Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಹಿಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಆರಂಭ

---Advertisement---

ಚಿತ್ರದುರ್ಗ. ನ.06: ಜಿಲ್ಲೆಯಲ್ಲಿ 2026-27ನೇ ಸಾಲಿನ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ.

ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ತೇವಾಂಶದ ಅಭಾವವಿರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.

ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಮತ್ತು ಹೊಳಲ್ಕೆರೆ ತಾಲ್ಲೂಕುಗಳ ಆಯ್ದ ಗ್ರಾಮ ಪಂಚಾಯತಿಗಳಲ್ಲಿ ಮಳೆ ಆಶ್ರಿತ ಕಡಲೆ ಹಾಗೂ ಜೋಳ ಬೆಳೆಗೆ ಮತ್ತು ಮೊಳಕಾಲೂರು ತಾಲ್ಲೂಕಿನ ಆಯ್ದ ಗ್ರಾಮ ಪಂಚಾಯತಿಗಳಲ್ಲಿ ನೀರಾವರಿ ಆಶ್ರಿತ ಮುಸುಕಿನಜೋಳ ಬೆಳೆಗೆ ವಿಮೆ ನೋಂದಾಯಿಸಲು ಅವಕಾಶವಿದೆ. ಹಾಗೆಯೇ ಹೋಬಳಿ ಮಟ್ಟದಲ್ಲಿ ಮಳೆ ಆಶ್ರಿತ ಕಡಲೆ, ಜೋಳ, ಹುರುಳಿ ಹಾಗೂ ನೀರಾವರಿ ಆಶ್ರಿತ ಮುಸುಕಿನಜೋಳ, ಈರುಳ್ಳಿ, ರಾಗಿ, ಕುಸುಬೆ ಬೆಳೆಗಳಿಗೆ ಮತ್ತು ಬೇಸಿಗೆ ಹಂಗಾಮಿಗೆ ನೀರಾವರಿ ಆಶ್ರಿತ ಶೇಂಗಾ ಹಾಗೂ ರಾಗಿ ಬೆಳೆಗಳಿಗೆ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.

ವಿಮೆ ನೋಂದಣಿಗೆ ನಿಗದಿಪಡಿಸಲಾದ ಕೊನೆಯ ದಿನಾಂಕ ಮತ್ತು ರೈತರ ವಂತಿಕೆಯ ವಿವರ ಇಂತಿದೆ. ಹಿಂಗಾರು ಹಂಗಾಮಿನ ಮಳೆ ಆಶ್ರಿತ ಕಡಲೆ ಬೆಳೆಗೆ ಪ್ರತಿ ಹೆಕ್ಟೇರ್‍ಗೆ ರೂ. 41,700 ವಿಮಾ ಮೊತ್ತವಿದ್ದು, ರೈತರು ಶೇ 1.50 ರಂತೆ ರೂ.625.50 ಕಂತು ಪಾವತಿಸಿ ಡಿಸೆಂಬರ್ 15ರ ಒಳಗಾಗಿ ನೋಂದಾಯಿಸಬೇಕಾಗಿದೆ. ಮಳೆ ಆಶ್ರಿತ ಹುರುಳಿ ಬೆಳೆಗೆ ರೂ.23,500 ವಿಮಾ ಮೊತ್ತವಿದ್ದು, ರೂ.352.50 ಪಾವತಿಸಲು ನವೆಂಬರ್ 16 ಕೊನೆಯ ದಿನವಾಗಿದೆ. ನೀರಾವರಿ ಮುಸುಕಿನಜೋಳ ಬೆಳೆಗೆ ರೂ.76,200 ವಿಮಾ ಮೊತ್ತವಿದ್ದು, ರೂ.1,143 ಕಂತು ಪಾವತಿಸಿ ಡಿಸೆಂಬರ್ 15ರವರೆಗೆ ನೋಂದಣಿ ಮಾಡಿಕೊಳ್ಳಬಹುದು.

ಅಂತೆಯೇ ನವೆಂಬರ್ 30ರ ಒಳಗಾಗಿ ನೋಂದಾಯಿಸಲು ಅವಕಾಶವಿರುವ ಬೆಳೆಗಳ ಪೈಕಿ, ನೀರಾವರಿ ಈರುಳ್ಳಿ ಬೆಳೆಗೆ ರೂ.93,900 ವಿಮಾ ಮೊತ್ತವಿದ್ದು ಶೇ 5 ರಂತೆ ರೂ.4,695 ಕಂತು ನಿಗದಿಪಡಿಸಲಾಗಿದೆ. ನೀರಾವರಿ ರಾಗಿ ಬೆಳೆಗೆ ರೂ.58,300 ವಿಮಾ ಮೊತ್ತವಿದ್ದು ರೂ.874.50, ಮಳೆ ಆಶ್ರಿತ ಕುಸುಬೆಗೆ ರೂ.34,200 ವಿಮಾ ಮೊತ್ತವಿದ್ದು ರೂ.513 ಹಾಗೂ ಮಳೆ ಆಶ್ರಿತ ಜೋಳ ಬೆಳೆಗೆ ರೂ.44,400 ವಿಮಾ ಮೊತ್ತವಿದ್ದು ರೂ.666 ಕಂತು ಪಾವತಿಸಬೇಕಾಗಿದೆ.

ಇನ್ನು ಬೇಸಿಗೆ ಹಂಗಾಮಿನ ನೀರಾವರಿ ಶೇಂಗಾ ಬೆಳೆಗೆ ರೂ.77,800 ವಿಮಾ ಮೊತ್ತವಿದ್ದು ರೂ.1,167 ಕಂತು ಹಾಗೂ ನೀರಾವರಿ ರಾಗಿ ಬೆಳೆಗೆ ರೂ.58,300 ವಿಮಾ ಮೊತ್ತವಿದ್ದು ರೂ.874.50 ಕಂತು ಪಾವತಿಸಿ 2027ರ ಫೆಬ್ರವರಿ 26ರ ಒಳಗಾಗಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಕೊನೆಯ ದಿನಗಳಲ್ಲಿ ನೋಂದಣಿ ಮಾಡಲು ತೆರಳಿದಾಗ ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ತೊಂದರೆಗಳಿಂದ ತಪ್ಪುಗಳು ಸಂಭವಿಸಿ, ಮುಂದೆ ಪರಿಹಾರ ಧನ ಸಿಗದೇ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತರು ಕೊನೆ ಗಳಿಗೆಯವರೆಗೆ ಕಾಯದೆ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿಯೇ ವಿಮೆ ನೋಂದಣಿ ಮಾಡಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now