ಬೆಂಗಳೂರು; ರಾಜಕೀಯದಲ್ಲಿ ಆಕ್ಟೀವ್ ಆಗಿರುವವರು ಯಾವತ್ತಿಗೂ ಅದರಿಂದ ದೂರ ಉಳಿದು, ಸೈಲೆಂಟ್ ಆಗುತ್ತೇವೆ ಎಂಬುದು ಸಾಧ್ಯವಿಲ್ಲದ ಮಾತು. ಯಾಕಂದ್ರೆ ಆ ರಾಜಕಾರಣ ಸೆಳೆಯುತ್ತಾ ಇರುತ್ತದೆ. ಅದಕ್ಕೆ ಸ್ಪಷ್ಟ ಉದಾಹರಣೆ ಡಿಕೆ ಸುರೇಶ್ ಅವರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನನಗೆ ರಾಜಕೀಯವೇ ಬೇಡ, ವಿಶ್ರಾಂತಿ ಬೇಕು ಎಂದಿದ್ದರು. ಇದೀಗ ಮತ್ತೆ ರಾಜಕಾರಣದತ್ತ ಬರ್ತಿದ್ದಾರೆ. ಕನಕಪುರದ ಬಮೂಲ್ ಆಡಳಿತ ಮಂಡಳಿಯ ನಿರ್ದೇಶಕನ ಸ್ಥಾನಕ್ಕೆ ಅರ್ಜಿ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ಡಿಕೆ ಸುರೇಶ್ ಅವರು, ನಮ್ಮ ಜಿಲ್ಲೆಯ, ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಕನಕಪುರ ನಿರ್ದೇಶನದ ಸ್ಥಾನಕ್ಕೆ, ಬೆಂಗಳೂರು ಒಕ್ಕೂಟದ ನಿರ್ದೇಶನದ ಸ್ಥಾನಕ್ಕೆ ಇವತ್ತು ಅರ್ಜಿಯನ್ನ ಸಲ್ಲಿಸಬೇಕು ಅಂತ ಹೇಳಿ ಎಲ್ಲಾ ಮುಖಂಡರು ತೀರ್ಮಾನ ಮಾಡಿದ್ದಾರೆ. ಅದರಂತೆ ಇವತ್ತು ಅರ್ಜಿ ಸಲ್ಲಿಸಿದ್ದೇನೆ.
ಈಗಲೂ ನನ್ನ ಮೂಡ್ ರೆಸ್ಟ್ ನಲ್ಲಿಯೇ ಇದೆ. ನಾನು ನಮ್ಮ ನಾಯಕರಿಗೆ ಎಲ್ಲಾ ವಿಚಾರಗಳನ್ನ ಹೇಳಿದ್ದೀನಿ. ಪಕ್ಷದ ಮುಖಂಡರಿಗೆ ಹಲವಾರು ವಿಚಾರಗಳನ್ನ ಹಂಚಿಕೊಂಡಿದ್ದೀನಿ. ಆದರೆ ಕೆಲವೊಂದು ವಿಚಾರದಲ್ಲಿ ನಾವೂ ಅವರ ಮಾತಿಗೂ ಗೌರವ ಕೊಡಬೇಕಾಗುತ್ತದೆ. ಆ ಒಂದು ನಿಟ್ಟಿನಲ್ಲಿ ಅವರು ಸಲಹೆ ನೀಡಿದ್ದಾರೆ. ಮಾರ್ಗದರ್ಶನ ತೋರಿದ್ದಾರೆ. ಅದರಂತೆ ಇವತ್ತು ಅರ್ಜಿ ಸಲ್ಲಿಕೆ ಮಾಡ್ತಾ ಇದ್ದೀನಿ. ಪಕ್ಷದ ಮುಖಂಡರು ಸರ್ವಾನುಮತದಿಂದ ಅವರ ಅನಿಸಿಕೆಗಳನ್ನ ವ್ಯಕ್ತಪಡಿಸಿದಾಗ, ನಾನೊಬ್ಬ ಪಕ್ಷದ ಕಾರ್ಯಕರ್ತನಾಗಿ, ಅವರ ಮಾತುಗಳಿಗೆ ತಲೆಬಾಗಬೇಕಾಯ್ತು. ಹೀಗಾಗಕ ಅರ್ಜಿಯನ್ನು ಸಲ್ಲಿಕೆ ಮಾಡಿದ್ದೇನೆ ಎಂದಿದ್ದಾರೆ. ಈ ಮೂಲಕ ಬಮೂಲ್ ಅಧ್ಯಕ್ಷನಾಗುವ ಹಿಂಗಿತ ವ್ಯಕ್ತಪಡಿಸಿದ್ದಾರೆ.


