Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಲ್ಲೆ, ದೌರ್ಜನ್ಯ ಖಂಡಿಸಿ ಸರ್ಕಾರಿ ನೌಕರರ ಮೌನ ಪ್ರತಿಭಟನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಸೆ, 26 : ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ನಡೆಸುತ್ತಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಗೂಂಡಾ ಕಾಯ್ದೆಯನ್ವಯ ರೌಡಿ ಶೀಟರ್ ಎಂದು ಪ್ರಕರಣ ದಾಖಲಿಸಬೇಕು. ಸರ್ಕಾರಿ ನೌಕರರಿಗೆ ತೊಂದರೆಯಾಗದ ರೀತಿಯಲ್ಲಿ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿ, ಪ್ರಾಮಾಣಿಕವಾಗಿ ಜಿಲ್ಲೆಗೆ ಕೀರ್ತಿ ತರುವ ರೀತಿಯಲ್ಲಿ, ಭಯಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಜಿಲ್ಲಾಡಳಿತವನ್ನು ಒತ್ತಾಯಿಸಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಮೌನ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಸರ್ಕಾರಿ ನೌಕರರು,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಭಯಮುಕ್ತ ವಾತಾವರಣದಲ್ಲಿ ಸೇವೆ ಸಲ್ಲಿಸಲು ಅವಕಾಶ  ಮಾಡಿಕೊಡಬೇಕು, ವಿನಾಕಾರಣ ಕಿರುಕುಳ ನೀಡುವ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಾಲತೇಶ ಮುದಜ್ಜಿ ಸರ್ಕಾರಿ ನೌಕರರು ಈಗಲೇ ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ.  ಕೆಲವು ಕಿಡಿಗೇಡಿಗಳು, ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವುದು, ಕಿರುಕುಳ ನೀಡುವಂತಹ ಕಾರ್ಯ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಇದರಿಂದಾಗಿ ಸರ್ಕಾರಿ ನೌಕರರು ಭಯದ ವಾತಾವರಣದಲ್ಲಿಯೇ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.  ಅಕ್ರಮಗಳಿಗೆ ಸಹಕಾರ ನೀಡುವಂತೆ ಬೆದರಿಕೆ ಹಾಕುವ ದುಷ್ಕರ್ಮಿಗಳು, ಸಹಕರಿಸದೇ ಇದ್ದರೆ, ಅಂತಹ ನೌಕರರನ್ನು ವಿವಿಧ ರೀತಿಯಲ್ಲಿ ಹೆದರಿಸಿ, ಕಿರುಕುಳ ನೀಡುವುದು, ವಿನಾಕಾರಣ ನೂರಾರು ಸಂಖ್ಯೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿ ಕಾಯ್ದೆಯ ದುರುಪಯೋಗ ಮಾಡುವುದು, ನೌಕರರ ಮೇಲೆ ಹಲ್ಲೆ ಮಾಡುವಂತಹ ಪ್ರಕರಣಗಳು ಕೂಡ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿವೆ.  ಹೀಗಾಗಿ ಸರ್ಕಾರಿ ನೌಕರರು ಪ್ರಾಮಾಣಿಕತೆಯಿಂದ ಭಯಮುಕ್ತ ವಾತಾವರಣದಲ್ಲಿ ಕೆಲಸ ಮಾಡುವಂತಾಗಬೇಕು.  ಈ ನಿಟ್ಟಿನಲ್ಲಿ ಬೆದರಿಕೆ ಒಡ್ಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಯತ್ನಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರ್ಕಾರಿ ದಾಖಲೆಗಳನ್ನು ಹರಿದು ಹಾಕಿರುವ ಎಂ.ಸತೀಶ್ ಕುಮಾರ್ ಎಂಬುವರನ್ನು ಬಂಧಿಸಿ, ಆತನಿಂದಾಗುವ ಮಾನಸಿಕ ಕಿರುಕುಳ ತಪ್ಪಿಸಲು ಹಾಗೂ ಸರ್ಕಾರಿ ಅಧಿಕಾರಿಗಳ ಹಾಗೂ ನೌಕರರ ತೇಜೋವಧೆ ಮಾಡುವುದನ್ನು ತಪ್ಪಿಸಲು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ಸತೀಶ್ ಕುಮಾರ್ ಎಂಬ ವ್ಯಕ್ತಿ ಜಿಲ್ಲೆಯಲ್ಲಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಸುಮಾರು 200ಕ್ಕೂ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿ, ಮಾಹಿತಿ ಹಾಗೂ ಹಣ ಕೊಡುವಂತೆ ಕಳೆದ ಸುಮಾರು 9-10 ತಿಂಗಳಿಂದ ಪೀಡಿಸುತ್ತಿದ್ದು, ಯಾವುದೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಣ ನೀಡದೇ ಇದ್ದಾಗ ಹತಾಶನಾಗಿ ದಾಖಲೆ ರಹಿತವಾಗಿ ಸರ್ಕಾರಕ್ಕೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಂಸದರಿಗೆ ಸುಳ್ಳು ದೂರು ಅರ್ಜಿ ಸಲ್ಲಿಸಿ, ದೂರು ಅರ್ಜಿಗಳನ್ನು ಸಲ್ಲಿಸಿರುವುದಕ್ಕೆ ಸ್ವೀಕೃತಿ ಪಡೆದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಬೆದರಿಸುತ್ತಾ ಸುಳ್ಳು ದೂರು ಅರ್ಜಿಗಳ ಮೇಲೆ, ನಿಮ್ಮನ್ನು ಅಮಾನತು ಮಾಡಿಸುವುದಾಗಿ ಹಾಗೂ ಆರೋಪಗಳನ್ನು ಸಾಬೀತುಪಡಿಸಿ ನಿಮ್ಮನ್ನು  ಕೆಲಸದಿಂದ ವಜಾ ಮಾಡಿಸುತ್ತೇನೆ ಎಂದು ಬೆದರಿಕೆ ಒಡ್ಡುತ್ತಾ ಸರ್ಕಾರಿ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಸಾಧ್ಯವಾಗದೇ ಇರುವಂತಹ ವಾತಾವರಣ ಸೃಷ್ಠಿ ಮಾಡಿರುತ್ತಾನೆ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ತೇಜೋವಧೆ ಮಾಡಿದ್ದಾರೆ ಎಂದು ದೂರಿದರು

.ಎಂ.ಸತೀಶ್ ಕುಮಾರ್ ಅಲಿಯಾಸ್ ಎಂ.ಸತೀಶ್ ನಾಯ್ಕ್ ಎಂಬ ವ್ಯಕ್ತಿಯು ಪೂರ್ವಾಗ್ರಹ ಪೀಡಿತವಾಗಿದ್ದು,  ಇತ್ತೀಚೆಗೆ ಸಂಸದರ ಅಧ್ಯಕ್ಷತೆಯಲ್ಲಿ  ನಡೆದ ದಿಶಾ ಸಭೆ ಸಮಯದಲ್ಲಿ ಕೆಲವು ಪುಂಡರ ಜೊತೆ ಜಿ.ಪಂ.ಗೆ ಮುತ್ತಿಗೆ ಹಾಕಿ ಹಿರಿಯ ಅಧಿಕಾರಿಗಳ ತೇಜೋವಧೆ ಮಾಡಿರುತ್ತಾರೆ.  ಜಿಲ್ಲೆಯ ವಿವಿಧ ಸರ್ಕಾರಿ ಅಧಿಕಾರಿಗಳನ್ನು ಹಾಗೂ ನೌಕರರನ್ನು ಹೆದರಿಸಿ, ಬೆದರಿಸಿ ನಿಮ್ಮ ಮೇಲೆ ಸುಳ್ಳು ಜಾತಿ ನಿಂದನೆ ಪ್ರಕರಣ  ದಾಖಲಿಸುವುದಾಗಿ ಅವರಿಗೆ ಬ್ಲಾಕ್ ಮೇಲ್ ಮಾಡಿ ಅವರಿಂದ ಪ್ರತಿ ತಿಂಗಳು ಹಣ ವಸೂಲಿ ಮಾಡುತ್ತಿರುವುದಾಗಿ ತಿಳಿದುಬಂದಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈತನ ಗೊಡ್ಡು ಬೆದರಿಕೆ ಹಾಗೂ ಬ್ಲಾಕ್ ಮೇಲ್ ತಂತ್ರಕ್ಕೆ ಬಗ್ಗದೇ ಇದ್ದಾಗ ಹತಾಶನಾಗಿ ಪಿಡಿಒ ಟಿ.ವೀರೇಶ್ ಅವರ ಮೇಲೆ ಮರಣಾಂತಿಕ ಹಲ್ಲೆ ಮಾಡಲು ಯತ್ನಿಸಿ, ಸರ್ಕಾರಿ ಕಾಗದ ಪತ್ರಗಳು ಇರುವ ದಾಖಲೆಗಳನ್ನು ಹರಿದು ಹಾಕಿ, ಆಕ್ರೋಶಭರಿತನಾಗಿ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಸಿರುತ್ತಾರೆ. ಈ ಕುರಿತು ಚಿತ್ರದುರ್ಗ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈಗಾಗಲೆ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.

ಸತೀಶ್ ಕುಮಾರ್ ಅಲಿಯಾಸ್ ಸತೀಶ್ ನಾಯ್ಕ್‍ರವರನ್ನು ಕೂಡಲೇ ಬಂಧಿಸಿ, ಗೂಂಡಾ ಕಾಯ್ದೆಯನ್ವಯ ರೌಡಿ ಶೀಟರ್ ಎಂದು ಪ್ರಕರಣ ದಾಖಲಿಸಬೇಕು. ಸರ್ಕಾರಿ ನೌಕರರಿಗೆ ತೊಂದರೆಯಾಗದ ರೀತಿಯಲ್ಲಿ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿ, ಪ್ರಾಮಾಣಿಕವಾಗಿ ಜಿಲ್ಲೆಗೆ ಕೀರ್ತಿ ತರುವ ರೀತಿಯಲ್ಲಿ, ಭಯಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯ ಮಾಡಿದರು.

ಇದಕ್ಕೂ ಮುನ್ನ ರಾಜ್ಯ ಸರ್ಕಾರಿ ನೌಕರರು ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಮೌನ ಮೆರವಣಿಗೆ ನಡೆಸಿ, ಪ್ರತಿಭಟನೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಜಿಲ್ಲಾ ಕಾರ್ಯದರ್ಶಿ ಆರ್.ಶ್ರೀನಿವಾಸ್, ಖಜಾಂಚಿ ಮಲ್ಲಿಕಾರ್ಜುನ್, ರಾಜ್ಯ ಪರಿಷತ್ ಸದಸ್ಯ ಎಸ್.ರಾಜಪ್ಪ, ಉಪಾಧ್ಯಕ್ಷ ಪೂಜಾರ್ ಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಬಸವರಾಜಪ್ಪ, ಪಿಡಿಒ ಸಂಘದ ಜಿಲ್ಲಾ ಅಧ್ಯಕ್ಷ ನಯಾಜ್  ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಉಪಸ್ಥಿತರಿದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now