Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತೇಜಸ್ವೀ ಆದಿಶಕ್ತಿಯನ್ನು 9 ದಿನಗಳ ಕಾಲ ನಂದಾದೀಪದದಿಂದ ಪೂಜಿಸುವುದೇ ನವರಾತ್ರಿಯ ಆಚರಿಸುವ ಉದ್ದೇಶ : ಶಿವಲಿಂಗಾನಂದ ಶ್ರೀ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಅ. 12 : ಬ್ರಹ್ಮಾಂಡವು ಒಂದು ಘಟ(ಮಡಕೆ)ಯಂತಿದೆ. ಈ ಘಟರೂಪಿ ಬ್ರಹ್ಮಾಂಡದಲ್ಲಿ ಅವತರಿಸಿದ ತೇಜಸ್ವೀ ಆದಿಶಕ್ತಿಯನ್ನು, ಒಂಬತ್ತು ದಿನಗಳ ಕಾಲ ನಿರಂತರ ಉರಿಯುವ ನಂದಾದೀಪದದಿಂದ ಪೂಜಿಸುವುದೇ ನವರಾತ್ರಿಯನ್ನು ಆಚರಿಸುವ ಉದ್ದೇಶವಾಗಿದೆ. ಮನೆಯಲ್ಲಿ ಘಟಪೂಜೆಯನ್ನು ಮಾಡಿದರೆ, ಶ್ರೀ ದುರ್ಗಾ ದೇವಿಯ ತತ್ವದ ಲಾಭವಾಗುವುದಲ್ಲದೆ ಮನೆಯ ವಾಸ್ತು ಕೂಡ ಚೈತನ್ಯಮಯವಾಗುತ್ತದೆ ಎಂದು ನಗರದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದ ಆಶ್ರಮದಲ್ಲಿನ ಶ್ರೀ ಭಗವತಿ ಬಗಳಾಂಬಿಕಾದೇವಿ ದೇವಸ್ಥಾನದಲ್ಲಿ ನಿನ್ನೆಯಿಂದ ಪ್ರಾರಂಭವಾದ ಶರನ್ನವರಾತ್ರಿ ಕಾರ್ಯಕ್ರಮದ ಪ್ರಾರಂಭದ ದಿನದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ನವರಾತ್ರಿಯ ಒಂಬತ್ತು ದಿನಗಳ ಉಪವಾಸ ಮತ್ತು ಶ್ರದ್ಧಾಭಕ್ತಿಯ ಪೂಜೆಯು ಮನುಷ್ಯನ ದೇಹ ಹಾಗೂ ಮನಸ್ಸನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತದೆ. ಹತ್ತನೇ ದಿನವಾದ ವಿಜಯದಶಮಿಯಂದು ದುರ್ಗಾ ಮಾತೆಯು ಮಹಿಷಾಸುರನನ್ನು ವಧಿಸಿದಳು ಎಂಬ ಪ್ರತೀತಿಯಿದೆ. ಇದು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಾರುತ್ತದೆ ಈ ಹಬ್ಬವು ಕೇವಲ ಬಾಹ್ಯ ಆಚರಣೆಯಲ್ಲ, ಬದಲಾಗಿ ನಮ್ಮೊಳಗಿನ ಅಜ್ಞಾನ, ಅಹಂಕಾರ, ಕ್ರೋಧ ಮತ್ತು ನಕಾರಾತ್ಮಕತೆಯನ್ನು ಹೋಗಲಾಡಿಸಿ, ಭಕ್ತಿಯ ಮೂಲಕ ಜ್ಞಾನದ ಬೆಳಕಿನೆಡೆಗೆ ಸಾಗುವಂತೆ ನಮ್ಮೆಲ್ಲರಿಗೂ ಸದಾ ಪ್ರೇರೇಪಿಸುವ ಪವಿತ್ರ ಆಧ್ಯಾತ್ಮಿಕ ಸಾಧನೆಯಾಗಿದೆ ಎಂದರು.

ನವರಾತ್ರಿಯ ಆಚರಣೆಯು ಕೇವಲ ಧಾರ್ಮಿಕ ನಂಬಿಕೆ ಮಾತ್ರವಲ್ಲದೆ ಮನುಷ್ಯನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸಕಾರಾತ್ಮಕ ಗುಣಗಳನ್ನು ಸಾರುತ್ತದೆ. ನವದುರ್ಗೆಯರನ್ನು ಆರಾಧಿಸುವ ಮೂಲಕ ನಮ್ಮಲ್ಲಿನ ದುರ್ಗುಣಗಳನ್ನು ಅಳಿದು ತಾಳ್ಮೆ, ಪ್ರೀತಿ, ಶುದ್ಧತೆ ಮತ್ತು ವಿವೇಕದಂತಹ ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಈ ಹಬ್ಬವು ಎಲ್ಲರಿಗೂ ಪ್ರೇರಣೆ ನೀಡುತ್ತದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನವರಾತ್ರಿ ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶಕ್ತಿಯ ಆರಾಧನೆ ಈ ಹಬ್ಬದ ವೈಶಿಷ್ಟ್ಯ. 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದೂ ಕರೆಯುತ್ತಾರೆ ಎಂದರು.

ಮೊದಲ ದಿನ ಅಂದರೆ ಪಾಡ್ಯದ ದಿನ ಯೋಗನಿದ್ರಾ ದುರ್ಗಾ ಪೂಜಾ, ಎರಡನೇ ದಿನ ದೇವಜಾತ ದುರ್ಗಾ ಪೂಜಾ, ಮೂರನೇ ದಿನ ಮಹಿಷಾಸುರ ಮರ್ಧಿನಿ ದುರ್ಗಾಪೂಜಾ, ನಾಲ್ಕನೇ ದಿನ ಶೈಲ ಜಾತಾ ದುರ್ಗಾ ಪೂಜಾ, ಐದನೇ ದಿನ ದೂಮೃಹಾ ದುರ್ಗಾಪೂಜಾ, ಆರನೇ ದಿನ ಚಂಡ-ಮುಂಡ ಹಾ ದುರ್ಗಾಪೂಜಾ, ಏಳನೇ ದಿನ ರಕ್ತ ಬೀಜ ಹಾ ದುರ್ಗಾಪೂಜಾ, ಎಂಟನೇ ದಿನ ನಿಶುಂಭ ಹಾ ದುರ್ಗಾಪೂಜಾ.(ದುರ್ಗಾಷ್ಠಮಿ), ಒಂಭತ್ತನೇ ದಿನ ಶುಂಭ ಹಾ ದುರ್ಗಾಪೂಜಾ. ಏಳನೇ ದಿನ ಅಂದರೆ ಸಪ್ತಮಿಯಿಂದ ತ್ರಿದಿನ ದುರ್ಗಾಪೂಜಾ ಎಂದೂ ಮಾಡುತ್ತಾರೆ. ಮಹಾಕಾಳಿ, ಮಹಾಲಕ್ಷ್ಮಿ,ಮಹಾಸರಸ್ವತಿ ಪೂಜೆ ಮಾಡಲಾಗುತ್ತದೆ. ನವಮಿಯಂದು ಆಯುಧಗಳನ್ನು ಪೂಜಿಸಲಾಗುತ್ತದೆ, ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ಇದು ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ಕೊಂದ ದಿನ ಹಾಗೂ ದ್ವಾಪರ ಯುಗದಲ್ಲಿ ಪಾಂಡವರು ಕೌರವರನ್ನು ಸೋಲಿಸಿದ ದಿನವೂ ಹೌದು. ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ. ಎಂದು ಶ್ರೀಗಳು ತಿಳಿಸಿದರು.

ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿ ನಿಲ್ಲುತ್ತದೆ. 9 ದಿನಗಳ ಕಾಲ ಆದಿ ಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತದೆ. ಭಕ್ತರು ಒಂಬತ್ತು ದಿನಗಳ ಕಾಲ ಉರಿಸುವ ದೀಪ, ನವರಾತ್ರ್ಯೋತ್ಸವದ ವೈಶಿಷ್ಟ್ಯ.ಸ್ತ್ರೀಯರ ಮಾತೃಶಕ್ತಿಯ ಪ್ರತೀಕವಾಗಿ ಒಂಬತ್ತು ದಿನಗಳ ಕಾಲ ಈ ದೀಪಗರ್ಭ’ವನ್ನು ಪೂಜಿಸುತ್ತಾರೆ. ನವರಾತ್ರಿ ಮತ್ತು ಇತರ ಧಾರ್ಮಿಕ ವಿಧಿಗಳಲ್ಲಿ ದೀಪವು ಅಖಂಡವಾಗಿ ಉರಿಯುತ್ತಿರುವುದು ಪೂಜಾವಿಧಿಯ ಭಾಗವಾಗಿರುತ್ತದೆ. ನವರಾತ್ರಿಯ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾರ್ಯರತವಾಗುವ ಶಕ್ತಿತತ್ವವನ್ನು ಗ್ರಹಿಸಲು ಈ ಸಮಯದಲ್ಲಿಶ್ರೀ ದುರ್ಗಾದೇವ್ಯೈ ನಮಃ |’ ನಾಮಜಪವನ್ನು ಸತತವಾಗಿ ಮಾಡಬೇಕು.ದೇವಿಯು ಮಹಿಷಾಸುರನೆಂಬ ರಾಕ್ಷಸನೊಂದಿಗೆ ಪಾಡ್ಯದಿಂದ ನವಮಿಯವರೆಗೆ ಒಂಬತ್ತು ದಿನಗಳ ಕಾಲ ಯುದ್ಧ ಮಾಡಿ ನವಮಿಯ ರಾತ್ರಿ ಅವನನ್ನು ಸಂಹರಿಸಿದಳು. ಅಂದಿನಿಂದ ಅವಳಿಗೆ ಮಹಿಷಾಸುರ ಮರ್ದಿನಿ ಎಂಬ ಹೆಸರು ಬಂದಿತು ಎಂದರು.

ಮಾತೃದೇವೋ ಭವ ಎಂಬುದು ಭಾರತೀಯ ಸಂಸ್ಕೃತಿಯ ತಾರಕ ಮಂತ್ರ. ತಾಯಿಯಲ್ಲಿ ದೈವತ್ವವನ್ನು ದೈವತ್ವದ ಪ್ರೀತಿಯನ್ನು ಕಂಡ, ಅನುಭವಿಸಿದ ಸಂಸ್ಕೃತಿ ನಮ್ಮದು ವ್ಯಾಪಾರಿಕ ಪ್ರಪಂಚದಿಂದ ಅಲೌಕಿಕ ಪ್ರಪಂಚಕ್ಕೆ ಹೋದಾಗ ಈ ಮಾತೃತ್ವ ವಿಶ್ವರೂಪಿಣಿಯಾಗಿ, ಜಗನ್ಮಾತೆ, ಜಗದಂಬೆ, ದುರ್ಗಾಂಬೆ ಹೀಗೆ ಭಕ್ತಿ, ಶ್ರದ್ಧೆಗಳು, ದೈವೋಪಾಸನೆಯ ಶಕ್ತಿಯಾಗುತ್ತಾಳೆ ಎಂದು ಶ್ರೀಗಳು ತಿಳಿಸಿದರು.

ಈ ಸಂದರ್ಭದಲ್ಲಿ ನಿನ್ನೆಯಿಂದ ಪ್ರಾರಂಭವಾದ ಶರನ್ನವರಾತ್ರಿಯೂ ಅ.21ರವರೆಗೂ ನಡೆಯಲಿದೆ, ಪ್ರತಿ ದಿನ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೂ ಮಲ್ಲಾಪುರದ ಗೊಲ್ಲರಹಟ್ಟಿಯ ತಿಪ್ಪೇಸ್ವಾಮಿಯವರು ದೇವಿಯ ಚರಿತ್ರೆಯನ್ನು ಪಠಿಸಿದರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿಗಳು ಸಾಹಿತಿಗಳಾದ ಹುರಳಿ ಬಸವರಾಜು ರವರು ಚರಿತ್ರೆಯನ್ನು ವಾಚನ ಮಾಡಲಿದ್ದಾರೆ. ಇವರೊಂದಿಗೆ ಜಾನಪದ ಕಲಾವಿದರಾದ ಆಯಿತೋಳ ವಿರೂಪಾಕ್ಷಪ್ಪ ರವರು ಹಾರ್ಮೋನಿಯಂ ಹಾಗೂ ಯಶವಂತ ಕುಮಾರ್ ತಬಲವನ್ನು ನುಡಿಸಲಿದ್ದಾರೆ. ಪ್ರತಿ ದಿನ ಸಂಜೆ 5.30 ರಿಂದ 6.30ರವರೆಗೆ ಮಾತೆಯರಿಂದ ಶ್ರೀ ಲಲಿತಾ ಸಹಸ್ರನಾಮ ಸ್ರೋತ್ರ ಪಠಣ ಕಾರ್ಯಕ್ರಮ ನಡೆಯಲಿದೆ. ಅ.18 ರ ಭಾನುವಾರ ಚಂಡಿಕಾ ಹೋಮ ನಡೆಯಲಿದ್ದು, ಅ. 21ರ ಬುಧವಾರ ಸಂಜೆ 4 ಗಂಟೆಗೆ ಶ್ರೀ ಮಠದ ಕತೃಗಳಾದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳ 120 ನೇ ವರ್ಷದ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.

ಈ ಸಮಯದಲ್ಲಿ ತಿಪ್ಪೇಸ್ವಾಮಿ, ಯೋಗೀಶ್, ಸೇರಿದಂತೆ ಇತರೆ ಭಕ್ತಾಧಿಗಳು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now