ಬೆಂಗಳೂರು: ತಾಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ (PHC) ವೈದ್ಯರು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲಿಯೇ (Headquarters) ವಾಸವಿರುವುದನ್ನು ಖಚಿತಪಡಿಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಪ್ರತಿದಿನ ರಾತ್ರಿ 9 ಗಂಟೆಯ ನಂತರ ‘ಕರ್ತವ್ಯ ಆ್ಯಪ್’ (Kartavya App) ಮೂಲಕ ಕಡ್ಡಾಯವಾಗಿ ರಾತ್ರಿ ಹಾಜರಾತಿಯನ್ನು ದಾಖಲಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೈದ್ಯರು ಪ್ರತಿದಿನ ರಾತ್ರಿ 9 ಗಂಟೆಯ ನಂತರ ತಮ್ಮ ಭೌಗೋಳಿಕ ಮಿತಿಯೊಳಗೆ (Geo-fencing) ‘ಕರ್ತವ್ಯ ಆ್ಯಪ್’ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕು.
ಇತರೆ ಸಿಬ್ಬಂದಿಗೂ ನಿಯಮ ಅನ್ವಯ: ಶುಶ್ರೂಷಾಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು ಸೇರಿದಂತೆ ಇತರೆ ಎಲ್ಲಾ ಸಿಬ್ಬಂದಿಯೂ ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಹೂಡಬೇಕು ಹಾಗೂ ಆ್ಯಪ್ ಮೂಲಕ ರಾತ್ರಿ 9 ಗಂಟೆಯ ನಂತರ ಹಾಜರಾತಿ ದಾಖಲಿಸಬೇಕು.
ವಿನಾಯಿತಿಗಳು: ಮಂಜೂರಾದ ರಜೆಯಲ್ಲಿದ್ದಾಗ, ಸೂಕ್ತ ಅನುಮತಿಯೊಂದಿಗೆ ಕೇಂದ್ರ ಸ್ಥಾನದ ಹೊರಗೆ ಕರ್ತವ್ಯದ ಮೇಲಿದ್ದಾಗ ಅಥವಾ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದಿದ್ದಾಗ ಮಾತ್ರ ಈ ರಾತ್ರಿ ಹಾಜರಾತಿಯಿಂದ ವಿನಾಯಿತಿ ಇರುತ್ತದೆ. ಆದರೆ ಇಂತಹ ದಿನಗಳಲ್ಲಿಯೂ ಕಾರಣವನ್ನು ಆ್ಯಪ್ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಪೂರ್ವಾನುಮತಿಯಿಲ್ಲದೆ ಕೇಂದ್ರ ಸ್ಥಾನದ ವ್ಯಾಪ್ತಿಯ ಹೊರಗೆ ವಾಸವಿರುವುದು ಅನಿಯಮಿತವಾಗಿರುತ್ತದೆ.
ಅಧಿಕಾರಿಗಳ ಜವಾಬ್ದಾರಿ ಹಾಗೂ ಮೇಲ್ವಿಚಾರಣೆ:
ಡಿ.ಡಿ.ಓ.ಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿ ಆ್ಯಪ್ನಲ್ಲಿ ನೋಂದಣಿಯಾಗಿರುವುದನ್ನು ಹಾಗೂ ಅವರ ಜಿಯೋ-ಫೆನ್ಸಿಂಗ್ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ವಾರಕ್ಕೊಮ್ಮೆ ಹಾಜರಾತಿಯನ್ನು ಪರಿಶೀಲಿಸಿ, ಹಾಜರಾತಿ ದಾಖಲಿಸದವರ ವಿವರಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಬೇಕು.
ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ತಿಂಗಳು ಹಾಜರಾತಿ ವರದಿಗಳನ್ನು ಪರಿಶೀಲಿಸಿ, ಅನುಮತಿಯಿಲ್ಲದೆ ಕೇಂದ್ರ ಸ್ಥಾನದಲ್ಲಿ ವಾಸವಿಲ್ಲದಿರುವುದು ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.
ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಮಾಸಿಕ ಕ್ರೋಢೀಕೃತ ವರದಿಯನ್ನು ಆಯುಕ್ತರ ಕಚೇರಿಗೆ ಸಲ್ಲಿಸಬೇಕು.
ಶಿಸ್ತು ಕ್ರಮದ ಎಚ್ಚರಿಕೆ
ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ತಿಳಿಸಿದ್ದಾರೆ. ಪಾಲನೆಯಲ್ಲಿ ಲೋಪ ಕಂಡುಬಂದಲ್ಲಿ ಸಂಬಂಧಿಸಿದ ವೈದ್ಯರು ಹಾಗೂ ಸಿಬ್ಬಂದಿಯ ಜೊತೆಗೆ, ಮೇಲ್ವಿಚಾರಣೆಯಲ್ಲಿ ವಿಫಲರಾದ ಡಿ.ಡಿ.ಓ.ಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ವೈಯಕ್ತಿಕವಾಗಿ ಜವಾಬ್ದಾರರನ್ನಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.












