ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 26 : ಸತತವಾಗಿ ಮೂರನೆ ಬಾರಿಗೆ ಜಯಗಳಿಸಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ಟಿ.ರಘುಮೂರ್ತಿ ಯುವ ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಶಿವಕುಮಾರ್ ಶನಿವಾರ ರಾಜ್ಯದ ಮುಖ್ಯಮಂತ್ರಿಗೆ ರಕ್ತದಲ್ಲಿ ಬರೆದಿರುವ ಮನವಿ ಪತ್ರವನ್ನು ಸಲ್ಲಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಮುರುಘಾಮಠದ ಅನುಭವ ಮಂಟಪದಲ್ಲಿ ಕರೆಯಲಾಗಿದ್ದ ಬೆಂಗಳೂರು ವಿಭಾಗ ಮಟ್ಟದ ಸಭೆಗೆ ಆಗಮಿಸಿದ್ದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕೆ.ಟಿ.ಶಿವಕುಮಾರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡಲೇಬೇಕೆಂದು ವಿನಂತಿಸಿದರು.

ರಾಜ ಮಹಾರಾಜರು ಆಳ್ವಿಕೆ ನಡೆಸಿರುವ ಚಿತ್ರದುರ್ಗದಲ್ಲಿ ಹಂಪಿ ಮಾದರಿಯಲ್ಲಿ ಪ್ರತಿ ವರ್ಷವೂ ದುರ್ಗೋತ್ಸವ ಆಚರಿಸಬೇಕು. ಅದಕ್ಕಾಗಿ ಪ್ರತಿ ವರ್ಷವೂ ಹತ್ತು ಕೋಟಿ ರೂ.ಗಳನ್ನು ಮೀಸಲಿಡಬೇಕು. ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ರಾಜವೀರ ಮದಕರಿನಾಯಕ ಲೋಕಸಭಾ ಕ್ಷೇತ್ರವೆಂದು ನಾಮಕರಣ ಮಾಡಬೇಕು.
ಸರ್ಕಾರದ ಆದೇಶದಂತೆ ಚಳ್ಳಕೆರೆ ಟೋಲ್‍ಗೇಟ್‍ನಿಂದ ಹಿಡಿದು ದಾವಣಗೆರೆ ರಸ್ತೆ, ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆಯನ್ನು ನಿಯಮಾನುಸಾರ ಅಗಲೀಕರಣಗೊಳಿಸಬೇಕು. ಯಾವುದೇ ಒತ್ತಡಕ್ಕೂ ಮಣಿಯಬಾರದು. ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಯನ್ನು ಪರಿಶೀಲಿಸಿ ಅಗತ್ಯವಿರುವ ಅನುದಾನವನ್ನು ತುರ್ತಾಗಿ ಬಿಡುಗಡೆಗೊಳಿಸಬೇಕು. ಈ ವರ್ಷವೇ ಕಾಮಗಾರಿಯನ್ನು ಮುಗಿಸಿ ಜಿಲ್ಲೆಗೆ ನೀರು ಹರಿಸಿ ರೈತರ ಬಾಳನ್ನು ಹಸುನುಗೊಳಿಸಬೇಕೆಂದು ಒತ್ತಾಯಿಸಿದರು.

ಚಿತ್ರದುರ್ಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಡಬೇಕು. ಜಿಲ್ಲೆ ಅತ್ಯಂತ ಹಿಂದುಳಿದಿದ್ದು, ಬಹುತೇಕ, ಬಡವರು, ಕೂಲಿ ಕಾರ್ಮಿಕರು, ರೈತರ ಮಕ್ಕಳು ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಚಿತ್ರದುರ್ಗದಲ್ಲಿಯೇ ಇಂಜಿನಿಯರಿಂಗ್ ಕಾಲೇಜು ತೆರೆದು ತಾಂತ್ರಿಕ ಶಿಕ್ಷಣಕ್ಕೆ ನೆರವು ಕಲ್ಪಿಸಬೇಕೆಂದು ಕೆ.ಟಿ.ಶಿವಕುಮಾರ್ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು. ವೀಣಗೌರಣ್ಣ, ಬೀರಾವರ ಪ್ರಕಾಶ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.












