Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶ್ರೀ ಹಾಸನಾಂಬ ದೇವಿ ದರ್ಶನಕ್ಕೆ ತೆರೆ : 30 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ

Doors close after darshan of Goddess Sri Hasanamba: Over 3 million devotees offered prayers
---Advertisement---

ಹಾಸನ : ವರ್ಷಕ್ಕೊಮ್ಮೆ ದರ್ಶನ ನೀಡುವ ಅಧಿ ದೇವತೆ ತಾಯಿ ಶ್ರೀ ಹಾಸನಾಂಬ ದೇವಿಗೆ ಬುಧವಾರ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಗರ್ಭಗುಡಿಯ ಬಾಗಿಲನ್ನು ಮ.1.37 ಕ್ಕೆ ಮುಚ್ಚುವ ಮೂಲಕ ದರ್ಶನಕ್ಕೆ ತೆರೆ ಎಳೆಯಲಾಯಿತು.

 ವರ್ಷದಿಂದ ವರ್ಷಕ್ಕೆ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಬಾರಿ 30 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ದೇವಿ ದರ್ಶನ ಪಡೆದು ಪುನಿತರಾಗಿದ್ದಾರೆ ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ ಶಿವಲಿಂಗೇಗೌಡ ಅವರು ತಿಳಿಸಿದ್ದಾರೆ.

ಶ್ರೀ ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ನಾಡ ಹಬ್ಬವಾಗಿ ಆಚರಣೆ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದ ಅವರು ಸಾಗರೋಪಾದಿಯಲ್ಲಿ ಹರಿದು ಬಂದಿರುವ ಜನಸಾಗರವನ್ನು ನೋಡಿದರೆ ಮುಂದೆ ಇದು ಹಾಸನ ಜಿಲ್ಲೆಯ ಇತಿಹಾಸಕ್ಕೆ ಆದರ್ಶವಾಗಲಿದೆ. ಈ ಬಾರಿ ದಸರಾ ನೋಡಿಕೊಂಡು ಬಂದ ನಂತರ ಎಂಟು ದಿನಗಳ ಒಳಗೆ ಜಾತ್ರಾ ಮಹೋತ್ಸವವನ್ನು ನಾಡ ಹಬ್ಬದ ರೀತಿಯಲ್ಲಿ ಆಚರಿಸಲಾಯಿತು ಎಂದು ತಿಳಿಸಿದರು.

 ತಾಯಿ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳು ನೋಡಿ ಆನಂದಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡೆ ಮತ್ತು ಎಲ್ಲಾ ರೀತಿಯ ಸ್ಪರ್ಧೆಗಳನ್ನು ಆಯೋಜಿಸಿದಾಗ ಜಾತ್ರೆ ನಾಡ ಹಬ್ಬವಾಗಿ ಪರಿವರ್ತನೆಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

 ಈ ಬಾರಿ ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ರಂಗೋಲಿ ಸ್ಪರ್ಧೆ, ಪಾಕ ಸ್ಪರ್ಧೆ, ಜಾನುವಾರು ಗಳ ಪ್ರದರ್ಶನ, ಟಗರು – ಮೇಕೆ ಪ್ರದರ್ಶನ, ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ, ಪುಷ್ಪ ಕಲಾಕೃತಿಗಳ ಪ್ರದರ್ಶನ ಹಾಗೂ ವಾಲಿಬಾಲ್, ಕುಸ್ತಿ, ಕಬ್ಬಡಿ ಕ್ರೀಡಾ ಕೂಟಗಳನ್ನು ಆಯೋಜಿಸಿ ಜನಸ್ನೇಹಿಯಾಗಿ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಂಡು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿ ಜನಮೆಚ್ಚುಗೆಗೆ ಪಾತ್ರವಾಯಿತು ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

 ಹಳ್ಳಿಗಾಡಿನ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ರೈತ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದ ಅವರು ಸನಾತನ ಕಲಾದ ಕಲೆ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಹಾಸನ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸೋಣ ಎಂದು ಹೇಳಿದರು.

 ಅ.30 ರಿಂದ ನ.10 ರ ವರೆಗೆ ಭಕ್ತಾದಿಗಳಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲು ಅನುವು ಮಾಡಿಕೊಡುವಂತೆ ಅರ್ಚಕರಲ್ಲಿ ಮನವಿ ಮಾಡಿಕೊಂಡು ಆಗಮಿಸಿದ ಪ್ರತಿಯೊಬ್ಬರಿಗೂ ಸುಗಮ ಮತ್ತು ಸುಲಲಿತವಾಗಿ ದೇವಿ ದರ್ಶನ ಪಡೆಯಲು ಅವಕಾಶ ನೀಡಲಾಯಿತು ಎಂದು ತಿಳಿಸಿದರು.

 ಭಕ್ತಾದಿಗಳು ದೇವಿ ದರ್ಶನವನ್ನು ಧರ್ಮ ದರ್ಶನದಲ್ಲಿ, 1000 ಹಾಗೂ 300 ರೂ ಟಿಕೆಟ್ ಪಡೆದು ದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಹುಂಡಿಯನ್ನು ಹೊರತು ಪಡಿಸಿ ಈ ಬಾರಿ ಲಾಡು ಪ್ರಸಾದದಿಂದ: 1,29,04,660 ರೂ, 300 ರೂ. ಟಿಕೆಟ್‌ನಿಂದ: 6,04,22,100, 1000 ರೂ. ಟಿಕೆಟ್ ನಿಂದ: 13,18,36000, ಆನ್‌ಲೈನ್ ಮೂಲಕ ಟಿಕೆಟ್ ಖರೀದಿ : 5,08,49,274 ರೂ. ಸೇರಿದಂತೆ ಒಟ್ಟು 25,60,12,034 ಹಣ ಸಂಗ್ರಹವಾಗಿದೆ ಎಂದ ಸಚಿವರು ಹುಂಡಿ ತೆರೆದರೆ ಅಂತಿಮವಾಗಿ 30 ಕೋಟಿಗೂ ಹೆಚ್ಚು ಆದಾಯದ ನಿರೀಕ್ಷೆ ಇದೆ ಎಂದು ತಿಳಿಸಿದರು.

 ಯಾವುದೇ ಒಂದು ಸಣ್ಣ ಪುಟ್ಟ ಲೋಪಗಳಾಗದಂತೆ ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಿ ಸುಗಮ ಮತ್ತು ಸುರಕ್ಷಿತವಾಗಿ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಸಚಿವರು ಕೃತಜ್ಞತೆ ಸಲ್ಲಿಸಿದರು.

ಜಿಲ್ಲೆಯಲ್ಲಿ ಮುಂಬರುವ ವರ್ಷದ ಅವಧಿಯಲ್ಲಿ ಉತ್ತಮವಾದ ಆಡಳಿತವನ್ನು ನೀಡುತ್ತೇವೆ ಹಾಗೂ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದ ಅವರು ಜಿಲ್ಲೆಯ ನಾಯಕತ್ವವನ್ನು ಎಲ್ಲಾ ಸ್ನೇಹಿತರೊಂದಿಗೆ ಸೇರಿ ಉತ್ತುಂಗಕ್ಕೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

 ಸಂಸದರಾದ ಶ್ರೇಯಸ್ ಎಂ ಪಟೇಲ್, ಶಾಸಕರಾದ ಸ್ವರೂಪ್ ಪ್ರಕಾಶ್, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ರಂಜಿತ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಟೇಲ್ ಶಿವಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ.ಎ ಗೋಪಾಲಸ್ವಾಮಿ, ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬನವಾಸೆ ರಂಗಸ್ವಾಮಿ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲ, ಉಪವಿಭಾಗಾಧಿಕಾರಿ ಮತ್ತು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕೆಂಚೇಗೌಡ, ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷರಾದ ಕೃಷ್ಣೇಗೌಡ, ತಹಶೀಲ್ದಾರ್ ಗೀತಾ ಮತ್ತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now