ಸುದ್ದಿಒನ್, ಚಿತ್ರದುರ್ಗ.ಸೆ.22: ಜಮೀನಿನ ಆದೇಶಕ್ಕೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದ ಚಿತ್ರದುರ್ಗ ಉಪವಿಭಾಗಾಧಿಕಾರಿಗಳ ಕಚೇರಿ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಬಸವರಾಜ್ ಹೆಚ್. ಜಿ. ಅವರು ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹೊಸದುರ್ಗ ತಾಲೂಕಿನ ಕೆಳ್ಳೋಡು ಗ್ರಾಮದ ನಿವಾಸಿ ಟಿ. ಹನುಮಂತಪ್ಪ ಎಂಬುವವರು ತಮ್ಮ ತಂದೆ ತಿಮ್ಮಪ್ಪ ಅವರಿಗೆ ಸೇರಿದ ಶ್ರೀರಾಮಪುರ ಹೋಬಳಿ ಹುಳುವಿನಗುಂಡಿ ಗ್ರಾಮದ ಜಮೀನಿನ ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಮುಗಿದು ದಿನಾಂಕ 09-06-2026 ರಂದು ಆದೇಶಕ್ಕಾಗಿ ಕಾಯ್ದಿರಿಸಲಾಗಿತ್ತು.
ಈ ಪ್ರಕರಣದ ಕಡತವನ್ನು ಹೊಂದಿದ್ದ ಎಫ್ಡಿಎ ಬಸವರಾಜ್ ಅವರು, ಆದೇಶ ಮಾಡಿಸಿಕೊಡಲು ವಿಳಂಬ ಮಾಡುತ್ತಾ ದೂರುದಾರರಿಂದ ರೂ.30,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ ದಿನಾಂಕ 07-09-2026 ರಂದು ರೂ.5,000 ಪಡೆದುಕೊಂಡಿದ್ದ ಬಸವರಾಜ್, ಬಾಕಿ ರೂ.25,000 ನೀಡುವಂತೆ ಪಟ್ಟು ಹಿಡಿದಿದ್ದರು. ಲಂಚ ನೀಡಲು ಇಷ್ಟವಿಲ್ಲದ ಹನುಮಂತಪ್ಪ ಅವರು ಚಿತ್ರದುರ್ಗದ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಪ್ರಭಾರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ, ದಿನಾಂಕ 21-09-2026ರ ಸಂಜೆ ಕಾರ್ಯಾಚರಣೆ ನಡೆಸಿಲಾಗಿದೆ. ದೂರುದಾರರಿಂದ ರೂ.25,000 ಲಂಚದ ಹಣವನ್ನು ಪಡೆದು ಆಟೋರಿಕ್ಷಾದಲ್ಲಿ ಹತ್ತಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಬಸವರಾಜ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ಮುಂದುವರೆದಿದೆ.










