ಚಿತ್ರದುರ್ಗ. ಮೇ.28 : ಜೇನು ಕೃಷಿಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎಂದು ಜೇನು ತಜ್ಞ ಹಾಗೂ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಶಾಂತವೀರಯ್ಯ ಹೇಳಿದರು.

ಹಿರಿಯೂರು ತಾಲ್ಲೂಕು ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೋಮವಾರ ಜರುಗಿದ ಸಮಗ್ರ ಜೇನು ಕೃಷಿ ತಾಂತ್ರಿಕತೆ ಕುರಿತು ಆಯೋಜಿಸಲಾಗಿದ್ದ 2 ದಿನಗಳ ಕಾಲ ರೈತರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಶೇ 90ಕ್ಕಿಂತ ಹೆಚ್ಚಿನ ವಿವಿಧ ಜಾತಿಯ ಸಸ್ಯಗಳಿಗೆ ಜೇನು ನೊಣಗಳಿಂದ ಪರಾಗಸ್ಪರ್ಷವಾಗುತ್ತದೆ. ಪ್ರತಿ ಎಕರೆಗೆ 2-4 ಜೇನು ಪೆಟ್ಟಿಗೆಗಳನ್ನು ಇಡುವುದರಿಂದ ಅಡಿಕೆ ಮತ್ತು ತೆಂಗಿನ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ಸೂರ್ಯಕಾಂತಿ ಬೆಳೆಯಲ್ಲಿ ಶೇ.70 ಹಾಗೂ ಕುಂಬಳ ಜಾತಿಯ ಬೆಳೆಗಳಲ್ಲಿ ಶೇ 80 ರಿಂದ 90 ಕ್ಕಿಂತ ಅಧಿಕ ಇಳುವರಿ ಪಡೆಯಲು ಜೇನು ಕೃಷಿ ಸಹಕಾರಿಯಾಗಿದೆ. ಕೃಷಿಯ ಉತ್ಪಾದನೆ ಹೆಚ್ಚಿಸುವುದಲ್ಲದೆ, ಜೇನು ತುಪ್ಪವು ಆರೋಗ್ಯದ ದೃಷ್ಠಿಯಲ್ಲಿ ಅಮೃತ ಸಮಾನವಾಗಿದ್ದು, ಅಸ್ತಮಾ, ಸಂಧಿವಾತ ಕಾಯಿಲೆ ನೀವಾರಿಸಲು, ದೇಹದ ಬೊಜ್ಜು ಕರಗಿಸಲು ಮತ್ತು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಬುದ್ದಿವಂತಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಜೇನು ತುಪ್ಪದಲ್ಲಿ ಶರೀರಕ್ಕೆ ಬೇಕಾಗುವ ಪೋಷಕಾಂಶಗಳು ರಕ್ತಗತವಾದ ರೂಪದಲ್ಲಿ ದೊರೆಯುತ್ತವೆ. ಜೇನು ಕುಟುಂಬವು ಒಗ್ಗಟ್ಟಿನಿಂದ ದುಡಿಯುವುದನ್ನು ನೋಡಿ ನಾವು ಸಹ ಕಲಿಯುವುದು ಬಹಳವಿದೆಂದರು. ಜೇನು ಕೃಷಿಯಿಂದ ಜೇನು ತುಪ್ಪವಲ್ಲದೆ, ಜೇನು ಮೇಣ, ಜೇನಿನ ವಿಷ, ರಾಜಶಾಯಿ ರಸ, ಜೇನಿನ ಪರಾಗ, ಜೇನಿನ ಅಂಟನ್ನು ಉಪುತ್ಪನ್ನಗಳನ್ನಾಗಿ ಸಹ ಪಡೆಯಬಹುದೆಂದು ಶಾಂತವೀರಯ್ಯ ಹೇಳಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ರಜನೀಕಾಂತ ಮಾತನಾಡಿ, ಜೇನು ಕೃಷಿಯು ಪರಿಸರ ಸ್ನೇಹಿ ಹಾಗೂ ಕಡಿಮೆ ಬಂಡವಾಳದ ಉಪಕಸುಬಾಗಿದೆ. ತನ್ನ ಪರಾಗಸ್ಪರ್ಶ ಕ್ರಿಯೆಯಿಂದ ರೈತರ ಬೆಳೆಗಳ ಉತ್ಪಾದನೆ ಹೆಚ್ಚಿಸುವಲ್ಲಿ ಮತ್ತು ಜೀವರಾಶಿಗಳ ಸಮತೋಲನ ಕಾಪಾಡುವಲ್ಲಿ ತುಂಬ ಪ್ರಾಮುಖ್ಯತೆ ಹೊಂದಿದೆ. ರೈತ ಬಾಂಧವರು ಇಂದಿನ ತರಬೇತಿಯ ಸದುಪಯೋಗ ಪಡೆದುಕೊಂಡು ಕನಿಷ್ಟ 2 ಜೇನು ಪಟ್ಟಿಗೆಯಿಂದ ಜೇನು ಕೃಷಿಯನ್ನು ಪ್ರಾರಂಭಿಸಲು ಸಲಹೆ ನೀಡಿದರು.
ನಿವೃತ್ತ ಮೂಖ್ಯ ಇಂಜಿನಿಯರ್ ರವೀದ್ರಪ್ಪ ಮಾತನಾಡಿ, ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ಹೆಚ್ಚಿಸುವಲ್ಲಿ ಜೇನು ಕೃಷಿ ಸಹಕಾರಿಯಗಿದೆಯಲ್ಲದೆ, ರೈತರ ಆದಾಯವನ್ನು ಹೆಚ್ಚಿಸುತ್ತದೆ. ಆದ ಪ್ರಯುಕ್ತ ರೈತರು ಜೇನು ಕೃಷಿಯನ್ನು ಸಮಗ್ರ ಕೃಷಿ ಪದ್ದತಿಯ ಭಾಗವಾಗಿತಮ್ಮ ತಾಕಿನಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ತಾಂತ್ರಿಕ ತರಬೇತಿ ಅಂಗವಾಗಿ ಮಂಗಳವಾರದ ದಿನ ಮೇಟಿಕುರ್ಕೆಯ ಚಂದನ ಮಧುವನ ತೋಟದ ಜೇನು ಕೃಷಿ ತರಬೇತಿ ಘಟಕಕ್ಕೆ ಭೇಟಿ ನೀಡಿ ರೈತರಿಗೆ ಜೇನು ಪೆಟ್ಟಿಗೆಯ ನಿರ್ವಹಣೆಯ ಪ್ರಾಯೋಗಿಕ ವಿವರ, ಜೇನು ನೊಣದ ಜೇವನ ಚರಿತ್ರೆ, ಜೇನು ಕಟುಂಬದಲ್ಲಿ ರಾಣಿ ಜೇನು, ಗಂಡು ಜೇನು ನೋಣ ಮತ್ತು ಕೆಲಸಗಾರರ ಪಾತ್ರÀ ಮತ್ತು ಗುರುತಿಸುವಿಕೆ, ಜೇನು ಕಟುಂಬದ ವಿಭಜನೆ ಮಾಡುವ ರೀತಿ,ಜೇನಿನ ಉಪ ಉತ್ಪನ್ನಗಳು, ಜೇನು ತುಪ್ಪ ತೆಗೆಯುವ ರೀತಿ ಕುರಿತು ಸಮಗ್ರವಾಗಿ ಪ್ರಾತ್ಯಕಿಕೆಯನ್ನು ನೀಡಲಾಗಿದೆ. ಜೇನು ಕೃಷಿಯ ಯಶಸ್ವಿ ಅಳವಡಿಕೆಗೆ ತರಬೇತಿಯಲ್ಲಿ ಭಾಗವಹಿಸಿದ ರೈತರ ಆಸಕ್ತ ಜೇನು ಕೃಷಿಕರ ವ್ಯಾಟ್ಸಆಪ್ ಗುಂಪನ್ನು ರಚಿಸಿ ಜೇನು ಕೃಷಿ ಪ್ರೋತ್ಸಾಹ ನೀಡಲಾಗುತ್ತಿದೆ.













