ಸುದ್ದಿಒನ್, ಬೆಂಗಳೂರು, ಆಗಸ್ಟ್. 20 : ಒಳಮೀಸಲಾತಿ ಅಧಿಕೃತವಾಗಿ ಬುಧವಾರ ಜಾರಿಗೊಳ್ಳುತ್ತಿದ್ದಂತೆ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಮುಖ್ಯಮಂತ್ರಿ ನಿವಾಸ ಕಾವೇರಿ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾದಿಗ ಸಮುದಾಯದವರು, ಸಿದ್ದರಾಮಯ್ಯ ಬೃಹತ್ ಭಾವಚಿತ್ರಕ್ಕೆ ಹಾಲಿನಾಭಿಷೇಕದ ಜೊತೆಗೆ ಹೂವಿನ ಮಳೆ ಸುರಿಸಿದರು.
ಬಳಿಕ ಸಿಎಂ ನಿವಾಸ ಪ್ರವೇಶಿಸಿದ ಆಂಜನೇಯ ಇತರ ಪ್ರಮುಖ ಮುಖಂಡರು, ಬೃಹತ್ ಹೂವಿನ ಹಾರದೊಂದಿಗೆ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಚ್.ಆಂಜನೇಯ, ಒಳಮೀಸಲಾತಿ ಕಲ್ಪನೆ ಜನಕರಾದ ಮಾದಿಗ ಸಮುದಾಯದವರು 35 ವರ್ಷ ನಿರಂತರ ಹೋರಾಟ ನಡೆಸಿದ್ದು, ಸುಪ್ರೀಂ ಕೋರ್ಟ್ ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.
ಬಲಾಢ್ಯ ಸಮುದಾಯಗಳ ಮಧ್ಯೆ ಸರ್ಕಾರಿ ಸೌಲಭ್ಯ, ಉನ್ನತ ಉದ್ಯೋಗ-ಶಿಕ್ಷಣ ಪಡೆಯುವುದು ಮಾದಿಗರು ಹಾಗೂ ಸಂಬಂಧಿತ ಜಾತಿಗಳಿಗೆ ಗಗನಕುಸುಮವಾಗಿತ್ತು. ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳಾಗಿ ಮಾದಿಗ ಸಮುದಾಯ ನೌಕರಿ ಪಡೆಯುವದಕ್ಕಷ್ಟೇ ಮೀಸಲಾತಿ ಸೀಮಿತವಾಗಿತ್ತು. ಈ ಸತ್ಯವನ್ನು ಸರ್ಕಾರಗಳು ಹಾಗೂ ನ್ಯಾಯಾಂಗಕ್ಕೆ ಮನದಟ್ಟು ಮಾಡಿಕೊಡಲಾಗಿತ್ತು ಎಂದರು.
ಪರಿಣಾಮ ಆಗಸ್ಟ್ 1, 2024ರಂದು ಒಳಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ. ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡುತ್ತಿದ್ದಂತೆ ತಾವು ಹೆಚ್ಚು ಕಾಳಜಿ ವಹಿಸಿ,
ವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆಗೆ ಗಟ್ಟಿ ನಿರ್ಧಾರ ಕೈಗೊಂಡಿದ್ದರ ಫಲ ಇಂದು ಮಾದಿಗರು ಸಂಭ್ರಮಿಸುವಂತಾಗಿದೆ ಎಂದರು.
ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸಿದ ಬಳಿಕ ಒಳಮೀಸಲಾತಿ ಜಾರಿ ಆಗದಂತೆ ಅನೇಕ ಶಕ್ತಿಗಳು ಅಡ್ಡಗಾಲು ಹಾಕಿದರು. ಆದರೆ, ತಾವು ಯಾವುದಕ್ಕೂ ಜಗ್ಗದೆ ನುಡಿದಂತೆ ನಡೆದಿದ್ದೀರಿ. ಅದರಲ್ಲೂ ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ನೀಡಿಯೇ ಸಿದ್ದ ಎಂದು ಅನೇಕ ವರ್ಷಗಳಿಂದ ಹೇಳುತ್ತಿದ್ದ ಮಾತಿನಂತೆ ನಡೆದುಕೊಂಡಿದ್ದೀರಿ. ಈ ಕಾರಣಕ್ಕೆ ಮಾದಿಗ ಸಮುದಾಯ ತಮಗೆ ಸದಾ ಕೃತಜ್ಞರಾಗಿರುತ್ತದೆ ಎಂದು ಹೇಳಿದರು.
ಯಾವುದೇ ಒತ್ತಡಕ್ಕೆ ಮಣಿಯದೆ ಒಳಮೀಸಲಾತಿ ಜಾರಿಗೊಳಿಸಿ ನುಡಿದಂತೆ ನಡೆಯುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೀರಿ. ಆಯೋಗ ನೀಡಿದ್ದ ಐದು ಗುಂಪುಗಳ ಬದಲಾಗಿ ಮೂರು ವರ್ಗಗಳನ್ನಾಗಿಸಿದ್ದೀರಿ. ಅತ್ಯಂತ ಹಿಂದುಳಿದ ಮಾದಿಗ ಮತ್ತು ಸಂಬಂಧಿತ ಜಾತಿಗಳನ್ನು ಎ ಗುಂಪು ಎಂದೇ ಪರಿಗಣಿಸಬೇಕೆಂದು ಕೋರಿದರು.
ಮುಖ್ಯವಾಗಿ ಆಯೋಗ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪುಗಳನ್ನಾಗಿಸಿ ಶೇ.1ರಷ್ಟು ಮೀಸಲಾತಿ ಕಲ್ಪಿಸಿತ್ತು. ಆಂಧ್ರ, ತೆಲಂಗಾಣದಲ್ಲಿ ಇದೇ ನೀತಿ ಅನುಸರಿಸಲಾಗಿತ್ತು. ಆದರೆ, ಇದನ್ನು ಕೈಬಿಟ್ಟು ಬೇರೆ ವರ್ಗದಲ್ಲಿ ಸೇರಿಸಿರುವುದು ಸಾಮಾಜಿಕ ನ್ಯಾಯದ
ವಿರುದ್ಧವಾಗಿದೆ. ಈ ಸಂಬಂಧ ಅಲೆಮಾರಿ ಸಮುದಾಯದ ಮುಖಂಡರನ್ನು ಕರೆಯಿಸಿ ಅವರೊಂದಿಗೆ ಚರ್ಚಿಸಿ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಲು ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅಲೆಮಾರಿಗಳನ್ನು ತಾವು ಕೈಬಿಡಬಾರದು ಎಂದು ಮನವಿ ಮಾಡಿದರು.
ವಕೀಲ ರವೀಂದ್ರ ಮಾತನಾಡಿ, ಒಳಮೀಸಲಾತಿ ಜಾರಿಗೆ ದಶಕಗಳ ಕಾಲದಿಂದಲೂ ಅಡ್ಡಿಯಾಗಿದ್ದವರು ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೂ ತಡೆವೊಡ್ಡುವ ಪ್ರಯತ್ನ ನಡೆಸಿದ್ದರು. ತಾವು ಯಾವುದಕ್ಕೂ ಮನ್ನಣೆ ನೀಡದೆ ಜಾರಿಗೊಳಿಸಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಈ ಸಂಬಂಧ ಮಾದಿಗ ಮತ್ತು ಇತರ ಸಮುದಾಯಗಳು ತಮ್ಮನ್ನು ಸದಾ ಸ್ಮರಿಸುತ್ತವೆ ಎಂದು
ಕೃತಜ್ಞತೆ ಸಲ್ಲಿಸಿದರು.
ಕೊಪ್ಪಳದ ಗುಳೇಪ್ಪ, ಗುಲ್ಬರ್ಗಾದ ಶ್ಯಾಮ್ ನಾಟಿಕೇರ್, ಬೀದರ್ನ ಚಂದ್ರಕಾಂತ್ ಇಪ್ಪಾಳ್ಗ, ಹೊಸಕೋಟೆ ಸುಬ್ಬಣ್ಣ, ಮಹದೇವಪುರದ ಚಿಮ್ಮಿ, ಹಾಸನದ ಶಂಕರ್ರಾಜ್, ಚಿತ್ರದುರ್ಗ ಶರಣಪ್ಪ, ನರಸಿಂಹರಾಜ್, ಮಾಗಡಿ ಮಂಜೇಶ್, ಬೆಂಗಳೂರಿನ ಮುತ್ತುರಾಜ್, ರಾಯಚೂರಿನ ಶರಣು ಇತರರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













