ಕೈರೋ: ಇಸ್ರೇಲ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಕಾಕ್ಪಿಟ್ನಲ್ಲಿ ಕ್ಯಾಪ್ಟನ್ ಮೇಲೆ ಹಲ್ಲೆ ನಡೆಸಿದ ಸಹ-ಪೈಲಟ್ನನ್ನು ಒಮನ್ ಮೂಲದ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಕಾಕ್ಪಿಟ್ನಲ್ಲಿದ್ದ ತುರ್ತು ಕ್ರ್ಯಾಶ್ ಕೊಡಲಿಯನ್ನು (crash axe) ಬಳಸಿ ಕ್ಯಾಪ್ಟನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, 182 ಪ್ರಯಾಣಿಕರಿದ್ದ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆತ ಯತ್ನಿಸಿದ್ದಾನೆ ಎಂದು ಯುಎಇ ಸರ್ಕಾರ ಹೇಳಿದ್ದು, ಈ ಘಟನೆಯನ್ನು “ಅಪಾಯಕಾರಿ ಭಯೋತ್ಪಾದಕ ಕೃತ್ಯ” ಎಂದು ಘೋಷಿಸಿದೆ..
ಆರೋಪಿ ಸಹ-ಪೈಲಟ್ ಈ ಕೃತ್ಯವನ್ನು ಏಕಾಂಗಿಯಾಗಿ ಎಸಗಿದ್ದಾನೆಯೇ ಅಥವಾ ಯಾವುದೇ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ತೀವ್ರಗಾಮಿ ವಿಚಾರಧಾರೆಗಳನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಈತನನ್ನು ಒಮನ್ನಲ್ಲಿ ವಿಮಾನ ಹಾರಾಟದಿಂದ ನಿರ್ಬಂಧಿಸಲಾಗಿತ್ತು ಹಾಗೂ ಅಲ್ಲಿನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಿಂದ ಆಡಳಿತಾತ್ಮಕ ಹುದ್ದೆಗೆ ವರ್ಗಾಯಿಸಲಾಗಿತ್ತು ಎಂದು ತಿಳಿದುಬಂದಿದೆ. ಆದಾಗ್ಯೂ, ನಂತರ ಯುಎಇ ಮೂಲದ ಫ್ಲೈದುಬೈ ಸಂಸ್ಥೆಯು ಈತನನ್ನು ಹೇಗೆ ನೇಮಿಸಿಕೊಂಡಿತು ಮತ್ತು ಯಾವ ರೀತಿಯ ಭದ್ರತಾ ಪರಿಶೀಲನೆಗಳನ್ನು ನಡೆಸಿತ್ತು ಎಂಬ ಬಗ್ಗೆ ತೀವ್ರ ಆತಂಕ ಹಾಗೂ ಪ್ರಶ್ನೆಗಳು ಎದ್ದಿವೆ. ಯುಎಇಯಲ್ಲಿ ಜನಿಸಿದ ಈತನ ತಾಯಿ ಸಿರಿಯಾ ಮೂಲದವರಾಗಿದ್ದು, ಒಮನ್ ಮತ್ತು ಇಸ್ರೇಲ್ ನಡುವೆ ಯಾವುದೇ ರಾಜತಾಂತ್ರಿಕ ಸಂಬಂಧಗಳಿಲ್ಲದಿರುವಾಗ ಈತ ಇಸ್ರೇಲ್ಗೆ ತೆರಳುತ್ತಿದ್ದ ವಿಮಾನದ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದು ಹೇಗೆ ಎಂಬುದು ತನಿಖೆಯ ಪ್ರಮುಖ ವಿಷಯವಾಗಿದೆ.
ದಾಳಿಯಲ್ಲಿ ಕ್ಯಾಪ್ಟನ್ ಗಂಭೀರವಾಗಿ ಗಾಯಗೊಂಡಿದ್ದರೂ, ಸಮಯಪ್ರಜ್ಞೆ ಮೆರೆದು ಕಾಕ್ಪಿಟ್ ಬಾಗಿಲನ್ನು ತೆರೆದಿದ್ದಾರೆ. ತಕ್ಷಣವೇ ಇತರ ಸಿಬ್ಬಂದಿ ಮತ್ತು ಪ್ರಯಾಣಿಕರು ಒಳನುಗ್ಗಿ ಸಹ-ಪೈಲಟ್ನನ್ನು ಹಿಡಿದು ನಿಯಂತ್ರಿಸಿದ್ದಾರೆ. ಈ ಸಂಘರ್ಷದ ವೇಳೆ ವೇಗವಾಗಿ ಕೆಳಮುಖವಾಗಿ ಧಾವಿಸುತ್ತಿದ್ದ ವಿಮಾನವನ್ನು ಸಕಾಲದಲ್ಲಿ ಸ್ಥಿರಗೊಳಿಸಿ, ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿಸುವ ಮೂಲಕ ಸಂಭವನೀಯ ಭೀಕರ ದುರಂತವನ್ನು ತಪ್ಪಿಸಲಾಗಿದೆ. ಯುಎಇಯ ಹಿರಿಯ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಾಶ್ ಅವರು ಇದೊಂದು ಅಪಾಯಕಾರಿ ಭಯೋತ್ಪಾದಕ ದಾಳಿ ಎಂದಿದ್ದರೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಹ-ಪೈಲಟ್ ಇಸ್ಲಾಮಿಸ್ಟ್ ತೀವ್ರಗಾಮಿ ಪ್ರಭಾವಕ್ಕೆ ಒಳಗಾಗಿದ್ದ ಎಂದು ಆರೋಪಿಸಿದ್ದಾರೆ. ಪ್ರಸ್ತುತ ಗಾಯಗೊಂಡ ಕ್ಯಾಪ್ಟನ್ ಹಾಗೂ ಆರೋಪಿ ಸಹ-ಪೈಲಟ್ ಇಬ್ಬರನ್ನೂ ಯುಎಇಗೆ ಕರೆದೊಯ್ಯಲಾಗಿದ್ದು, ಅಮೆರಿಕ ಹಾಗೂ ಇಸ್ರೇಲ್ ಸೇರಿದಂತೆ ಹಲವು ದೇಶಗಳ ಭದ್ರತಾ ಸಂಸ್ಥೆಗಳ ಸಹಕಾರದೊಂದಿಗೆ ಯುಎಇ ಈ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ.









