Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದಲ್ಲಿ ಪಿಂಚಣಿಗಿದ್ದ ವಾರ್ಷಿಕ ಆದಾಯ ಮಿತಿ 1.20 ಲಕ್ಷ ರೂ.ಗೆ ಹೆಚ್ಚಳ : ಡಿಸಿಎಂ ಡಾ.ಜಿ.ಪರಮೇಶ್ವರ್

ಸಚಿವ ಪರಮೇಶ್ವರ್
---Advertisement---

ಬೆಂಗಳೂರು.ಸೆಪ್ಟೆಂಬರ್. 29: ರಾಜ್ಯದಲ್ಲಿ ಈ ಹಿಂದೆ ಪಿಂಚಣಿಗಿದ್ದ ವಾರ್ಷಿಕ ಆದಾಯ ಮಿತಿಯನ್ನು ರೂ. 32 ಸಾವಿರದಿಂದ ರೂ. 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬರ ನಿರ್ವಹಣೆ, ಕೇಂದ್ರದ ಪರಿಹಾರ, ಸರ್ವಪಕ್ಷ ನಿಯೋಗ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡರು.

ಈ ಹಿಂದೆ ಪಿಂಚಣಿಗಿದ್ದ ವಾರ್ಷಿಕ ಆದಾಯ ಮಿತಿಯನ್ನು ರೂ. 32 ಸಾವಿರದಿಂದ ರೂ. 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ಹಿಂದೆ ರದ್ದಾಗಿದ್ದ ಸುಮಾರು 23 ಲಕ್ಷ ಫಲಾನುಭವಿಗಳ ಪೈಕಿ ನಿಜವಾದ ಅರ್ಹರಿಗೆ ಮತ್ತೆ ಪಿಂಚಣಿ ಸೌಲಭ್ಯ ಸಿಗಲಿದೆ. ವಯೋಮಿತಿ ಕೊರತೆ ಹಾಗೂ ಸೂಕ್ತ ದಾಖಲೆಗಳಿಲ್ಲದ ಅನರ್ಹರನ್ನು ಪರಿಶೀಲಿಸಿ ಹೊರಗಿಡುವ ಮೂಲಕ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಮನವಿಯ ಮೇರೆಗೆ ರಾಜ್ಯದ ಬರ ಪರಿಸ್ಥಿತಿಯ ಕುರಿತು ಸಮಗ್ರ ಅಧ್ಯಯನ ನಡೆಸಲು ಕೇಂದ್ರ ಸರ್ಕಾರದ ಮೂರು ಪ್ರತ್ಯೇಕ ತಂಡಗಳು ಶೀಘ್ರದಲ್ಲೇ ಕರ್ನಾಟಕಕ್ಕೆ ಆಗಮಿಸಲಿವೆ. ಕೇಂದ್ರದ ಮೊದಲ ತಂಡವು ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಭಾಗದಲ್ಲಿ ಪರಿಶೀಲನೆ ನಡೆಸಿದರೆ, ಎರಡನೇ ತಂಡ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತು ಮೂರನೇ ತಂಡ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಅಧ್ಯಯನ ಕೈಗೊಳ್ಳಲಿದೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಪ್ರಾಥಮಿಕ ಮೆಮೊರಾಂಡಂ ಸಲ್ಲಿಸಿದ್ದು, ಅದರ ಆಧಾರದ ಮೇಲೆ ತಂಡಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಲಿವೆ. ರಾಜ್ಯ ಸರ್ಕಾರ ಕೇಂದ್ರದ ಮಾರ್ಗಸೂಚಿ ಮತ್ತು ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಯೇ ಬರ ತಾಲೂಕುಗಳನ್ನು ಘೋಷಿಸಿರುವುದರಿಂದ, ರಾಜ್ಯದ ವರದಿಗೂ ಕೇಂದ್ರದ ಪರಿಶೀಲನೆಗೂ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸದ್ಯ ಇನ್ನಷ್ಟು ಭಾಗಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದ್ದು, ಸೆಪ್ಟೆಂಬರ್ 30ಕ್ಕೆ ಮುಂಗಾರು ಅವಧಿ ಮುಕ್ತಾಯಗೊಂಡ ಬಳಿಕ ಅಕ್ಟೋಬರ್ ಮೊದಲ ವಾರದಲ್ಲಿ ಅಂತಿಮ ಮೆಮೊರಾಂಡಂ ಸಿದ್ಧಪಡಿಸಿ ನಷ್ಟ ಹಾಗೂ ಪರಿಹಾರದ ಸಮಗ್ರ ವಿವರವನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು. ಬರ ಎಂಬುದು ಯಾವುದೇ ಪಕ್ಷಕ್ಕೆ ಸೀಮಿತವಾದ ವಿಚಾರವಲ್ಲ, ಪ್ರಕೃತಿ ವಿಕೋಪಕ್ಕೆ ರಾಜಕೀಯ ಬೇಧವಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ರಾಜ್ಯದ ಬಿಜೆಪಿ ನಾಯಕರೂ ನಮ್ಮೊಂದಿಗೆ ನಿಯೋಗದಲ್ಲಿ ಬಂದರೆ ಕೇಂದ್ರವನ್ನು ಮನವರಿಕೆ ಮಾಡಿಕೊಡಲು ಹೆಚ್ಚು ಅನುಕೂಲವಾಗಲಿದೆ. ಕಳೆದ ಬಾರಿಯಂತೆ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ತಂದೊಡ್ಡಬಾರದು ಎಂದು ಪರಮೇಶ್ವರ್ ಆಗ್ರಹಿಸಿದರು. ಮುಖ್ಯಮಂತ್ರಿಗಳು ದೆಹಲಿ ಭೇಟಿಯ ವೇಳೆ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರು ಹಾಗೂ ಇತರೆ ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಗತ್ಯತೆಗಳನ್ನು ಮನವರಿಕೆ ಮಾಡಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಈ ಯೋಜನೆಗಳಿಗೆ ಆರಂಭದಲ್ಲಿ ವಾರ್ಷಿಕ ರೂ. 40ರಿಂದ ರೂ. 45 ಸಾವಿರ ಕೋಟಿ ವೆಚ್ಚವಾಗಬಹುದು ಎಂಬ ಅಂದಾಜಿತ್ತು, ಆದರೆ ಪ್ರಸ್ತುತ ವಾಸ್ತವಿಕ ವೆಚ್ಚ ರೂ. 50 ಸಾವಿರ ಕೋಟಿಗೂ ಅಧಿಕವಾಗಿದೆ ಎಂದರು. ಇದರಿಂದ ಆರ್ಥಿಕತೆಯ ಮೇಲೆ ಒತ್ತಡವಿರುವುದು ನಿಜವಾದರೂ, ಸರ್ಕಾರ ಅದನ್ನು ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದೆ ಮತ್ತು ಉಳಿದ ಅವಧಿಯಲ್ಲೂ ಸುಸೂತ್ರವಾಗಿ ಮುನ್ನಡೆಸುವ ಬದ್ಧತೆ ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Join WhatsApp

Join Now

Join Telegram

Join Now