ಬೆಂಗಳೂರು: 2026ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜಾ ದಿನಾಂಕವನ್ನು ಬದಲಾವಣೆ ಮಾಡಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಪ್ರಕಟಿಸಲಾಗಿದ್ದ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಂತೆ 2026ರ ಅಕ್ಟೋಬರ್ 25ರ ಭಾನುವಾರದಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ನಿಗದಿಪಡಿಸಲಾಗಿತ್ತು. ಆದರೆ ಇದೀಗ ಪರಿಷ್ಕೃತ ಆದೇಶದ ಪ್ರಕಾರ, ಅಕ್ಟೋಬರ್ 26ರ ಸೋಮವಾರದಂದು (ಶೀಗಿ ಹುಣ್ಣಿಮೆ ದಿನ) ವಾಲ್ಮೀಕಿ ಜಯಂತಿಯನ್ನು ಆಚರಿಸಲು ಹಾಗೂ ಅಂದು ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಎಂದು ಘೋಷಿಸಲಾಗಿದೆ.
ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್, 1881ರ ಸೆಕ್ಷನ್ 25ರ ವಿವರಣೆಯನ್ವಯವೂ ಈ ದಿನವನ್ನು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್. ಅವರು ರಾಜ್ಯಪಾಲರ ಆದೇಶಾನುಸಾರ ಅಧಿಸೂಚನೆ ಹೊರಡಿಸಿದ್ದಾರೆ.











