಗಳೂ ಕಷ್ಟವೆನಿಸುವುದು ಸಹಜ. ಆದರೆ, 20 ನಿಮಿಷಗಳ ಕಿರುನಿದ್ದೆ ಮಾಡಿದಾಗ ಮೆದುಳು ಆಳವಾದ ನಿದ್ದೆಯ ಹಂತಕ್ಕೆ ಹೋಗಿರುವುದಿಲ್ಲ. ಹೀಗಾಗಿ ಎಚ್ಚರವಾದ ತಕ್ಷಣವೇ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ.
ಕಿರುನಿದ್ದೆಗೆ 10-20 ನಿಮಿಷಗಳೇ ಸೂಕ್ತ
ತಜ್ಞರ ಪ್ರಕಾರ, 10 ರಿಂದ 20 ನಿಮಿಷಗಳ ಕಿರುನಿದ್ದೆ ಅತ್ಯಂತ ಸೂಕ್ತ. 25 ನಿಮಿಷಗಳಿಗಿಂತ ಹೆಚ್ಚು ನಿದ್ದೆ ಮಾಡಿದರೆ ಮೆದುಳು ಆಳವಾದ ನಿದ್ರಾವಸ್ಥೆಗೆ ಜಾರುವ ಅಪಾಯವಿರುತ್ತದೆ. ಒಂದು ವೇಳೆ ದೀರ್ಘ ನಿದ್ದೆ ಮಾಡಲೇಬೇಕೆಂದರೆ, 90 ನಿಮಿಷಗಳ ಪೂರ್ಣ ನಿದ್ರಾ ಚಕ್ರವನ್ನು ಪೂರೈಸುವುದು ಉತ್ತಮ. ಆದರೆ, ಮಧ್ಯದಲ್ಲಿ (ಉದಾಹರಣೆಗೆ 60 ನಿಮಿಷಕ್ಕೆ) ಎಚ್ಚರವಾದರೆ ಅದು ಮತ್ತೆ ಜಡತ್ವಕ್ಕೆ ಕಾರಣವಾಗುತ್ತದೆ. ಕೆಲಸದ ನಡುವೆ 90 ನಿಮಿಷ ಮೀಸಲಿಡುವುದು ಕಷ್ಟವಾಗಿರುವುದರಿಂದ ಕಿರುನಿದ್ದೆಯೇ ಹೆಚ್ಚು ಪ್ರಾಯೋಗಿಕ ಪರಿಹಾರವಾಗಿದೆ.

ಮಧ್ಯಾಹ್ನದ ಆರಂಭಿಕ ಸಮಯವೇಕೆ ಬೆಸ್ಟ್?
ಬೆಳಿಗ್ಗೆ ಎದ್ದ ಎಂಟು ಗಂಟೆಗಳ ನಂತರ ಅಂದರೆ ಮಧ್ಯಾಹ್ನದ ಆರಂಭದಲ್ಲಿ ದೇಹದಲ್ಲಿ ಸಹಜವಾಗಿಯೇ ಆಲಸ್ಯ ಆವರಿಸುತ್ತದೆ. ಇದು ಊಟದಿಂದಾಗುವ ಪರಿಣಾಮವಲ್ಲ, ಬದಲಿಗೆ ಇದು ನಮ್ಮ ದೇಹದ ಜೈವಿಕ ಗಡಿಯಾರದ (Circadian rhythm) ಪ್ರಕ್ರಿಯೆ. ಈ ಸಮಯದಲ್ಲಿ ಕಿರುನಿದ್ದೆ ಮಾಡುವುದು ದೇಹದ ವ್ಯವಸ್ಥೆಗೆ ಪೂರಕವಾಗಿರುತ್ತದೆ. ತಡವಾಗಿ ಸಂಜೆ ನಿದ್ದೆ ಮಾಡಿದರೆ, ಅದು ರಾತ್ರಿಯ ನಿದ್ದೆಗೆ ಅಡ್ಡಿಯುಂಟುಮಾಡುತ್ತದೆ.
‘ಕಾಫಿ ನ್ಯಾಪ್’ (Coffee Nap) ಎನ್ನುವ ಹೊಸ ವಿಧಾನ

ಕಿರುನಿದ್ದೆಗೂ ಮುನ್ನ ಸ್ವಲ್ಪ ಪ್ರಮಾಣದ ಕಾಫಿ ಕುಡಿಯುವುದು ಮತ್ತೊಂದು ಪರಿಣಾಮಕಾರಿ ವಿಧಾನ ಎನ್ನುತ್ತದೆ ಅಧ್ಯಯನ. ಕಾಫಿಯಲ್ಲಿರುವ ಕೆಫೀನ್ ಮೆದುಳನ್ನು ತಲುಪಲು 20-30 ನಿಮಿಷ ಬೇಕಾಗುತ್ತದೆ. 10-20 ನಿಮಿಷಗಳ ನಿದ್ದೆ ಮುಗಿಸಿ ಎದ್ದ ತಕ್ಷಣ ಕೆಫೀನ್ ಪ್ರಭಾವ ಶುರುವಾಗುವುದರಿಂದ, ಉಲ್ಲಾಸವು ದುಪ್ಪಟ್ಟಾಗುತ್ತದೆ. ಆದರೆ, ಕೆಫೀನ್‌ನಿಂದ ರಾತ್ರಿ ನಿದ್ದೆ ಕೆಡುವ ಸಮಸ್ಯೆ ಇರುವವರಿಗೆ ಈ ವಿಧಾನ ಸೂಕ್ತವಲ್ಲ.
ಕಿರುನಿದ್ದೆಗಿರುವ ಮಿತಿಗಳು
10 ನಿಮಿಷಗಳ ಕಿರುನಿದ್ದೆಯು ತಾತ್ಕಾಲಿಕವಾಗಿ ಚೈತನ್ಯ ನೀಡುತ್ತದೆಯೇ ಹೊರತು, ರಾತ್ರಿಯ ನಿದ್ದೆಯ ಕೊರತೆಯನ್ನು ನೀಗಿಸಲಾರದು. ಹಾಗೆಯೇ, ಕೆಲವರಿಗೆ ಹಗಲಿನಲ್ಲಿ ಎಷ್ಟೇ ಹೊತ್ತು ನಿದ್ದೆ ಮಾಡಿದರೂ ಆಲಸ್ಯ ಕಾಡಬಹುದು. ಇದು ಅವರ ನರಮಂಡಲದ (Nervous system) ವ್ಯವಸ್ಥೆಗೆ ಸಂಬಂಧಿಸಿದ್ದು, ಇಂತಹವರು ಹಗಲು ನಿದ್ದೆ ಮಾಡದಿರುವುದೇ ಒಳಿತು.

ಒಟ್ಟಾರೆಯಾಗಿ, ಮಧ್ಯಾಹ್ನದ ನಿದ್ದೆಯ ಅವಧಿಯು ಕೇವಲ ವೈಯಕ್ತಿಕ ಆಯ್ಕೆಯಲ್ಲ; ಅದು ನಿಮ್ಮ ಉಳಿದ ದಿನದ ಉಲ್ಲಾಸವನ್ನು ನಿರ್ಧರಿಸುವ ಪ್ರಮುಖ ಅಂಶ. ನಿದ್ದೆ ಎಷ್ಟು ಬೇಗ ಮತ್ತು ಚುಟುಕಾಗಿರುತ್ತದೆಯೋ, ಅಷ್ಟು ಬೇಗ ನೀವು ಮರಳಿ ಚುರುಕಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು.









