ಬೆಂಗಳೂರು.ಸೆಪ್ಟೆಂಬರ್. 22: ಕರ್ನಾಟಕ, ಬಿಹಾರ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳ ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗವು (ECI) ದಿನಾಂಕಗಳನ್ನು ಪ್ರಕಟಿಸಿದೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಒಟ್ಟು 28 ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿರುವುದರಿಂದ ಈ ಚುನಾವಣೆಗಳು ನಡೆಯುತ್ತಿವೆ. ಬಿಹಾರದ 8 (4 ಪದವೀಧರ, 4 ಶಿಕ್ಷಕರ ಕ್ಷೇತ್ರ), ಕರ್ನಾಟಕದ 4 (2 ಪದವೀಧರ, 2 ಶಿಕ್ಷಕರ ಕ್ಷೇತ್ರ), ಮಹಾರಾಷ್ಟ್ರದ 5 (3 ಪದವೀಧರ, 2 ಶಿಕ್ಷಕರ ಕ್ಷೇತ್ರ) ಹಾಗೂ ಉತ್ತರ ಪ್ರದೇಶದ 11 (5 ಪದವೀಧರ, 6 ಶಿಕ್ಷಕರ ಕ್ಷೇತ್ರ) ಸ್ಥಾನಗಳಿಗೆ ಮತದಾನ ನಡೆಯಲಿದೆ.
ಕರ್ನಾಟಕದ ನಿವೃತ್ತಿಯಾಗಲಿರುವ ಸದಸ್ಯರು ಹಾಗೂ ಕ್ಷೇತ್ರಗಳು
ಕರ್ನಾಟಕದ ನಾಲ್ಕು ಸದಸ್ಯರ ಅಧಿಕಾರಾವಧಿಯು 2026ರ ನವೆಂಬರ್ 11ರಂದು ಮುಕ್ತಾಯಗೊಳ್ಳಲಿದೆ. ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚಿದಾನಂದ್ ಎಂ. ಗೌಡ, ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಎಸ್.ವಿ. ಸಂಕನೂರ, ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಶಶೀಲ್ ಜಿ. ನಮೋಶಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಪುಟ್ಟಣ್ಣ ಅವರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ.
ಚುನಾವಣಾ ವೇಳಾಪಟ್ಟಿ ವಿವರ
ಅಧಿಸೂಚನೆ ಪ್ರಕಟಣೆ: ಸೆಪ್ಟೆಂಬರ್ 29, 2026 (ಮಂಗಳವಾರ)
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ 6, 2026 (ಮಂಗಳವಾರ)
ನಾಮಪತ್ರಗಳ ಪರಿಶೀಲನೆ: ಅಕ್ಟೋಬರ್ 7, 2026 (ಬುಧವಾರ)
ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ: ಅಕ್ಟೋಬರ್ 9, 2026 (ಶುಕ್ರವಾರ)
ಮತದಾನ ದಿನಾಂಕ: ಅಕ್ಟೋಬರ್ 23, 2026 (ಶುಕ್ರವಾರ, ಬೆಳಗ್ಗೆ 8:00 ರಿಂದ ಸಂಜೆ 4:00 ರವರೆಗೆ)
ಮತ ಎಣಿಕೆ: ಅಕ್ಟೋಬರ್ 27, 2026 (ಮಂಗಳವಾರ)














