ಚಿತ್ರದುರ್ಗ.ಅ.12: ಸರ್ಕಾರದ ಆದೇಶದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಮುಂಗಾರು ಹಂಗಾಮಿನ ಸೂರ್ಯಕಾಂತಿಯನ್ನು ಖರೀದಿಸಲು ಪ್ರಕ್ರಿಯೆ ಆರಂಭಿಸಲಾಗಿದೆ.
ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆ ನಿರ್ಣಯದಂತೆ ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತದಿಂದ ಪ್ರತಿ ಕ್ವಿಂಟಾಲ್‌ಗೆ ರೂ. 8,343/- ರಂತೆ ಸೂರ್ಯಕಾಂತಿಯನ್ನು ಖರೀದಿ ಮಾಡಲಾಗುತ್ತದೆ. ನೋಂದಣಿಗೆ 80 ದಿನಗಳು ಹಾಗೂ ಖರೀದಿ ಪ್ರಕ್ರಿಯೆಗೆ 90 ದಿನಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ರೈತರು ಸೂರ್ಯಕಾಂತಿ ಬೆಳೆಗಾರರು ಪ್ರತಿ ಎಕರೆಗೆ 04 ಕ್ವಿಂಟಾಲ್ ಹಾಗೂ ಗರಿಷ್ಠ 20 ಕ್ವಿಂಟಾಲ್‌ವರೆಗೆ ಮಾರಾಟ ಮಾಡಲು ಅವಕಾಶವಿದೆ.
ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮೂರಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ರೈತ ಉತ್ಪಾದಕ ಸಂಸ್ಥೆಗಳಲ್ಲಿ ಹಾಗೂ ಹಿರಿಯೂರು ತಾಲೂಕಿನ ಮಸ್ಕಲ್, ಯರಬಳ್ಳಿ, ಧರ್ಮಪುರ, ಚಳ್ಳಕೆರೆ ತಾಲೂಕಿನಲ್ಲಿ ರಾಮಜೋಗಿಹಳ್ಳಿ, ಚಿತ್ರದುರ್ಗ ತಾಲೂಕಿನಲ್ಲಿ ತುರುವನೂರುನಲ್ಲಿ ವಿವಿಧೋದ್ದೇಶ ಬೀಜ ಬೆಳೆಗಾರರ ಸಹಕಾರ ಸಂಘ ನಿಯಮಿತದಲ್ಲಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ಹೆಚ್ಚಿನ ಮಾಹಿತಿಗಾಗಿ ಕೆ.ಒ.ಎಫ್ ಖರೀದಿ ಅಧಿಕಾರಿ ಮಹಮ್ಮದ್ ರಿಯಾಜ್ ದೂರವಾಣಿ ಸಂಖ್ಯೆ 9742819478 ಸಂಪರ್ಕಿಸಬಹುದಾಗಿದೆ. ಸೂರ್ಯಕಾಂತಿ ಬೆಳೆಗಾರರು ಇದರ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.










