ವಿಶೇಷ ಲೇಖನ: ಕೆ. ಪಿ. ಎಂ. ಗಣೇಶಯ್ಯ, ನೀನಾಸಂ-93, ರಂಗ ನಿರ್ದೇಶಕರು, ಚಿತ್ರದುರ್ಗ (ದೂರವಾಣಿ: 9448664878)
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 12 : ನವೆಂಬರ್ ತಿಂಗಳು ಬಂತೆಂದರೆ ಕನ್ನಡಿಗರ ಮೈಮನಗಳಲ್ಲಿ ಕನ್ನಡದ ಸ್ವಾಭಿಮಾನ, ಜಾಗೃತಿ ಮತ್ತು ನಾಡಪ್ರೇಮವು ಗರಿಗೆದರುವುದು ಸಹಜ. ಕನ್ನಡ ರಾಜ್ಯೋತ್ಸವದ ಈ ಭವ್ಯ ಸಂಭ್ರಮದ ಸಂದರ್ಭದಲ್ಲಿ, ನಾಡು, ನುಡಿ, ಸಾಹಿತ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟ ಎಷ್ಟೋ ಮಹನೀಯರನ್ನು ನಾವು ಕೃತಜ್ಞತೆಯಿಂದ ನೆನೆಯಬೇಕಾಗಿದೆ. ಇಂತಹ ತ್ಯಾಗಜೀವಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ, ಗಾಂಧೀಜಿ ಹಾಗೂ ವಿನೋಬಾ ಭಾವೆಯವರ ಸರ್ವೋದಯದ ವಿಚಾರಧಾರೆಗಳನ್ನು ಕನ್ನಡ ನಾಡಿಗೆ ಪಸರಿಸಿದ, ಪತ್ರಿಕೋದ್ಯಮದ ಮೂಲಕ ಬ್ರಿಟಿಷರ ಕಿಚ್ಚೆಬ್ಬಿಸಿದ ಅಪ್ರತಿಮ ದೇಶಭಕ್ತ ಹಾಗೂ ಸಾಹಿತಿ ಶ್ರೀ ಸಿದ್ಧವ್ವನಹಳ್ಳಿ ಕೃಷ್ಣಶರ್ಮರು ಅತಿಮುಖ್ಯರಾಗುತ್ತಾರೆ. ವಂಶಪಾರಂಪರ್ಯವಾಗಿ ಬಂದ ಅಗಾಧವಾದ ವಿದ್ವತ್ತು ಹಾಗೂ ಅಪಾರವಾದ ದೇಶಪ್ರೇಮವನ್ನು ತಮ್ಮಲ್ಲಿ ಮೈಗೂಡಿಸಿಕೊಂಡಿದ್ದ ಇವರು ಕನ್ನಡಿಗರು ಎಂದೆಂದೂ ಹೆಮ್ಮೆಪಡುವಂತಹ ಅಪರೂಪದ ವ್ಯಕ್ತಿತ್ವದವರಾಗಿದ್ದರು.
ಜೀವನ ಮತ್ತು ಸಾಂಸ್ಕೃತಿಕ ಹಿನ್ನೆಲೆ
ಚಿತ್ರದುರ್ಗ ತಾಲ್ಲೂಕಿನ ಸಿದ್ಧವ್ವನಹಳ್ಳಿ ಗ್ರಾಮದಲ್ಲಿ ಜುಲೈ 4, 1904ರಂದು ಜನಿಸಿದ ಕೃಷ್ಣಶರ್ಮರ ತಾಯಿ ಶೇಷಮ್ಮ ಮತ್ತು ತಂದೆ ರಂಗಾಚಾರ್. ಅಂದಿನ ಮೈಸೂರು ಮಹಾರಾಜರಿಗೆ ರಾಜಗುರುಗಳಾಗಿದ್ದ ಪ್ರಕಾಂಡ ಪಂಡಿತರಾದ ಶ್ರೀನಿವಾಸ ಬ್ರಹ್ಮತಂತ್ರ ಪರಕಾಲ ಯತೀಂದ್ರರು ಶರ್ಮರ ಸಾಕ್ಷಾತ್ ತಾತಂದಿರು. ಇಂಥ ಘನತೆವೆತ್ತ ಸುಸಂಸ್ಕೃತ ಮನೆತನದಿಂದ ಬಂದ ಇವರಿಗೆ ವಿದ್ವತ್ತು ಮತ್ತು ಮೌಲ್ಯಯುತ ನಡವಳಿಕೆಗಳು ರಕ್ತಗತವಾಗಿಯೇ ಒಲಿದು ಬಂದಿದ್ದವು. ಹುಟ್ಟೂರಿನಲ್ಲಿ ಪ್ರಾಥಮಿಕ ಶಾಲೆಯಲ್ಲಿದ್ದಾಗ ಸಂಜೆ ವೇಳೆಗೆ ಉಪಾಧ್ಯಾಯರಾದ ಸೂರಪ್ಪನವರು ಓದುತ್ತಿದ್ದ ಭಾರತವಾಚನದಿಂದ ಅತ್ಯಂತ ಆಕರ್ಷಿತರಾದ ಇವರು, ಚಿತ್ರದುರ್ಗದ ಆಂಗ್ಲೋ ಏರ್ನಾಕ್ಯುಲರ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ನಂತರ ಕನ್ನಡ ಪಂಡಿತರಾದ ಗರಣಿ ರಂಗಾಚಾರ್ಯರಿಂದ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಉನ್ನತ ಪಾಂಡಿತ್ಯ ಸಾಧಿಸಿದರು. ಜೊತೆಗೆ ಹನುಮಂತರಾಯರಿಂದ ಛಂದಸ್ಸಿನ ಜ್ಞಾನ ಪಡೆದರು. ಹೈಸ್ಕೂಲ್ ಹಂತದಲ್ಲಿಯೇ ಬಹುಮಾನವಾಗಿ ಬಂದ ಬಿ. ವೆಂಕಟಾಚಾರ್ಯರ ‘ವಂಗವಿಜೇತ’ ಮತ್ತು ‘ವಿಷವೃಕ್ಷ’ ಕಾದಂಬರಿಗಳನ್ನು ಓದಿ ಕನ್ನಡ ಸಾಹಿತ್ಯದತ್ತ ಅಪಾರ ಒಲವು ಬೆಳೆಸಿಕೊಂಡರು. ಚಿಕ್ಕಪ್ಪನವರ ಮನೆಯಲ್ಲಿದ್ದ ಪುರಾಣ ಗ್ರಂಥಗಳ ಓದು ಇವರ ಜ್ಞಾನದ ದಾಹವನ್ನು ಹೆಚ್ಚಿಸಿತು. ಯೌವನದಲ್ಲಿಯೇ ಮೈಸೂರಿನ ‘ಮಧುರವಾಣಿ’ ಹಾಗೂ ಕೈಬರಹದ ‘ವಾಣಿವಿಲಾಸ’ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುವ ಮೂಲಕ ಇವರ ಸಾರ್ಥಕ ಸಾಹಿತ್ಯ ಪಯಣ ಭರವಸೆಯಿಂದ ಆರಂಭವಾಯಿತು.
ಹೈದರಾಬಾದಿನಲ್ಲಿ ಕನ್ನಡದ ಕಹಳೆ ಮತ್ತು ನಿಜಾಮರಿಂದ ಗಡಿಪಾರು
ಮೈಸೂರಿನ ಕಾಲೇಜೊಂದರಲ್ಲಿ ಬಿ.ಎ ಪದವಿ ಓದುತ್ತಿದ್ದಾಗ ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ತಮ್ಮ ವಿದ್ಯಾಭ್ಯಾಸವನ್ನು ಬದಿಗಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ದಿಟ್ಟತನ ಶರ್ಮರದ್ದು. ಆನಂತರ ಪಂಡಿತ ತಾರಾನಾಥರ ‘ಪ್ರೇಮಾಯತನ’ ಆಶ್ರಮದಲ್ಲಿ ಕೆಲಕಾಲ ಕಾರ್ಯನಿರ್ವಹಿಸಿ ಮಾಗಿದರು. 1925ರಲ್ಲಿ ವಿವಾಹವಾದ ನಂತರ ಹೈದರಾಬಾದಿನ ಮೆಥಡಿಕ್ಸ್ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. ಆಗಿನ ಹೈದರಾಬಾದ್ ಕರ್ನಾಟಕ ಭಾಗದ ಶಾಲೆಗಳಲ್ಲಿ ಕನ್ನಡವನ್ನು ಉರ್ದುವಿನ ಮೂಲಕವೇ ಬೋಧಿಸಲಾಗುತ್ತಿತ್ತು. ಈ ಪದ್ಧತಿಯನ್ನು ಧಿಕ್ಕರಿಸಿ, ಕನ್ನಡ ಭಾಷೆಯನ್ನು ಅಪ್ಪಟ ಕನ್ನಡದಲ್ಲೇ ಬೋಧಿಸಿದ ಮೊಟ್ಟಮೊದಲ ಅಧ್ಯಾಪಕ ಎಂಬ ಐತಿಹಾಸಿಕ ಕೀರ್ತಿಗೆ ಶರ್ಮರು ಭಾಜನರಾದರು. ಕೇವಲ ಅಧ್ಯಾಪನಕ್ಕೆ ಸೀಮಿತವಾಗದೆ, ನಿಜಾಮರ ದಬ್ಬಾಳಿಕೆಯ ವಿರುದ್ಧ ಕನ್ನಡಿಗರು, ಮರಾಠಿಗರು ಮತ್ತು ತೆಲುಗರನ್ನು ಒಗ್ಗೂಡಿಸಲು ಭಾಷಾ ಸಂಘಗಳನ್ನು ಸ್ಥಾಪಿಸಿದರು. ಸಾರ್ವಜನಿಕವಾಗಿ ರಾಷ್ಟ್ರೀಯ ಗೀತೆಗಳನ್ನು ಹಾಡುವುದು, ಪ್ರಭಾತ್ ಫೇರಿ ನಡೆಸುವುದು ಹಾಗೂ ಖಾದಿ ಪ್ರಚಾರ ಮಾಡುವುದು ಮುಂತಾದ ರಾಷ್ಟ್ರಭಕ್ತಿಯ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರಿಂದ ಕೆರಳಿದ ನಿಜಾಮ್ ಸರ್ಕಾರ ಇವರನ್ನು ಹೈದರಾಬಾದಿನಿಂದಲೇ ಗಡಿಪಾರು ಮಾಡಿತು. ಗಡಿಪಾರಿನ ನಂತರ ಚಿತ್ರದುರ್ಗಕ್ಕೆ ಮರಳಿದ ಅವರು, ಧಾರವಾಡದಲ್ಲಿ ದ.ರಾ. ಬೇಂದ್ರೆ, ವಿ.ಕೃ. ಗೋಕಾಕ್ ಮುಂತಾದ ದಿಗ್ಗಜರಿದ್ದ ‘ಗೆಳೆಯರ ಗುಂಪು’ ಸೇರಿ ಕನ್ನಡದ ಕೈಂಕರ್ಯವನ್ನು ಇನ್ನಷ್ಟು ತೀವ್ರಗೊಳಿಸಿದರು.
ಅಕ್ಷರಗಳ ಮೂಲಕ ರಾಷ್ಟ್ರೀಯತೆಯ ಜಾಗೃತಿ ಮತ್ತು ಪತ್ರಿಕೋದ್ಯಮ
ಕೃಷ್ಣಶರ್ಮರ ಬರವಣಿಗೆ ಎಂದರೆ ಅದು ಅಕ್ಷರ ರೂಪದ ಬೆಂಕಿಯ ಕಿಡಿ. 1941ರಲ್ಲಿ ವಾರ್ಧಾ ಆಶ್ರಮದಲ್ಲಿದ್ದು ಗಾಂಧೀಜಿಯವರ ಒಡನಾಟ ಪಡೆದ ನಂತರ, 1942ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದರು. ಆಗ ತಿ.ತಾ. ಶರ್ಮರು ನಡೆಸುತ್ತಿದ್ದ ಸುಪ್ರಸಿದ್ಧ ‘ವಿಶ್ವಕರ್ನಾಟಕ’ ಪತ್ರಿಕೆಯ ಸಹಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡರು. ಈ ಇಬ್ಬರು ಶರ್ಮರ ಬರವಣಿಗೆಯ ಶೈಲಿ ಎಷ್ಟೊಂದು ಏಕರೂಪವಾಗಿತ್ತು ಎಂದರೆ, ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಸಂಪಾದಕರದ್ದೋ ಅಥವಾ ಸಹಸಂಪಾದಕರದ್ದೋ ಎಂದು ಪತ್ತೆಹಚ್ಚುವುದು ಸ್ವತಃ ಓದುಗರಿಗೇ ಅಸಾಧ್ಯವಾಗಿತ್ತು. ಇವರಿಬ್ಬರ ಹರಿತವಾದ ಭಾಷೆ ಮತ್ತು ಕಿಚ್ಚೆಬ್ಬಿಸುವ ಪದಪ್ರಯೋಗ ಯುವಜನತೆಯಲ್ಲಿ ಸ್ವಾತಂತ್ರ್ಯದ ಅಗ್ನಿಯನ್ನು ಹೊತ್ತಿಸುತ್ತಿತ್ತು. ಇವರು ಅತ್ಯಂತ ಕಾಳಜಿಯಿಂದ ನಿರ್ವಹಿಸುತ್ತಿದ್ದ ‘ಮಾತಿನ ಮಂಟಪ’ ಹಾಗೂ ‘ಚಿಂತನ-ಮಂಥನ’ ಎಂಬ ಅಂಕಣಗಳು ಆ ಕಾಲಕ್ಕೆ ಭಾರಿ ಜನಮನ್ನಣೆ ಗಳಿಸಿದ್ದವು. ಕೇವಲ ವಿಶ್ವಕರ್ನಾಟಕ ಮಾತ್ರವಲ್ಲದೆ ವಾಹಿನಿ, ಜಯಕರ್ನಾಟಕ, ನವೋದಯ, ಭೂದಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ಮುಖವಾಣಿ ‘ಕನ್ನಡನುಡಿ’ ಪತ್ರಿಕೆಗಳಲ್ಲೂ ಇವರು ಅತ್ಯಮೂಲ್ಯ ಸೇವೆ ಸಲ್ಲಿಸಿದರು.
ಗಾಂಧಿ ವಿಚಾರಧಾರೆ ಮತ್ತು ಅನುವಾದ ಸಾಹಿತ್ಯದ ಕೊಡುಗೆ
ಶರ್ಮರ ಬದುಕಿನ ಮೇಲೆ ಗಾಂಧೀಜಿ ಮತ್ತು ವಿನೋಬಾ ಭಾವೆಯವರ ಪ್ರಭಾವ ಅಪಾರವಾಗಿತ್ತು. ವಾರ್ಧಾ ಆಶ್ರಮದ ಅನುಭವಗಳ ಆಧಾರದ ಮೇಲೆ, ಗಾಂಧೀಜಿಯವರ ದಿನಚರಿಯ ಕುರಿತು ‘ವಾರ್ಧಾಯಾತ್ರೆ’ ಮತ್ತು ‘ಪರ್ಣಕುಟಿ’ ಎಂಬ ಶ್ರೇಷ್ಠ ಗದ್ಯ ಕೃತಿಗಳನ್ನು ರಚಿಸಿದರು. ಇವು ಗಾಂಧೀಜಿಯವರ ಬಗ್ಗೆ ಕನ್ನಡದಲ್ಲಿ ಬಂದಿರುವ ಅತ್ಯುತ್ತಮ ಕೃತಿಗಳೆನಿಸಿವೆ. ಹಿಂದಿ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳಲ್ಲಿ ಅದ್ಭುತ ಪ್ರಾವೀಣ್ಯತೆ ಹೊಂದಿದ್ದ ಇವರು, ರಾಷ್ಟ್ರೀಯ ನಾಯಕರ ಭಾಷಣಗಳನ್ನು ಕನ್ನಡಕ್ಕೆ ಅತ್ಯಂತ ಸುಲಲಿತವಾಗಿ ಅನುವಾದಿಸುತ್ತಿದ್ದರು. ಈ ಕಾರಣಕ್ಕಾಗಿಯೇ ದೊಡ್ಡ ನಾಯಕರು ತಮ್ಮ ಭಾಷಣದ ಅನುವಾದಕ್ಕೆ ಶರ್ಮರನ್ನೇ ಆಹ್ವಾನಿಸುತ್ತಿದ್ದರು. ವಿನೋಬಾ ಭಾವೆಯವರು ಭೂದಾನ ಯಜ್ಞದ ಪ್ರಚಾರಕ್ಕಾಗಿ ಪಾದಯಾತ್ರೆ ಕೈಗೊಂಡಾಗ ಅವರ ಜೊತೆಯಲ್ಲೇ ಹೆಜ್ಜೆಹಾಕಿ ಅನುವಾದದ ಮಹತ್ತರ ಜವಾಬ್ದಾರಿ ಹೊತ್ತರು. ಜವಾಹರಲಾಲ್ ನೆಹರು ಅವರ ವಿಶ್ವವಿಖ್ಯಾತ ಕೃತಿಯನ್ನು ತಿ.ತಾ. ಶರ್ಮರೊಡನೆ ಸೇರಿ ‘ಜಗತ್ಕಥಾವಲ್ಲರಿ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದು ಹಾಗೂ ಕೆ.ಎಂ. ಮುನ್ಷಿಯವರ ಕೃಷ್ಣಾವತಾರವನ್ನು, ವಿನೋಬಾ ಅವರ ಗೀತಾ ಪ್ರವಚನವನ್ನು ಕನ್ನಡಕ್ಕೆ ತಂದದ್ದು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ.
ನೂರಾರು ಕೃತಿಗಳ ರಚನೆ ಹಾಗೂ ಸಂಘ-ಸಂಸ್ಥೆಗಳ ಸ್ಥಾಪನೆ
ಕೇವಲ ಲೇಖನಿಯ ಮೂಲಕ ಮಾತ್ರವಲ್ಲದೆ, ಸಾಂಸ್ಥಿಕವಾಗಿಯೂ ಸಮಾಜಕ್ಕೆ ಶರ್ಮರ ಕೊಡುಗೆ ಅನನ್ಯವಾಗಿದೆ. ಗಾಂಧಿ ಜಯಂತಿಯನ್ನು ಆಚರಿಸಿ ಉಳಿದ ಅಲ್ಪ ಹಣದಲ್ಲಿಯೇ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ‘ಗಾಂಧಿ ಸಾಹಿತ್ಯ ಸಂಘ’ವನ್ನು ಹುಟ್ಟುಹಾಕಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಶ್ರೀರಾಮ ಕೋ-ಆಪರೇಟಿವ್ ಬ್ಯಾಂಕ್, ಶ್ರೀ ಆಂಜನೇಯ ಕೋ-ಆಪರೇಟಿವ್ ಬ್ಯಾಂಕ್, ಬೆಂಗಳೂರು ಎಜ್ಯುಕೇಷನ್ ಸೊಸೈಟಿ, ನಗರ ಪುಸ್ತಕ ಭಂಡಾರಗಳಂತಹ ಅನೇಕ ಉಪಯುಕ್ತ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಸಾಹಿತ್ಯಿಕವಾಗಿ ‘ಯತಿರಾಜ ರಾಮಾನುಜ’, ‘ದೀಪಮಾಲೆ’, ‘ಕುಲದೀಪಕರು’, ‘ಕನ್ನಡದ ಕಿಡಿಗಳು’, ‘ಸರದಾರ್ ವಲ್ಲಭಭಾಯಿ ಪಟೇಲ್’ ಮುಂತಾದ ಅತ್ಯುತ್ತಮ ವ್ಯಕ್ತಿಚಿತ್ರಗಳನ್ನು ರಚಿಸಿದರು. ಸರ್ವೋದಯ, ಭೂದಾನ, ಗಾಂಧಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ‘ಸಹಕಾರ ಪಂಚಾಯಿತಿ’, ‘ಮಂಗಳ ಪ್ರಭಾತ’, ‘ಗೀತಾಮಾತೆ’ ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡಿಗರಿಗೆ ನೀಡಿದರು. ಅವರ ಪ್ರತಿಯೊಂದು ಕೃತಿಯೂ ಭವಿಷ್ಯದ ಪೀಳಿಗೆಗೆ ಸತ್ಯ, ನಿಷ್ಠೆ ಮತ್ತು ನಿಸ್ವಾರ್ಥ ಸೇವೆಯ ಮೌಲ್ಯಗಳನ್ನು ಬೋಧಿಸುತ್ತವೆ.
ಸಾರ್ಥಕ ಬದುಕು
ತಮ್ಮ ಜೀವಮಾನವಿಡೀ ಸಾಹಿತ್ಯ ಮತ್ತು ಸಮಾಜ ಸೇವೆಗೆ ಮುಡಿಪಾಗಿಟ್ಟ ಕೃಷ್ಣಶರ್ಮರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಅಭಿಮಾನಿಗಳು ಹಾಗೂ ನಾಡಿನ ಗಣ್ಯರು ಸೇರಿ 1973ರಲ್ಲಿ ‘ಸಿದ್ಧಹಸ್ತ’ ಎಂಬ ಗೌರವ ಗ್ರಂಥವನ್ನು ಸಮರ್ಪಿಸಿದರು. ಅತ್ಯಂತ ವಾಕ್ಚತುರರಾಗಿದ್ದ ಹಾಗೂ ತಮ್ಮ ಮೋಡಿ ಮಾಡುವ ಮಾತಿನಿಂದಲೇ ಸಾವಿರಾರು ಜನರನ್ನು ಬೆರಗುಗೊಳಿಸುತ್ತಿದ್ದ ಇವರು, ತಮ್ಮ ಬದುಕಿನ ಕೊನೆಯ 4 ವರ್ಷಗಳ ಕಾಲ ಹಾಸಿಗೆ ಹಿಡಿದು ಕನಿಷ್ಠ ಮಾತನಾಡಲೂ ಆಗದ ದಾರುಣ ಸ್ಥಿತಿ ತಲುಪಿದ್ದು ಕಾಲದ ಕ್ರೂರ ವಿಪರ್ಯಾಸ. ಗಾಂಧೀಜಿ ಹಾಗೂ ವಿನೋಬಾ ಅವರ ಪವಿತ್ರ ಸಂದೇಶಗಳನ್ನು ಕನ್ನಡ ನಾಡಿನ ಮೂಲೆಮೂಲೆಗೆ ಬಿತ್ತಿದ ಈ ಮಹಾನ್ ಚೇತನ ಅಕ್ಟೋಬರ್ 14, 1973ರಂದು ಇಹಲೋಕ ತ್ಯಜಿಸಿತು. ಕನ್ನಡ ರಾಜ್ಯೋತ್ಸವದ ಈ ಪವಿತ್ರ ಸಂದರ್ಭದಲ್ಲಿ, ತಮ್ಮ ಲೇಖನಿ, ಭಾಷಣ ಮತ್ತು ಅಚಲ ಹೋರಾಟದ ಮೂಲಕ ಕನ್ನಡಾಂಬೆಯ ಸಾರ್ಥಕ ಸೇವೆ ಮಾಡಿದ ಶ್ರೀ ಸಿದ್ಧವ್ವನಹಳ್ಳಿ ಕೃಷ್ಣಶರ್ಮರನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ನಾಡು-ನುಡಿಯ ಬಗ್ಗೆ ಅವರಿಗಿದ್ದ ಬದ್ಧತೆ ನಮ್ಮೆಲ್ಲರಿಗೂ ಸದಾ ಸ್ಫೂರ್ತಿಯಾಗಲಿ.













