ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 09 : ಹಳೆ ವಾಹನಗಳ ಫಿಟ್ನೆಸ್ ನವೀಕರಣ ಶುಲ್ಕದ ಭಾರಿ ಹೆಚ್ಚಳ ಹಾಗೂ ಸರಕು ಸಾಗಾಣಿಕೆ ವಾಹನಗಳಿಗೆ ವಿ.ಎಲ್.ಟಿ.ಡಿ. ವಿತ್ ಪ್ಯಾನಿಕ್ ಬಟನ್ ಕಡ್ಡಾಯ ಜಾರಿಗೊಳಿಸಿರುವುದರ ಮತ್ತು ಡೀಸೆಲ್ ಬೆಲೆ ಇಳಿಸುವಂತೆ ಚಿತ್ರದುರ್ಗ ಜಿಲ್ಲಾ ಟ್ರಕ್ಕರ್ಸ್ ಅಸೋಸಿಯೇಷನ್ ವತಿಯಿಂದ ಅಪರ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಹಳೆ ಸರಕು ಸಾಗಾಣಿಕೆ ವಾಹನಗಳ ಫಿಟ್ನೆಸ್ ನವೀಕರಣ ಶುಲ್ಕ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ ಮಾಲೀಕರುಗಳ ಮೇಲೆ ಆರ್ಥಿಕ ಹೊರೆ ಜಾಸ್ತಿಯಾಗಿದೆ. ಇದರ ಜೊತೆ ಡೀಸೆಲ್ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ಹಳೆಯ ಲಾರಿ ಮಾಲೀಕರುಗಳು ಹೆಚ್ಚಿನ ಶುಲ್ಕವನ್ನು ಭರಿಸಲು ಆಗದೆ ಅತಂತ್ರರಾಗಿದ್ದಾರೆ. ಇದರಿಂದ ಸಾರಿಗೆ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಇದನ್ನೆ ನೆಚ್ಚಿಕೊಂಡಿರುವ ಸಾವಿರಾರು ಕುಟುಂಬಗಳ ದಿನನಿತ್ಯದ ಜೀವನಕ್ಕೂ ಸಂಚಕಾರವಾಗಿದೆ. ಹಾಗಾಗಿ ಹಳೆಯ ವಾಹನಗಳ ಫಿಟ್ನೆಸ್ ನವೀಕರಣ ಶುಲ್ಕದ ಹೆಚ್ಚಳವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ವಿಎಲ್‍ಟಿಡಿ. ವಿತ್ ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಿದ್ದು, ಸರಕು ಸಾಗಾಣಿಕೆ ವಾಹನಗಳಲ್ಲಿ ಯಾವುದೇ ಬಗೆಯ
ಪ್ರಯಾಣಿಕರಿಗೆ ಅವಕಾಶವಿಲ್ಲ. ಪಬ್ಲಿಕ್ ಸರ್ವಿಸ್ ವಾಹನಗಳಿಗೆ ಮಾತ್ರ ಸರ್ವೊಚ್ಚ ನ್ಯಾಯಾಲಯ ಕಡ್ಡಾಯಗೊಳಿಸಿ ಆದೇಶಿಸಿರುವುದರಿಂದ ಸರಕು ಸಾಗಾಣಿಕೆ ವಾಹನಗಳಿಗೆ ರಿಯಾಯಿತಿ ನೀಡಿ ಲಾರಿ ಮಾಲೀಕರುಗಳಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ತಪ್ಪಿಸುವಂತೆ ಜಿಲ್ಲಾ ಟ್ರಕ್ಕರ್ಸ್ ಅಸೋಸಿಯೇಷನ್‍ನವರು ಆಗ್ರಹಿಸಿದರು. ಮನ್ಸೂರ್, ವಿಶ್ವನಾಥ್, ಅಬ್ದುಲ್ ಸತ್ತಾರ್, ರೆಹಮಾನ್, ಸಂತೋಷ್, ಶ್ರೀನಿವಾಸ್, ವಸೀಂ, ಲೋಕೇಶ್, ಸಾಧಿಕ್ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.










