Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೈಕೋರ್ಟ್ ನಲ್ಲಿ ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

---Advertisement---

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ತೀರ್ಪು ಶೋಷಿತ ಸಮುದಾಯಗಳ ಘನತೆಯ ಬದುಕಿನ ಕನಸಿಗೆ ಪೆಟ್ಟು ನೀಡಿದೆ ಎಂದಿರುವ ಅವರು, ಹಿಂದಿನ ಬಿಜೆಪಿ ಸರ್ಕಾರದ ಪೂರ್ವ ಸಿದ್ಧತೆಯಿಲ್ಲದ ಅವಸರದ ನಿರ್ಧಾರವೇ ಇಂದಿನ ಅವಾಂತರಕ್ಕೆ ನೇರ ಕಾರಣ ಎಂದು ಆರೋಪಿಸಿದ್ದಾರೆ.

ನ್ಯಾಯಾಲಯದ ತೀರ್ಪಿಗೆ ಗೌರವ ಸೂಚಿಸುತ್ತಲೇ ಬಿಜೆಪಿ ಸರ್ಕಾರದ ಧೋರಣೆಯನ್ನು ಖಂಡಿಸಿದ ಅವರು, ಸುಪ್ರೀಂ ಕೋರ್ಟ್‌ನ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿಯು ಶೇಕಡ 50ರ ಮಿತಿ ಮೀರಬಾರದು ಎಂಬ ಸ್ಪಷ್ಟ ಆದೇಶವಿತ್ತು. ಆದಾಗ್ಯೂ, 2023ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಸರ್ಕಾರ ಎಸ್‌ಸಿ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಹಾಗೂ ಎಸ್‌ಟಿ ಮೀಸಲಾತಿಯನ್ನು ಶೇ. 3ರಿಂದ 7ಕ್ಕೆ ಹೆಚ್ಚಿಸಿತ್ತು. ಸೂಕ್ತ ಸಾಂವಿಧಾನಿಕ ರಕ್ಷಣೆ ಒದಗಿಸದೆ ಕೇವಲ ರಾಜಕೀಯ ಲಾಭಕ್ಕಾಗಿ ಆತುರದಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತೇ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಈ ಹೆಚ್ಚಳಕ್ಕೆ ಬಲವಾದ ಬುನಾದಿ ಹಾಕಿತ್ತು. ಇದು ಯಾವುದೇ ಪಕ್ಷದ ರಾಜಕೀಯ ಔದಾರ್ಯವಲ್ಲ, ಸಮುದಾಯಗಳ ದಶಕಗಳ ಹೋರಾಟದ ಫಲವಾಗಿದೆ. ಆದರೆ, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವ ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ಬಿಜೆಪಿ ಸರ್ಕಾರ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಬಿಕ್ಕಟ್ಟಿಗೆ ನೀಡುವ ಸಾಂವಿಧಾನಿಕ ಪರಿಹಾರವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೀಸಲಾತಿ ಎಂಬುದು ಯಾರೂ ನೀಡುವ ದಾನವಲ್ಲ, ಅದು ಅನಾದಿ ಕಾಲದ ಅನ್ಯಾಯವನ್ನು ಸರಿಪಡಿಸುವ ಸಾಂವಿಧಾನಿಕ ಹಕ್ಕು ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ಶೇಕಡ 50ರ ಮಿತಿಗೆ ಜೋತುಬೀಳದೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು ಮತ್ತು ಅದನ್ನು 9ನೇ ಶೆಡ್ಯೂಲ್‌ಗೆ ಸೇರಿಸಿ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ, ಹೈಕೋರ್ಟ್ ಆದೇಶದಿಂದ ತೊಂದರೆಗೊಳಗಾಗುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಹಿತರಕ್ಷಣೆಗೆ ಸರ್ಕಾರ ತಕ್ಷಣವೇ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Join WhatsApp

Join Now

Join Telegram

Join Now