Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ನಿಧನ : ಇಂದು ಸಂಜೆ ಅಂತ್ಯಕ್ರಿಯೆ

---Advertisement---

ಶಿವಮೊಗ್ಗ : ಹಿರಿಯ ರಾಜಕಾರಣಿ, ಮಾಜಿ ಶಾಸಕ, ರಾಜ್ಯ ಮಾಜಿ ಶಾಸಕರ ವೇದಿಕೆಯ ಅಧ್ಯಕ್ಷ ಹೆಚ್.ಎಂ. ಚಂದ್ರಶೇಖರಪ್ಪ (78) ಅವರು ನಿನ್ನೆ ಸಂಜೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು, ಜಿಲ್ಲೆಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.

ಶಿವಮೊಗ್ಗ ನಗರಸಭೆ ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದ ಚಂದ್ರಶೇಖರಪ್ಪ ಅವರು, 1997/98ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಟು ಸ್ಪರ್ಧಿ ಕೆ.ಎಸ್. ಈಶ್ವರಪ್ಪ ಅವರನ್ನು ಮಣಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ತಮ್ಮ ಶಾಸಕಾವಧಿಯಲ್ಲಿ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿರ್ಮಾಣ ಹಾಗೂ ಗಾಜನೂರು ಜಲಾಶಯದ ಹೊಸ ಯೋಜನೆಗಳನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ರಾಜಕೀಯ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದರು. ಮೃತರು ಮಾಜಿ ಕಾರ್ಪೊರೇಟರ್ ಹೆಚ್.ಸಿ. ಯೋಗೀಶ್ ಹಾಗೂ ಉದ್ಯಮಿ ಶರಣ್ ಸೇರಿದಂತೆ ಇಬ್ಬರು ಪುತ್ರರು ಮತ್ತು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರವು ಇಂದು ಸಂಜೆ ಶಿವಮೊಗ್ಗದ ಹೊಸಹಳ್ಳಿ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Join WhatsApp

Join Now

Join Telegram

Join Now