ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 27 : ಕಷ್ಟ ಕಾಲದಲ್ಲಿ ಭಾರತವನ್ನು ಮುನ್ನಡೆಸಿದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರುರವರಲ್ಲಿ ದೂರದೃಷ್ಟಿಯಿತ್ತೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜವಾಹರಲಾಲ್‍ನೆಹರುರವರ ಪುಣ್ಯಸ್ಮರಣೆ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕೃಷಿ, ಕೈಗಾರಿಕೆ, ಶಿಕ್ಷಣಕ್ಕೆ ನೆಹರುರವರು ಹೆಚ್ಚಿನ ಒತ್ತು ಕೊಟ್ಟ ಪರಿಣಾಮ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿದೆ. ದೇಶದಲ್ಲಿರುವ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಫಲಾನುಭವಿಗಳೆ. ಹಾಗಾಗಿ ಜವಾಹರಲಾಲ್ ನೆಹರುರವರಿಗೆ ಯಾರು ಸಾಟಿಯಿಲ್ಲ. ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಜನಿಸಿದ ನೆಹರುರವರು ಇಂಗ್ಲೆಂಡ್‍ನಲ್ಲಿ ಶಿಕ್ಷಣ ಪಡೆದು ಭಾರತಕ್ಕೆ ಬಂದ ಮೇಲೆ ಮಹಾತ್ಮಗಾಂಧಿ ಜೊತೆ ಸೇರಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಣೆಕಟ್ಟೆ, ವಿಶ್ವವಿದ್ಯಾನಿಲಯಗಳು, ಪಂಚವಾರ್ಷಿಕ ಯೋಜನೆಗೆ ಆದ್ಯತೆ ಕೊಟ್ಟ ಪರಿಣಾಮವಾಗಿ ಭಾರತ ಸುಭಿಕ್ಷವಾಗಿದೆ ಎಂದರು.
ದೇಶ ವಿಭಜನೆಯಾದ ಸಂದರ್ಭದಲ್ಲಿ ಬ್ರಿಟೀಷರು ಕೋಮುವಾದವನ್ನು ಬಿತ್ತಿ ಹೋಗಿದ್ದರು. ಅಂತಹ ಕಷ್ಟಗಳನ್ನೆಲ್ಲಾ ನಿಭಾಯಿಸಿಕೊಂಡು ದೇಶವನ್ನು ಮುನ್ನಡೆಸಿಕೊಂಡು ಹೋದ ಜವಾಹರಲಾಲ್ ನೆಹರುರವರಿಗೆ ಮಕ್ಕಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಅವರನ್ನು ಚಾಚಾ ನೆಹರು ಅಂತ ಕರೆಯುತ್ತಿದ್ದರೆಂದು ಸ್ಮರಿಸಿಕೊಂಡರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಬಿ.ಟಿ.ಜಮೀರ್ ಮಾತನಾಡಿ ಎಲ್ಲಾ ಚಳುವಳಿಗಳಲ್ಲಿಯೂ ಭಾಗವಹಿಸುತ್ತಿದ್ದ ಜವಾಹರಲಾಲ್ ನೆಹರುರವರು ಹತ್ತು ವರ್ಷಗಳ ಕಾಲ ಸೆರೆಮನೆಯಲ್ಲಿದ್ದರು. ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದವರು ನೆಹರು. ಅರವತ್ತು ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‍ನವರು ಏನು ಮಾಡಿದ್ದಾರೆಂದು ಪ್ರಶ್ನಿಸುತ್ತಿರುವ ಕೋಮುವಾದಿ ಬಿಜೆಪಿ.ಯವರು ಮೊದಲು ಜವಾಹರಲಾಲ್‍ರವರು ದೇಶಕ್ಕೆ ಕೊಟ್ಟಿರುವ ಕೊಡುಗೆ ಬಗ್ಗೆ ತಿಳಿದುಕೊಳ್ಳಲಿ ಎಂದು ಎಚ್ಚರಿಸಿದರು.
ದೇಶದಲ್ಲಿ 4800 ಡ್ಯಾಂಗಳಿಗೆ ನೆಹರುರವರು ಫೌಂಡೇಶನ್ ಹಾಕಿದ್ದಾರೆ. ಇಂದಿರಾಗಾಂಧಿ ಕಾಲದಲ್ಲಿ ಎಲ್ಲವೂ ಪೂರ್ಣಗೊಂಡಿತು. ಈಗಿನ ನರೇಂದ್ರಮೋದಿ ಬಿಜೆಪಿ.ಪ್ರಧಾನಿಯಗುವ ಬದಲು ದೇಶದ ಪ್ರಧಾನಿಯಾಗಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡುತ್ತ ಜವಾಹರಲಾಲ್‍ನೆಹರು ದೇಶದ ಪ್ರಥಮ ಪ್ರಧಾನಿಯಾಗಿ ಅನೇಕ ಯೋಜನೆಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಭಾರತದಲ್ಲಿ ಕೈಗಾರಿಕೆ, ವಿಶ್ವವಿದ್ಯಾನಿಲಯಗಳಿರಲಿಲ್ಲ. ನೆಹರು ಪ್ರಧಾನಿಯಾದ ಮೇಲೆ ಶಿಕ್ಷಣ, ಕೈಗಾರಿಕೆ, ಕೃಷಿಗೆ ಒತ್ತು ಕೊಟ್ಟರು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿ ಕಷ್ಟದ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದ ಕೀರ್ತಿ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರುರವರಿಗೆ ಸಲ್ಲಬೇಕು. 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದು ಭಾರತವನ್ನು ಶಕ್ತಿಶಾಲಿಯನ್ನಾಗಿಸಿದರು. ಅಲಿಪ್ತ ರಾಷ್ಟ್ರಗಳ ಒಕ್ಕೂಟ ರಚಿಸಿಕೊಂಡು ಅದರ ನೇತೃತ್ವವನ್ನು ನೆಹರು ವಹಿಸಿಕೊಂಡಿದ್ದರು. ಬೇರೆಯವರಿಂದ ಅದು ಸಾಧ್ಯವಾಗುತ್ತಿರಲಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡುತ್ತ ದೇಶದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್‍ನೆಹರುರವರ ಕೊಡುಗೆ ಅಪಾರ. ದೇಶಕ್ಕೆ ನೆಹರು ಕುಟುಂಬದ ಸೇವೆ ಬಹಳಷ್ಟಿದೆ. ಭಾರತವನ್ನು ಬಡತನದಿಂದ ಮೇಲಕ್ಕೆತ್ತಬೇಕೆನ್ನುವ ಆಲೋಚನೆ ಅವರಲ್ಲಿತ್ತು. ಅದಕ್ಕಾಗಿ ಪಂಚ ವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ಕೃಷಿಗೆ ಒತ್ತು ಕೊಟ್ಟಿದ್ದರೆಂದು ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಉಪಾಧ್ಯಕ್ಷರುಗಳಾದ ಜಿ.ಎಸ್.ಕುಮಾರ್‍ಗೌಡ, ಎಸ್.ಎನ್.ರವಿಕುಮಾರ್. ಪದವೀಧರ ವಿಭಾಗದ ಅಧ್ಯಕ್ಷ ಮುದಸಿರ್‍ನವಾಜ್, ಜಿಲ್ಲಾ ಕಾಂಗ್ರೆಸ್ ಕಾನೂನು, ಮಾಹಿತಿ ಹಕ್ಕು ಹಾಗೂ ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ ಸುದರ್ಶನ್, ಪರಿಶಿಷ್ಟ ವರ್ಗ ವಿಭಾಗದ ಅಧ್ಯಕ್ಷ ಮಂಜುನಾಥ್, ವಸೀಂ, ರಮೇಶ್ ಮದಕರಿಪುರ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ನ್ಯಾಯವಾದಿ ಮಹಮದ್ ರಫಿ, ತಿಪ್ಪೇಸ್ವಾಮಿ, ಪವಿತ್ರ, ರೇಣುಕ, ಕೆ.ಪಿ.ಸಿ.ಸಿ.ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಜ್ಯೋತಿಲಕ್ಷ್ಮಿಗೋಪಿಯಾದವ್, ಸೇವಾದಳದ ಜಿಲ್ಲಾಧ್ಯಕ್ಷ ಭೂತೇಶ್, ಮಹಿಳಾಧ್ಯಕ್ಷೆ ನೇತ್ರಾವತಿ ತಾಲ್ಲೂಕು ಅಧ್ಯಕ್ಷೆ ಲತಾಮಣಿ ಇನ್ನು ಅನೇಕರು ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.

