ಹುಬ್ಬಳ್ಳಿ: 2013ರಲ್ಲಿ ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನಡೆದ ರೈತರ ಪ್ರತಿಭಟನೆ ವೇಳೆ ರೈಲು ತಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣದಲ್ಲಿ ಅವರ ವಿರುದ್ಧ ವಾರಂಟ್ ಜಾರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ರೈಲ್ವೆ ಪೊಲೀಸ್ ಪಡೆ (ಆರ್ಪಿಎಫ್) ಅಧಿಕಾರಿಗಳು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.2013ರಲ್ಲಿ ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಸುಮಾರು ಆರು ಗಂಟೆಗಳ ಕಾಲ ರೈಲು ತಡೆ ನಡೆಸಲಾಗಿತ್ತು.

ಈ ಸಂಬಂಧ ಆರ್ಪಿಎಫ್ ಪ್ರಕರಣ ದಾಖಲಿಸಿತ್ತು. ಪ್ರಕರಣದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾರಂಟ್ ಜಾರಿಯಾಗಿತ್ತು ಎಂದು ತಿಳಿದುಬಂದಿದೆ.ಬಂಧನದ ಬಳಿಕ ಅವರನ್ನು ಹುಬ್ಬಳ್ಳಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.









