ಸುದ್ದಿಒನ್, ಚಿತ್ರದುರ್ಗ, ನವೆಂಬರ್. 06 : ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳವು ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ನಾಲ್ವರು ಅಂತಾರಾಜ್ಯ ಮಹಿಳಾ ಕಳ್ಳಿಯರನ್ನು ತಳಕು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 12,45,000 ರೂ. ಮೌಲ್ಯದ 83 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಮೂಲದ ಗುಣ (38), ಅಖಿಲ ಅಲಿಯಾಸ್ ಅಘಲ (32), ವಿದ್ಯಾ (31) ಹಾಗೂ ಶಶಿ ಅಲಿಯಾಸ್ ಸಸಿ (35) ಬಂಧಿತ ಆರೋಪಿಗಳು.
ಜುಲೈ 4 ರಂದು ಸಂತ್ರಸ್ತ ಪ್ರಯಾಣಿಕರೊಬ್ಬರು ಶಿವಮೊಗ್ಗದಿಂದ ಬಳ್ಳಾರಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಳ್ಳಕೆರೆ ಪಟ್ಟಣದಲ್ಲಿ ಬಸ್ ಹತ್ತಿದ ಅಪರಿಚಿತ ಮಹಿಳೆಯರು ಪ್ರಯಾಣಿಕರ ಗಮನವನ್ನು ಬೇರೆಡೆ ಸೆಳೆದು ಅವರ ವ್ಯಾನಿಟಿ ಬ್ಯಾಗ್ನಲ್ಲಿದ್ದ 83 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ ಅಡಿಯಲ್ಲಿ 319(2), 318(4) ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಾಲ್ ಚೌಕ್ಸೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಆರ್. ಶಿವಕುಮಾರ್ ಮಾರ್ಗದರ್ಶನದಲ್ಲಿ, ಚಳ್ಳಕೆರೆ ಡಿವೈಎಸ್ಪಿ ಸತ್ಯನಾರಾಯಣ ರಾವ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ವೃತ್ತ ನಿರೀಕ್ಷಕ ಹನುಮಂತಪ್ಪ ಎಂ. ಶಿರೀಹಳ್ಳಿ, ಪಿಎಸ್ಐಗಳಾದ ಶಿವಕುಮಾರ ಕೆ., ಶಿವರಾಜ್, ಎಎಸ್ಐಗಳಾದ ಜಗಳೂರಪ್ಪ, ಮಂಜಣ್ಣ ಮತ್ತು ಸಿಬ್ಬಂದಿ ಒಳಗೊಂಡ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದೆ. ಆರೋಪಿಗಳಿಂದ ಒಟ್ಟು 12.45 ಲಕ್ಷ ರೂ. ಮೌಲ್ಯದ 83 ಗ್ರಾಂ ಬಂಗಾರದ ಒಡವೆಗಳನ್ನು ಜಪ್ತಿ ಮಾಡಲಾಗಿದೆ.
ಕಳ್ಳತನ ಮಾಡಿದ ಮಹಿಳೆಯರನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿದ್ದಾರೆ.













