ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ,(ಮಾ.16) : ನಾನು ಎಂದಿಗೂ ಯಾವ ಜಾತಿ ಬಗ್ಗೆಯಾಗಲಿ, ಧರ್ಮದ ಬಗ್ಗೆಯಾಗಲಿ, ಹಗುರವಾಗಿ ಮಾತನಾಡಿಲ್ಲ, ಸಣ್ಣ ಸಮುದಾಯದಿಂದ ಬಂದಿರುವ ನನಗೆ ಎಲ್ಲಾ ಸಮುದಾಯಗಳ ಬಗ್ಗೆ ಆಪಾರವಾದ ಗೌರವವಿದೆ. ಈ ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡುತ್ತಿರುವುದರಿಂದ ಕೆಲವು ಕಿಡಿಗೇಡಿಗಳು ಈ ರೀತಿಯಾದ ನನ್ನ ಧ್ವನಿಯ ನಕಲಿ ಆಡಿಯೋವನ್ನು ಬಿಡುಗಡೆ ಮಾಡಿ ಕೀಳು ಮಟ್ಟದ ಅಪಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ರಘುಆಚಾರ್ ಸ್ಪಷ್ಟ ಪಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ತಮ್ಮ ಆಡಿಯೋದ ಧ್ವನಿಯ ಬಗ್ಗೆ ಮಾತನಾಡಿದ ಅವರು, ಕೆಲವೊಂದು ವ್ಯಕ್ತಿಗಳು ನನನ್ನು ತೇಜೋವಧೆ ಮಾಡಲು ಈ ರೀತಿಯಾದ ನಕಲಿ ಆಡೀಯೋಗಳನ್ನು ಬಿಡುಗಡೆ ಮಾಡಿ ಒಂದು ಧರ್ಮದ ಜನತೆಯನ್ನು ನನ್ನ ಮೇಲೆ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದರು.
ನಾನು ಯಾವಾಗಲೂ ಜಾತಿ ಧರ್ಮದ ಬಗ್ಗೆ ಎಲ್ಲಿಯೂ ಕೇಳಿಲ್ಲ ಇದನ್ನು ಕೇಳುವ ಅಗತ್ಯವೂ ನನಗೆ ಇಲ್ಲ ನನ್ನ ಬಳಿ ಎಲ್ಲಾ ಜಾತಿ, ಧರ್ಮದವರು ಬರುತ್ತಾರೆ. ಅವರನ್ನು ಮಾತನಾಡಿಸಿ ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ. ಇದನ್ನು ಸಹಿಸದ ಕೆಲವರು ನನ್ನ ವೈಯುತ್ತಿಕವಾಗಿ ತೇಜೋವಧೆಗೆ ಮುಂದಾಗಿದ್ದಾರೆ.
ನನ್ನದೇ ಧ್ವನಿಯನ್ನು ಹೋಲುವ ನಕಲಿ ಆಡಿಯೋ ಬಳಸಿಕೊಂಡು ನಾನು ಲಿಂಗಾಯತ ಸಮುದಾಯಕ್ಕೆ ಹಗುರವಾಗಿ ಮಾತನಾಡಿದ್ದೇನೆ ಮತ್ತು ಪಕ್ಷದ ಹಿರಿಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಬಗ್ಗೆ ಈಗಾಗಲೇ ಎಸ್.ಪಿಯವರಿಗೆ ದೂರನ್ನು ನೀಡಲಾಗಿದೆ. ಇಂತಹ ಕಪೋಲ ಕಲ್ಪಿತ ಆಡಿಯೋಗಳ ಬಗ್ಗೆ ಸಮುದಾಯದವರು ಕಿವಿಗೂಡಬಾರದೆಂದು ಮನವಿ ಮಾಡಿದರು.
ನಾನು ಯಾವತ್ತೂ ಜಾತಿ ರಾಜಕೀಯವನ್ನು ಮಾಡಿಲ್ಲ. ಯಾರನ್ನು ಸಹಾ ಜಾತಿಯಿಂದ ಗುರುತಿಸಿಲ್ಲ. ಸಣ್ಣ ಜಾತಿಯವನಾದ ನನ್ನ ಎರಡು ಬಾರಿ ವಿಧಾನ ಪರಿಷತ್ವ ಸದಸ್ಯರಾಗಿ ಮಾಡಿದ್ದಾರೆ. ಅವರ ಋಣ ನನ್ನ ಮೇಲಿದೆ. ನಾನು ಇದಕ್ಕೆ ಹೆದರುವುದಿಲ್ಲ, ಚಿತ್ರದುರ್ಗ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಸ್ಪರ್ಧೆ ಮಾಡುತ್ತೇನೆ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಘು ಆಚಾರ್ ತಿಳಿಸಿದರು.
ಲಿಂಗಾಯತ ಸಮುದಾಯದವರು ಬೇಷರತ್ ಕ್ಷಮೆಯಾಚನೆಗೆ ಒತ್ತಾಯ ಮಾಡಿದ್ದಾರೆ. ಎನ್ನುವ ಪ್ರಶ್ನೆಗೆ ನಾನು ತಪ್ಪೇ ಮಾಡಿಲ್ಲ ಆಡಿಯೋ ನನ್ನದಲ್ಲ ಆಂದ ಮೇಲೆ ಕ್ಷಮೆ ಯಾಚನೆ ಮಾಡುವುದು ಎಲ್ಲಿಂದ ಬಂತು ಎಂದು ಉತ್ತರಿಸಿದರು.
ನಾನು ಲಿಂಗಾಯತರು ಹಾಗು ಅಹಿಂದ ಪರವಾಗಿದ್ದೇನೆಯೇ ಹೊರತು, ಯಾರಿಗೂ ವಿರೋಧಿಯಲ್ಲ, ನಾನು ಸುತ್ತೂರು ಮಠದಲ್ಲಿ ಓದಿ ಬೆಳೆದವನಾಗಿದ್ದು, ನನ್ನ ಜೀವಮಾನದಲ್ಲಿ ಎಂದೂ ಜಾತಿ ಬೇಧಮಾಡಿ ಗೊತ್ತಿಲ್ಲ.
ಮಠ ಮಾನ್ಯಗಳು ನಮ್ಮ ಸಂಸ್ಕೃತಿಯ ಪ್ರತೀಕ, ನನಗೆ ಸುತ್ತೂರು ಮಠ ಸಂಸ್ಕಾರ ಕಲಿಸಿಕೊಟ್ಟಿದೆ. ನನಗೆ ಎಲ್ಲಾ ಜಾತಿ ಧರ್ಮಗಳ ಬಗ್ಗೆ ಗೌರವವಿದೆ. ನಾನು ಯಾವುದೇ ಜಾತಿ ಧರ್ಮದ ವಿರುದ್ದ ಹಗುರವಾಗಿ ಮಾತನಾಡಿಲ್ಲ.
ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಕಿಡಿಗೇಡಿಗಳು ಬಿಡುಗಡೆ ಮಾಡಿರುವ ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಯಾರೋ ಕಿಡಿಗೇಡಿಗಳು ಯಾರದೋ ಆಡಿಯೋ ಬಳಸಿಕೊಂಡು ನನ್ನ ವಿರುದ್ದ ಷಢ್ಯಂತ್ರ ಮಾಡಿ ನನ್ನ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ.
ಈಗಾಗಲೇ ನಾನು ಪೊಲೀಸ್ ಇಲಾಖೆಗೆ ದೂರು ನೀಡಿದ್ದೇನೆ, ಕ್ಷಮೆ ಕೇಳಬೇಕು ಎನ್ನುತ್ತಿರುವವರು ಮೊದಲು ನನ್ನ ತಪ್ಪನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದ ರಘು ಆಚಾರ್, ರಾಜಕೀಯ ಮಾಡುವವರು ನೇರವಾಗಿ ಚುನಾವಣೆ ಎದುರಿಸಬೇಕು, ಅದನ್ನು ಬಿಟ್ಟು ಇಂತಹ ಕೀಳು ಮಟ್ಟಕ್ಕೆ ಇಳಿದು, ಕಡಿಮೆ ಜನಸಂಖ್ಯೆ ಇರುವ ಸಮುದಾಯದಿಂದ ಬಂದಿರುವ ನನ್ನ ವಿರುದ್ದ ಕುತಂತ್ರ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾನು ಪ್ರಾಮಾಣಿಕವಾಗಿ ಅಭಿವೃದ್ದಿ ರಾಜಕೀಯ ಮಾಡುತ್ತೇನೆ ಹೊರತು, ತೀರಾ ಇಷ್ಟು ಕೆಳಮಟ್ಟಕ್ಕೆ ಇಳಿದು ರಾಜಕೀಯ ಮಾಡುವುದಿಲ್ಲ, ನಾನು ತಪ್ಪು ಮಾಡಿದ್ದರೆ ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದೆ, ತಪ್ಪೇ ಮಾಡದಿದ್ದಾಗ ಕ್ಷಮೆ ಕೇಳುವ ಅಗತ್ಯವಿಲ್ಲ, ಬದಲಾಗಿ ನನ್ನ ವಿರುದ್ದ ನಕಲಿ ಆಡಿಯೋ ಬಿಟ್ಟಿರುವ ವ್ಯಕ್ತಿ ನನ್ನ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಮುಖಂಡ ಕೆ.ಆರ್ ಪುನೀತ್ ಸಿಂಗಾಪುರ, ದಲಿತ ಮುಖಂಡ ಕ್ಯಾದಿಗೆರೆ ತಿಪ್ಪೇಸ್ವಾಮಿ, ವಾಲ್ಮೀಕಿ ಸಮುದಾಯದ ಆನಂದ್, ಕಾಂಗ್ರೆಸ್ ಮುಖಂಡರಾದ ಮಹಮದ್ ರೆಹಮಾನ್, ವಸೀಂ ಬಡಾಮಖಾನ್ ಹಾಜರಿದ್ದರು.