ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 14 : ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ ಎಂದು ಸರ್ಕಾರದಿಂದ ಸ್ಪಷ್ಟ ಭರವಸೆ ಸಿಕ್ಕಿದೆ. ಇದು ನಮ್ಮೆಲ್ಲರ ಹೋರಾಟಕ್ಕೆ ಸಂದ ಜಯವಾಗಿದೆ. ಆದ್ದರಿಂದ ಈ ನಮ್ಮ ಅಹೋರಾತ್ರಿ ಧರಣಿಯನ್ನು ಇಂದಿಗೆ ಕೊನೆಗೊಳಿಸುತ್ತಿದ್ದೇವೆ
ಎಂದು ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್ ಹೇಳಿದರು.
ಅವರು ನಗರದ ಓಬವ್ವ ವೃತ್ತದ ಬಳಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಯಲ್ಲಿ ಅವರು ಭಾಗವಹಿಸಿ ಅವರು ಮಾತನಾಡಿದರು.
ಆದರೆ ನಮ್ಮ ಇನ್ನುಳಿದ ಬೇಡಿಕೆಗಳ ಈಡೇರಿಕೆಗಾಗಿ ನಾವು ಮುಂದಿನ ಹಂತದ ಹೋರಾಟವನ್ನು ರೂಪಿಸಲಿದ್ದೇವೆ. ನಮ್ಮ ಎಲ್ಲಾ ಹಕ್ಕೊತ್ತಾಯಗಳು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿಯು ಈ ದಿನವು ಉತ್ಸಾಹದಿಂದ ಮುಂದುವರೆಯಿತು. ಮುಖ್ಯ ಮಂತ್ರಿಗಳು ಕೊಟ್ಟ ಮಾತಿನಂತೆ ಮಾಸಿಕ ಗೌರವಧನವನ್ನು 10,000/-ರೂ. ನಿಗದಿಗೊಳಿಸಬೇಕು. ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು ಎಂಬ ಬೇಡಿಕೆಗಳಿಗಾಗಿ ಪಟ್ಟು ಹಿಡಿದ ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿಯನ್ನು ಮುಂದುವರೆಸಿದರು.
ಓಬವ್ವ ವೃತ್ತದ ಬಳಿ ನಿರ್ಮಿಸಿರುವ ಪೆಂಡಾಲ್ನಲ್ಲಿಯೇ ಎರಡು ದಿನಗಳಿಂದ ಧರಣಿ ಕುಳಿತಿದ್ದ ಆಶಾ ಕಾರ್ಯಕರ್ತೆಯರು ಚಳಿ ಮತ್ತು ಮಳೆಗೆ ಜಗ್ಗದೇ ತಮ್ಮ ಧರಣಿಯನ್ನು ಮುಂದುವರೆಸಿದರು. ಈ ದಿನ ಧರಣಿಯನ್ನು ಉದ್ದೇಶಿಸಿ ಪ್ರಗತಿಪರ ಚಿಂತಕರಾದ ಜೆ. ಯಾದವರೆಡ್ಡಿ, ಇತಿಹಾಸ ಸಂಶೋಧಕರಾದ ಡಾ. ಬಿ. ರಾಜಶೇಖರಪ್ಪ, ಬರಹಗಾರರಾದ ಶರೀಫಾಬಿ, ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್ ಬಾಬು ಮತ್ತು ಮಲ್ಲಪ್ಪನಹಳ್ಳಿ ತಿಪ್ಪೇಸ್ವಾಮಿ, ನಿವೃತ್ತ ಪ್ರಾಧ್ಯಾಪಕಿ ಶ್ರೀಮತಿ ಯಶೋದ ಮತ್ತು ಹೋರಾಟಗಾರರಾದ ಷಫೀವುಲ್ಲಾ ಮೊದಲಾದವರು ಮಾತನಾಡಿದರು.
ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಚಳಿಗೆ ಜಗ್ಗದೇ ಅಹೋರಾತ್ರಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ! ಆಳ್ವಿಕೆ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಅತ್ಯಂತ ನ್ಯಾಯತವಾಗಿವೆ. ಆದ್ದರಿಂದ ಇವರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತಕ್ಷಣವೇ ಈಡೇರಿಸಬೇಕು ಎಂದು ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಎಲ್ಲ ಮುಖಂಡರು ಒತ್ತಾಯಿಸಿದರು.
ಇಂದಿನ ಬೆಲೆ ಏರಿಕೆಯ ಸಂದರ್ಭದಲ್ಲಿ ಮಾಸಿಕ ರೂ. 10000/- ಗೌರವ ಧನವು ತೀರಾ ಕಡಿಮೆಯಾಗಿದೆ. ರಾಜ್ಯದ ಜನರ ಆರೋಗ್ಯವನ್ನು ಕಾಪಾಡುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ರೂ. 25000/- ಮಾಸಿಕ ಗೌರವ ಧನವನ್ನಾದರೂ ಕೊಡಬೇಕು. ಆದರೆ ತಾನು ಕೊಟ್ಟ ಮಾತಿನಷ್ಟಾದರೂ ಗೌರವ ಧನ ನೀಡದಿರುವುದು ಅತ್ಯಂತ ಖಂಡನೀಯ. ಇನ್ನಾದರೂ ಆಶಾ ಕಾರ್ಯಕರ್ತೆಯರ ಬೇಡಿಕೆಯನ್ನು ಸರ್ಕಾರ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಇವರ ಸೇವೆಯನ್ನು ಖಾಯಂಗೊಳಿಸುವಂತೆ ಹೋರಾಟ ಮಾಡಬೇಕಾಗುತ್ತದೆ ಎಂದರು.
ನಂತರ ಹೋರಾಟದ ಸ್ಥಳಕ್ಕೆ ಆಗಮಿಸಿದ ಮಾನ್ಯ ಜಿಲ್ಲಾಧಿಕಾರಿಗಳು ಮನವಿ ಪತ್ರವನ್ನು ಸ್ವೀಕರಿಸಿ, ಆಶಾಗಳ ಚಳುವಳಿ ನ್ಯಾಯಸಮ್ಮತವಾಗಿದ್ದು ತಮ್ಮ ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿ ಕೊಡುತ್ತೇನೆ ಎಂದರು.
ಹೋರಾಟದ ಮುಕ್ತಾಯದ ಅಂಗವಾಗಿ ಡಿ.ಸಿ. ವೃತ್ತದಲ್ಲಿ ಮಾನವ ಸರಪಳಿಯನ್ನು ರಚಿಸಿದ ಆಶಾ ಕಾರ್ಯಕರ್ತೆಯರು ಘೋಷಣೆಯನ್ನು ಕೂಗುತ್ತಾ ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮತ್ತೊಮ್ಮೆ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಗಿರಿಜಮ್ಮ, ಮುಖಂಡರುಗಳಾದ ಮಂಜುಳಮ್ಮ, ಲಕ್ಷ್ಮಿಬಾಯಿ, ಗುರುಶಾಂತ, ನಾಗವೇಣಿ, ಪಾರ್ವತಮ್ಮ, ರಾಜಮ್ಮ, ಮಮತ, ಸವಿತ, ಪುಟ್ಟಮ್ಮ, ನೇತ್ರಾವತಿ, ವಸಂತಮ್ಮ, ವೀಣಾ, ಓಂಕಾರಮ್ಮ, ನಿಂಗಮ್ಮ ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ನೂರಾರು ಮಂದಿ ಆಶಾ ಕಾರ್ಯಕರ್ತೆಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















