ನವದೆಹಲಿ : ದೇಶದಲ್ಲಿ ಶೀಘ್ರವೇ ಆರಂಭವಾಗಲಿರುವ ಜನಗಣತಿ (Census) ಕಾರ್ಯಕ್ಕಾಗಿ ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನು(Private teachers) ಗಣತಿದಾರರನ್ನಾಗಿ (ಎನ್ಯೂಮರೇಟರ್ಸ್) ನೇಮಿಸಿಕೊಳ್ಳಲು ಅವಕಾಶ ನೀಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಸಂಬಂಧ 1990ರ ಜನಗಣತಿ ನಿಯಮಗಳಿಗೆ ತಿದ್ದುಪಡಿ ತಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಪ್ರಕಟಿಸಿದೆ.
ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಖಾಸಗಿ ಶಿಕ್ಷಕರ ಜೊತೆಗೆ ಗುಮಾಸ್ತ ಸಿಬ್ಬಂದಿ ಹಾಗೂ ಸರ್ಕಾರ ಸೂಕ್ತವೆಂದು ಪರಿಗಣಿಸುವ ಯಾವುದೇ ವ್ಯಕ್ತಿಯನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕರನ್ನು ಜನಗಣತಿಗೆ ನಿಯೋಜಿಸುವುದನ್ನು ಪ್ರಶ್ನಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಕಾನೂನು ತೊಡಕುಗಳನ್ನು ನಿವಾರಿಸುವ ಹಿನ್ನೆಲೆಯಲ್ಲಿ 1948ರ ಜನಗಣತಿ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರ ನಿಯಮಗಳಿಗೆ ತಿದ್ದುಪಡಿ ತಂದಿದೆ.
ಹೊಸ ನಿಯಮದ ಪ್ರಕಾರ, ಸರ್ಕಾರಿ ಮತ್ತು ಸ್ಥಳೀಯ ಆಡಳಿತದ ಶಾಲೆಗಳಷ್ಟೇ ಅಲ್ಲದೆ ಅನುದಾನಿತ ಅಥವಾ ಅನುದಾನರಹಿತ ಖಾಸಗಿ ಸಂಸ್ಥೆಗಳು, ಸಂಘ-ಸಂಸ್ಥೆಗಳು ಮತ್ತು ಟ್ರಸ್ಟ್ಗಳ ಶಿಕ್ಷಕರನ್ನು ಬಳಸಿಕೊಳ್ಳಬಹುದಾಗಿದೆ. ಇದರೊಂದಿಗೆ ಸಾರ್ವಜನಿಕ ವಲಯದ ಉದ್ಯಮಗಳು, ಶಾಸನಬದ್ಧ ಸಂಸ್ಥೆಗಳು, ಬ್ಯಾಂಕ್ಗಳು ಹಾಗೂ ಕಂಪನಿಗಳ ಸಿಬ್ಬಂದಿಯನ್ನೂ ಈ ಕಾರ್ಯಕ್ಕೆ ಬಳಸಿಕೊಳ್ಳಲು ರಾಜ್ಯಗಳಿಗೆ ಅಧಿಕಾರ ನೀಡಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಗೋವಾ, ಉತ್ತರ ಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡದ ಕೆಲವು ಭಾಗಗಳಲ್ಲಿ ಡಿಸೆಂಬರ್ 1ರಿಂದ ಜನವರಿ 4ರವರೆಗೆ ಜನಗಣತಿ ಕಾರ್ಯ ನಡೆಯಲಿದೆ. ಹಿಮಾವೃತ ಪ್ರದೇಶಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಕೆಲವು ಕಡೆ ಸೆಪ್ಟೆಂಬರ್ ತಿಂಗಳಲ್ಲೇ ಮೊದಲ ಹಂತದ ಕಾರ್ಯ ಪೂರ್ಣಗೊಂಡಿದೆ. ಭದ್ರತಾ ಕಾರಣಗಳಿಂದಾಗಿ ಮಣಿಪುರದಲ್ಲಿ ಮನೆ ಪಟ್ಟಿ ಮಾಡುವ ಪ್ರಕ್ರಿಯೆಯನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಕರ್ನಾಟಕ ಸೇರಿದಂತೆ ದೇಶದ ಉಳಿದ ಭಾಗಗಳಲ್ಲಿ ಮುಂದಿನ ಫೆಬ್ರವರಿಯಿಂದ ಜನಸಂಖ್ಯಾ, ಸಾಮಾಜಿಕ-ಸಾಂಸ್ಕೃತಿಕ ಹಾಗೂ ಆರ್ಥಿಕ ಸಮಗ್ರ ಮಾಹಿತಿ ಸಂಗ್ರಹಿಸುವ ಗಣತಿ ಕಾರ್ಯ ಆರಂಭವಾಗುವ ಸಾಧ್ಯತೆಯಿದೆ.











