ಬೆಳೆ ಸಮೀಕ್ಷೆ ವ್ಯತ್ಯಾಸ: ಮರು ಪರಿಶೀಲಿಸಿ ಬೆಳೆವಿಮೆ ಪರಿಹಾರ ವಿತರಣೆಗೆ ಕ್ರಮ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭರವಸೆ

3 Min Read

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ. ಮೇ.07:  ಬೆಳೆ ಸಮೀಕ್ಷೆಯಲ್ಲಿ ಉಂಟಾದ ವ್ಯತ್ಯಾಸದಿಂದ ಚಳ್ಳಕೆರೆ ತಾಲ್ಲೂಕಿನ ಸೋಮಗುದ್ದು, ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ ಆಗದಿರುವುದು ಗಮನಕ್ಕೆ ಬಂದಿದೆ. ಈ ಭಾಗದ ರೈತರ ಜಮೀನುಗಳಲ್ಲಿ ಪುನಃ ಮರು ಪರಿಶೀಲಿಸಿ ಬೆಳೆವಿಮೆ ಪರಿಹಾರ ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ರೈತರಿಗೆ ಭರವಸೆ ನೀಡಿದರು.

 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಬೆಳೆವಿಮೆ ಸಂಬಂಧ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಳ್ಳಕೆರೆ ತಾಲ್ಲೂಕು ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಇಂತಹ ಸಂದರ್ಭದಲ್ಲಿ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆವಿಮೆ ವಿತರಣೆಯಾಗದಿರುವುದು, ಬೆಳೆವಿಮೆ ಹಣ ಪಾವತಿಯಲ್ಲಿಯೂ ವ್ಯತ್ಯಾಸ ಆಗಿರುವುದು ಹಾಗೂ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಡಾಟಾ ಎಂಟ್ರಿ ಮಾಡುವ ಸಂದರ್ಭದಲ್ಲಿ ಆಗಿರುವ ತಪ್ಪುಗಳು ಸಹ ಗಮನಕ್ಕೆ ಬಂದಿವೆ. ಬೆಳೆ ಸಮೀಕ್ಷೆಯ ಸಂದರ್ಭದಲ್ಲಿ ಆಗಿರುವ ವ್ಯತ್ಯಾಸದ ಕುರಿತು ಈಗಾಗಲೇ ಚರ್ಚಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪುನಃ ಪರಿಶೀಲಿಸಿ, ಬೆಳೆವಿಮೆ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

 

ಬೆಳೆ ಸಮೀಕ್ಷೆ ಕ್ರಮಬದ್ಧವಾಗಿಲ್ಲ. ಮಳೆ ಆಶ್ರಿತ ಜಮೀನುಗಳಲ್ಲಿ ನಡೆಸಬೇಕಾದ ಬೆಳೆ ಕಟಾವು ಪ್ರಯೋಗವನ್ನು ನೀರಾವರಿ ಜಮೀನುಗಳ ಸರ್ವೇ ನಂಬರ್‌ಗಳಲ್ಲಿ ನಡೆಸಲಾಗಿದೆ. ಈ ಅಚಾತುರ್ಯ ಮಾಡಿದ ಪಿಡಿಓಗಳಿಗೆ ನೋಟಿಸ್ ನೀಡಲಾಗಿದೆ. ವರದಿ ಆಧಿರಿಸಿ ಇವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಬೆಳೆ ಸಮೀಕ್ಷೆ ತಪ್ಪಿನಿಂದಾಗಿ ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಿಗೂ ಪರಿಣಾಮ ಬೀರಿದೆ ಎಂದು ರೈತರು ಮಾಹಿತಿ ನೀಡಿದ್ದು, ಇದು ಅವೈಜ್ಞಾನಿಕ ಕ್ರಮವಾಗಿದೆ. ಈ ಕುರಿತು ಸೂಕ್ತ ಕ್ರಮಕೈಗೊಂಡು ಬೆಳೆ ನಷ್ಟ ಉಂಟಾದ ರೈತರಿಗೆ ಕಡ್ಡಾಯವಾಗಿ ಬೆಳೆವಿಮೆ ಪಾವತಿಗೆ ಕ್ರಮವಹಿಸಲಾಗುವುದು ಎಂದು ಹೇಳಿದರು

ರೈತರ ಸಾಲದ ಖಾತೆಗೆ ಜಮೆ ಮಾಡದಂತೆ ಸೂಚನೆ: ರೈತರಿಗೆ ನೀಡುವ ಬೆಳೆವಿಮೆ, ಸರ್ಕಾರಿ ಸೌಲಭ್ಯ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣೆ ಹಣವನ್ನು ರೈತರ ಸಾಲದ ಖಾತೆಗಳಿಗೆ ಜಮೆ ಮಾಡುವಂತಿಲ್ಲ. ಈಗಾಗಲೇ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದು, ರೈತರ ಸಾಲದ ಖಾತೆಗೆ ಬೆಳೆವಿಮೆ ಹಣ ಜಮೆ ಮಾಡದಂತೆ ಕ್ರಮವಹಿಸಲಾಗಿದೆ. ಇದರ ಜೊತೆಗೆ ಬೆಳೆ ಪರಿಹಾರ ವಿತರಣೆಗೂ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

 

ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಚಳ್ಳಕೆರೆ ತಾಲ್ಲೂಕಿನ ಸೋಮಗುದ್ದು ಗ್ರಾಮ ಪಂಚಾಯಿತಿ ಹೊರತುಪಡಿಸಿ ಎಲ್ಲ ಪಂಚಾಯಿತಿಗಳಿಗೂ ಬೆಳೆವಿಮೆ ಹಣ ಬಂದಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬೆಳೆವಿಮೆ ಪಾವತಿಯಾಗದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿ ಸೂಕ್ತ ದಾಖಲೆಗಳೊಂದಿಗೆ ವಿಮಾ ಕಂಪನಿಗೆ ಆಗಿರುವ ಲೋಪದೋಷ ಸರಿಪಡಿಸಿ ಬೆಳೆವಿಮೆ ಪಾವತಿಸಲು ಸೂಚನೆ ನೀಡಲಾಗುವುದು ಎಂದರು.

 

ಜಿಲ್ಲೆಯ ರೈತರು ಬೆಳೆವಿಮೆ ಪಾವತಿಗೆ ರೂ.11.92 ಕೋಟಿ ಹಣ ಪಾವತಿಸಿದ್ದು, ಜಿಲ್ಲೆಗೆ ರೂ.284 ಕೋಟಿ ರೂಪಾಯಿ ಬೆಳೆವಿಮೆ ಹಣ ಬಂದಿದೆ. ಬೆಳೆವಿಮೆ ಹಣದ ಒಟ್ಟು ಮೊತ್ತದಲ್ಲಿ ಚಳ್ಳಕೆರೆ ತಾಲ್ಲೂಕಿಗೆ ಶೇ.51ರಷ್ಟು ಹಣ ಬಂದಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಸೇರಿದಂತೆ ಸಾಂಖ್ಯಿಕ ಇಲಾಖೆ ಅಧಿಕಾರಿಗಳು, ಬೆಳೆವಿಮೆ ಪ್ರತಿನಿಧಿ, ರೈತರ ಸಂಘದ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಕೆ.ಪಿ.ಭೂತಯ್ಯ, ಚಿಕ್ಕಪನಹಳ್ಳಿ ರುದ್ರಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಬ್ಯಾರಡಹಳ್ಳಿ ಶಿವಕುಮಾರ, ನಿವೃತ್ತ ಪ್ರಾಚಾರ್ಯ ಶಿವಲಿಂಗಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ ಸೇರಿದಂತೆ ರೈತರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *