ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆಯಿತು. ಪ್ರಕರಣದ ಸಾಕ್ಷಿಗಳ ವಿಚಾರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಪವಿತ್ರಾ ಗೌಡ ಪರ ಹಿರಿಯ ವಕೀಲ ಬಾಲನ್ ನ್ಯಾಯಾಲಯದ ಗಮನಕ್ಕೆ ತಂದರು.ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಪವಿತ್ರಾ ಗೌಡ, ಜೈಲಿನಲ್ಲಿನ ಸಮಸ್ಯೆಗಳ ಕುರಿತು ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ಜೈಲಿನಲ್ಲಿ ಇತರ ಕೈದಿಗಳೊಂದಿಗೆ ಇರುವುದರಿಂದ ತೊಂದರೆಯಾಗುತ್ತಿದೆ ಎಂದು ಪವಿತ್ರಾ ಗೌಡ ಪರ ವಕೀಲರು ವಾದಿಸಿದರು. ವಿಶೇಷವಾಗಿ ನೈಜೀರಿಯಾ ಮೂಲದ ಕೆಲವು ಆರೋಪಿಗಳ ವರ್ತನೆಯಿಂದ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಲಾಗಿದೆ.ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಬ್ಯಾರಕ್ ನೀಡುವಂತೆ ಪವಿತ್ರಾ ಗೌಡ ಮತ್ತೆ ಮನವಿ ಮಾಡಿದ್ದಾರೆ. ಅವರ ಮನವಿಯ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳಿಂದ ವರದಿ ಪಡೆಯಲು ನ್ಯಾಯಾಲಯ ಸೂಚಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಪವಿತ್ರಾ ಗೌಡ ಅವರನ್ನು ಕಡಿಮೆ ಸಂಖ್ಯೆಯ ಕೈದಿಗಳಿರುವ ಮತ್ತೊಂದು ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ.
ನೈಜೀರಿಯಾ ಮೂಲದ ಆರೋಪಿಗಳ ವರ್ತನೆ ಕುರಿತು ಜೈಲು ಅಧಿಕಾರಿಗಳಿಗೆ ದೂರು ನೀಡಿದ ಬಳಿಕ, ಅವರಿಂದ ಪವಿತ್ರಾ ಗೌಡಗೆ ಕೊಲೆ ಬೆದರಿಕೆ ಬಂದಿದೆ ಎಂದು ಅವರ ಪರ ವಕೀಲರು ನ್ಯಾಯಾಲಯದಲ್ಲಿ ಆರೋಪಿಸಿದ್ದಾರೆ. ಜೈಲಿನಲ್ಲಿ ಪವಿತ್ರಾ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಕೀಲರು ವಾದಿಸಿದರು.
ಪವಿತ್ರಾ ಗೌಡ ಅವರನ್ನು ಭೇಟಿ ಮಾಡಲು ಹೋದಾಗ, ಜೈಲಿನ ಪರಿಸ್ಥಿತಿಯನ್ನು ಸಹಿಸಲಾಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ‘ನನಗೆ ಈ ಹಿಂಸೆ ತಡೆಯಲು ಆಗುತ್ತಿಲ್ಲ, ಒಂದು ತೊಟ್ಟು ವಿಷ ಕೊಡಿಸಿ’ ಎಂದು ಪವಿತ್ರಾ ಹೇಳಿದ್ದಾರೆ ಎಂದು ಅವರ ಪರ ವಕೀಲ ನಾರಾಯಣಸ್ವಾಮಿ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.
ಜೈಲಿನ ಪರಿಸ್ಥಿತಿಯಿಂದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವನ್ನು ವಕೀಲರು ವ್ಯಕ್ತಪಡಿಸಿದ್ದು, ಪವಿತ್ರಾ ಗೌಡ ಅವರಿಂದ ನ್ಯಾಯಾಲಯಕ್ಕೆ ಪತ್ರ ನೀಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.ಅಲ್ಲದೆ, ಈ ಪ್ರಕರಣದ ಆರೋಪಿಗಳಿಗೆ ಮಾತ್ರ ಜೈಲಿನಲ್ಲಿ ತೊಂದರೆ ನೀಡಲಾಗುತ್ತಿದೆ ಎಂದು ವಕೀಲರು ಆರೋಪಿಸಿದ್ದು, ಪ್ರತ್ಯೇಕ ಸೆಲ್ ಇರುವ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ.ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಈ ಪ್ರಕರಣದಲ್ಲಿ ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳ ಜಾಮೀನು ಅರ್ಜಿಗಳು ವಿಚಾರಣೆಯಲ್ಲಿವೆ.










