Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ರಾಮೀಣ ಬದುಕಿನ ಅನುಭವವೇ ಸಾಹಿತ್ಯ ಲೋಕದ ದೊಡ್ಡ ಶಕ್ತಿ: ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ತಿಪ್ಪಣ್ಣ ಮರಿಕುಂಟೆ

---Advertisement---

ಸುದ್ದಿಒನ್, ಚಳ್ಳಕೆರೆ, ನವೆಂಬರ್. 06 : ಹಳ್ಳಿ ಜನರ ಜೀವಂತ ಪರಂಪರೆ ಮತ್ತು ಜನಪದ ಸಂಸ್ಕೃತಿಯು ಸಾಹಿತ್ಯ ಕ್ಷೇತ್ರಕ್ಕೆ ಅತ್ಯಂತ ಮೌಲ್ಯಯುತ ಅಧ್ಯಯನ ಭೂಮಿಕೆಯಾಗಿದೆ ಎಂದು ಹಿರಿಯ ಕತೆಗಾರ ಹಾಗೂ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ತಿಪ್ಪಣ್ಣ ಮರಿಕುಂಟೆ ಅಭಿಪ್ರಾಯಪಟ್ಟರು.

ತಾಲೂಕಿನ ದೇವರ ಮರಿಕುಂಟೆ ಗ್ರಾಮದಲ್ಲಿ ಕೊರ್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಜನಜೀವನವು ಶ್ರಮ ಸಂಸ್ಕೃತಿಯ ತಳಹದಿಯ ಮೇಲೆ ನಿಂತಿದೆ. ಎಷ್ಟೇ ಕಷ್ಟಗಳಿದ್ದರೂ ಹಳ್ಳಿಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆಯ ಭಾವ ಕಾಣಸಿಗುತ್ತದೆ. ಜಾತ್ರೆ, ಹಬ್ಬ ಮತ್ತು ಉತ್ಸವಗಳಲ್ಲಿ ಇಂದಿಗೂ ಸಕಲ ಸಮುದಾಯಗಳು ಒಟ್ಟಾಗಿ ಭಾಗವಹಿಸುವ ಸುಂದರ ಸಂಪ್ರದಾಯ ಜೀವಂತವಾಗಿದ್ದು, ಇಂತಹ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವುದು ಎಲ್ಲರ ಹೊಣೆ ಎಂದು ಅವರು ತಿಳಿಸಿದರು.
ಹಳ್ಳಿಯಲ್ಲಿ ಗ್ರಾಮೀಣ ಸಾಹಿತ್ಯ ಪರಿಷತ್ ಹುಟ್ಟುಹಾಕಿ, ಖ್ಯಾತ ವಿದ್ವಾಂಸರನ್ನು ಕರೆಸಿ ಸಂವಾದಗಳನ್ನು ನಡೆಸಲಾಗಿತ್ತು. ಅಂತಹ ಸಾರ್ಥಕ ಚಿಂತನೆಗಳಿಂದಾಗಿ ಗ್ರಾಮೀಣರಲ್ಲಿ ಮೂಢನಂಬಿಕೆ ಮತ್ತು ಜಾತಿ ತಾರತಮ್ಯದ ವಿರುದ್ಧ ಜಾಗೃತಿ ಮೂಡಿ, ಸಮಾಜ ಪ್ರಬುದ್ಧತೆಯತ್ತ ಹೆಜ್ಜೆ ಇಡಲು ಸಾಧ್ಯವಾಯಿತು. ಪ್ರತಿಯೊಬ್ಬ ವ್ಯಕ್ತಿಯ ನಿತ್ಯದ ಬದುಕಿನ ಅನುಭವವೂ ಒಂದು ರೀತಿಯಲ್ಲಿ ನೈಜ ಸಾಹಿತ್ಯವೇ ಆಗಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.

ವೇದಿಕೆಯ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಇತರರೂ ಸಮಾಜಮುಖಿಯಾಗಿ ರೂಪುಗೊಳ್ಳಬೇಕು ಎಂದು ಹಾರೈಸುವ ವಿಶಾಲ ಹೃದಯಿ ತಿಪ್ಪಣ್ಣ ಮರಿಕುಂಟೆ ಅವರು ನನ್ನ ಆರಂಭಿಕ ಸಾಹಿತ್ಯ ಕೃಷಿಗೆ ಬೆನ್ನೆಲುಬಾಗಿ ನಿಂತವರು. ಬಯಲು ಸೀಮೆಯ ನೆಲಮೂಲ ಸಂಸ್ಕೃತಿಯನ್ನು ತಮ್ಮ ಬರವಣಿಗೆಯ ಮೂಲಕ ಜಗತ್ತಿಗೆ ಪರಿಚಯಿಸಿದ ಅವರ ಜೀವಮಾನದ ಸಾಧನೆಗೆ ಸಂದ ವಾಲ್ಮೀಕಿ ಪ್ರಶಸ್ತಿಯು ಇಡೀ ಜಿಲ್ಲೆಗೆ ಸಂದ ಹೆಮ್ಮೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿ. ಬೆಟ್ಟಪ್ಪ, ಎಂ.ಸಿ. ತಿಪ್ಪೇಸ್ವಾಮಿ, ಪತ್ರಕರ್ತ ಬೆಳೆಗೆರೆ ಸುರೇಶ್, ಕಲಾವಿದ ವಿ. ತಿಪ್ಪೇಸ್ವಾಮಿ, ಗ್ರಂಥಪಾಲಕ ಎಚ್. ತಿಪ್ಪೇಸ್ವಾಮಿ ಹಾಗೂ ಪೋಸ್ಟ್ ಮಾಸ್ಟರ್ ಚಿಕ್ಕಣ್ಣ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now