ಕೇರಳ : ನಿನ್ನೆಯಷ್ಟೇ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ಮತ್ತು ಅದರ ಸಹವರ್ತಿ ಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಈ ಮಧ್ಯೆ ಕೇರಳ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಪಿಎಫ್ಐ ವಿರುದ್ಧ ಕೇರಳ ಹೈಕೋರ್ಟ್ ಮೊರೆ ಹೋಗಿತ್ತು. ಇದೀಗ ಅದರ ತೀರ್ಪು ಬಂದಿದ್ದು, ಕೆಎಸ್ಆರ್ಟಿಸಿಗೆ ಜಯವಾಗಿದೆ.
ಕೇರಳ ಹೈಕೋರ್ಟ್ ಪಿಎಫ್ಐಗೆ ಸೂಚನೆ ನೀಡಿದ್ದು, 5.20 ಕೋಟಿ ಹಣವನ್ನು ಕೂಡಲೇ ಪರಿಹಾರವಾಗಿ ಡೆಪಾಸಿಟ್ ಮಾಡುವಂತೆ ಸೂಚನೆ ನೀಡಿದೆ. ಕೆಎಸ್ಆರ್ಟಿಸಿ ದಾಖಲಿಸಿದ್ದ ಕೇಸ್ ಅನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ಮತ್ತು ಸಿಪಿ ಮೊಹಮ್ಮದ್ ಈ ತೀರ್ಪು ನೀಡಿದ್ದಾರೆ.
ಇನ್ನು ಎಲ್ಲೆಲ್ಲಿ ಬಸ್ ಗಳಿಗೆ ಹಾನಿಯಾಗಿದೆಯೋ ಎಲ್ಲೆಲ್ಲಾ ನ್ಯಾಯಾಲಯವೂ ಸುಮೊಟೋ ಕೇಸ್ ದಾಖಲಿಸಬೇಕು. ಪರಿಹಾರ ನೀಡುವ ತನಕ ಜಾಮೀನು ಸಿಗದಂತೆ ನೋಡಿಕೊಳ್ಳಬೇಕು ಅಂತ ಸೂಚಿಸಿದೆ. ಪಿಎಫ್ಐ ಮುಖಂಡರ ಮನೆ ಮೇಲೆ ಎನ್ಐಎ ನಡೆಸಿದ ದಾಳಿಯನ್ನು ಖಂಡಿಸಿ, ಪಿಎಫ್ಐ ಮುಖಂಡರು ಸೆಪ್ಟೆಂಬರ್ 23ರಂದು ಕೇರಳ ಬಂದ್ ಗೆ ಕರೆ ನೀಡಿದ್ದರು. ಈ ವೇಳೆ ಸಾರಿಗೆ ವಾಹನದ ಮೇಲೂ ಕಲ್ಲು ತೂರಾಟ ನಡೆದಿತ್ತು. ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಸಂಬಂಧ ನಿನ್ನೆ ಕೆಎಸ್ಆರ್ಟಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್, 5.20 ಕೋಟಿ ಪರಿಹಾರ ನೀಡುವಂತೆ ಪಿಎಫ್ಐಗೆ ಸೂಚನೆ ನೀಡಿದೆ.