ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡುವಾಗ ಅವು ಅತಿಯಾಗಿ ಬಿಸಿಯಾಗುವುದು ಸಾಮಾನ್ಯ ಸಮಸ್ಯೆಯಾಗಿ ಕಂಡುಬರುತ್ತಿದೆ. ಫೋನ್ ಯಾವುದೇ ಬ್ರ್ಯಾಂಡ್ದ್ದಾಗಿರಲಿ ಅಥವಾ ಯಾವುದೇ ಚಾರ್ಜರ್ ಬಳಸುತ್ತಿದ್ದರೂ, ಚಾರ್ಜಿಂಗ್ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ತಾಪಮಾನ ಏರುವುದು ಸಹಜ ಪ್ರಕ್ರಿಯೆ.
ಬ್ಯಾಟರಿಯನ್ನು ಚಾರ್ಜ್ ಮಾಡುವಾಗ ವಿದ್ಯುತ್ ಶಕ್ತಿಯ ಒಂದು ಭಾಗವು ಶಾಖವಾಗಿ ಪರಿವರ್ತನೆಗೊಳ್ಳುತ್ತದೆ. ಬ್ಯಾಟರಿ, ಚಾರ್ಜಿಂಗ್ ಸರ್ಕ್ಯೂಟ್ ಮತ್ತು ಪವರ್ ಅಡಾಪ್ಟರ್ಗಳಲ್ಲಿ ಶಕ್ತಿಯ ನಷ್ಟ ಉಂಟಾಗುವುದರಿಂದ ಈ ಶಾಖ ಉತ್ಪತ್ತಿಯಾಗುತ್ತದೆ. ವಿಶೇಷವಾಗಿ ‘ಫಾಸ್ಟ್ ಚಾರ್ಜಿಂಗ್’ ತಂತ್ರಜ್ಞಾನದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಹರಿಯುವುದರಿಂದ ಫೋನ್ ಇನ್ನಷ್ಟು ಬೇಗನೆ ಮತ್ತು ಹೆಚ್ಚಾಗಿ ಬಿಸಿಯಾಗುತ್ತದೆ. ಬ್ಯಾಟರಿಯಲ್ಲಿ ಚಾರ್ಜ್ ತೀರಾ ಕಡಿಮೆಯಿದ್ದಾಗ ಹಾಗೂ ಫಾಸ್ಟ್ ಚಾರ್ಜ್ ಮಾಡುವಾಗ ಸ್ವಲ್ಪ ಬಿಸಿಯಾಗುವುದು ತೀರಾ ಸಹಜವಾದರೂ, ಚಾರ್ಜಿಂಗ್ ವೇಳೆ ಫೋನ್ ಅನ್ನು ಅತಿಯಾಗಿ ಬಳಸುವುದರಿಂದ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಏರಬಹುದು.
ಚಾರ್ಜ್ ಆಗುತ್ತಿರುವಾಗಲೇ ಗೇಮ್ ಆಡುವುದು, ವಿಡಿಯೋ ಕರೆ ಮಾಡುವುದು ಅಥವಾ ಜಿಪಿಎಸ್ ನ್ಯಾವಿಗೇಷನ್ ಬಳಸುವುದರಿಂದ ಪ್ರೊಸೆಸರ್ ಮೇಲೆಯೂ ಹೆಚ್ಚಿನ ಒತ್ತಡ ಬಿದ್ದು ಇನ್ನಷ್ಟು ಶಾಖ ಬಿಡುಗಡೆಯಾಗುತ್ತದೆ. ಇದರೊಂದಿಗೆ ದಪ್ಪನೆಯ ಬ್ಯಾಕ್ ಕವರ್ ಹಾಕುವುದು, ನೇರ ಸೂರ್ಯನ ಬಿಸಿಲಿನಲ್ಲಿಡುವುದು, ಹಾಸಿಗೆಯಂತಹ ಶಾಖ ತಡೆಯುವ ಮೇಲ್ಮೈಗಳ ಮೇಲೆ ಫೋನ್ ಇರಿಸುವುದು ಅಥವಾ ಗಾಳಿಯಾಡದ ಸ್ಥಳಗಳಲ್ಲಿ ಚಾರ್ಜ್ ಮಾಡುವುದರಿಂದ ಶಾಖ ಹೊರಹೋಗಲು ಸಾಧ್ಯವಾಗದೆ ಸಾಧನ ತೀವ್ರವಾಗಿ ಕಾಯುತ್ತದೆ. ಸ್ಮಾರ್ಟ್ಫೋನ್ಗಳಲ್ಲಿರುವ ಲಿಥಿಯಂ-ಐಯಾನ್ ಬ್ಯಾಟರಿಗಳು ನಿರಂತರವಾಗಿ ಅತಿಯಾದ ಶಾಖಕ್ಕೆ ಒಡ್ಡಿಕೊಂಡರೆ ಅವುಗಳ ಜೀವಿತಾವಧಿ ಹಾಗೂ ಚಾರ್ಜಿಂಗ್ ಸಾಮರ್ಥ್ಯ ಕ್ಷೀಣಿಸುತ್ತದೆ.

ಫೋನ್ ಅತಿಯಾಗಿ ಬಿಸಿಯಾಗುವುದನ್ನು ತಡೆಯಲು ಯಾವಾಗಲೂ ಉತ್ತಮ ಗುಣಮಟ್ಟದ ಹಾಗೂ ಹೊಂದಾಣಿಕೆಯಾಗುವ ಅಸಲಿ ಚಾರ್ಜರ್ ಮತ್ತು ಕೇಬಲ್ಗಳನ್ನು ಬಳಸಬೇಕು. ಚಾರ್ಜಿಂಗ್ ವೇಳೆ ಭಾರೀ ಆ್ಯಪ್ಗಳ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಿ, ಉತ್ತಮ ಗಾಳಿಯಾಡುವ ಸ್ಥಳದಲ್ಲಿ ಸಾಧನವನ್ನು ಇರಿಸಬೇಕು. ಒಂದು ವೇಳೆ ಸಾಮಾನ್ಯ ಚಾರ್ಜಿಂಗ್ ವೇಳೆಯೂ ಫೋನ್ ಅತಿಯಾಗಿ ಬಿಸಿಯಾಗುತ್ತಿದ್ದರೆ, ತಾಪಮಾನದ ಎಚ್ಚರಿಕೆ ಸಂದೇಶ ತೋರಿಸುತ್ತಿದ್ದರೆ, ಬ್ಯಾಟರಿ ಊದಿಕೊಂಡಂತೆ ಕಂಡುಬಂದರೆ ಅಥವಾ ಪದೇಪದೇ ಚಾರ್ಜಿಂಗ್ ತಾನಾಗಿಯೇ ಸ್ಥಗಿತಗೊಳ್ಳುತ್ತಿದ್ದರೆ ತಕ್ಷಣವೇ ಅಧಿಕೃತ ಸೇವಾ ಕೇಂದ್ರಕ್ಕೆ ಕೊಂಡೊಯ್ದು ತಪಾಸಣೆ ಮಾಡಿಸುವುದು ಸೂಕ್ತ.









