Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭದ್ರಾ ಮೇಲ್ದಂಡೆ ಯೋಜನೆ: ಕ್ಯಾದಿಗೆರೆ, ಜೆ.ಎನ್.ಕೋಟೆ ಕೆರೆಗಳಿಗೂ ನೀರು ಹರಿಸಿಸಲು ರೈತರ ಆಗ್ರಹ : ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಾಥ್

---Advertisement---

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 22 : ಭದ್ರಾ ಮೇಲ್ದಂಡೆ ಯೋಜನೆಯಡಿ ನಮ್ಮೂರ ಕೆರೆಗಳಿಗೂ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ  ಕ್ಯಾದಿಗೆರೆ ಹಾಗೂ ಜೆ.ಎನ್.ಕೋಟೆ ರೈತರು ಮಂಗಳವಾರ ಮುಖ್ಯ ಇಂಜಿನಿಯರ್ ಕಚೇರಿಗೆ ಧಾವಿಸಿ ಹಕ್ಕೊತ್ತಾಯ ಮಂಡಿಸಿದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹಾಗೂ ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ನೇತೃತ್ವದಲ್ಲಿ ಕಚೇರಿಗೆ ಆಗಮಿಸಿದ ಮುನ್ನೂರಕ್ಕ ಹೆಚ್ಚು ರೈತರು ಪ್ರಾಯೋಗಿಕ ಪರೀಕ್ಷಾರ್ಥ ವೇಳೆಯೇ ನಮ್ಮೂರ ಕೆರೆಗಳಿಗೆ ನೀರು ಹಾಯಿಸಬೇಕು. ತಕ್ಷಣವೇ ಮಾರ್ಗಗಳ ಹುಡುಕಬೇಕೆಂದು ಒತ್ತಾಯಿಸಿದರು.
ಕ್ಯಾದಿಗೆರೆ ಗ್ರಾಮದ ಹೆದ್ದಾರಿ ಪಕ್ಕದಲ್ಲಿ ಆಳವಾದ ಗುಂಡಿಯಿದ್ದು ಮಳೆಗಾಲದಲ್ಲಿ ಇದು ಸದಾ ತುಂಬಿರುತ್ತಿತ್ತು. ಇದರಿಂದಾಗಿ ಸುತ್ತ ಮುತ್ತಲ ಜಮೀನುಗಳ ಅಂತರ್ಜಲ ಹೆಚ್ಚಳವಾಗಿ ರೈತರು ನೆಮ್ಮದಿಯಿಂದ ಇದ್ದರು. ಆದರೆ ಇತ್ತೀಚೆಗಿನ ದಿನಗಳಲ್ಲಿ ಮಳೆ ಬಾರದೆ ಗುಂಡಿಯಲ್ಲಿ ನೀರು ನಿಲ್ಲದೆ ತೊಂದರೆಯಾಗಿದೆ. ಅನತಿ ದೂರದಲ್ಲಿ ಭದ್ರಾ ಮೇಲ್ದಂಡೆ ಚಿತ್ರದುರ್ಗ ಶಾಖಾ ಕಾಲುವೆ ಹಾದು ಹೋಗಿದ್ದು ಅಲ್ಲಿಂದ ನೀರು ಹಾಯಿಸಿ  ಇಲ್ಲಿನ ಗುಂಡಿ ತುಂಬಿಸಬಹುದಾಗಿದೆ. ನಾವು ನೂರಾರು ಕೋಟಿ ರೂಪಾಯಿ ವೆಚ್ಚದ ಯೋಜನೆ ಕೇಳುತ್ತಿಲ್ಲ. ಕೆಲವು ಲಕ್ಷ ರು ವೆಚ್ಚದಲ್ಲಿ ಹೆದ್ದಾರಿ ಪಕ್ಕದ ಗುಂಡಿ ತುಂಬಿಸಬಹುದಾಗಿದೆ. ಸಣ್ಣ ಪುಟ್ಟ ಆಸೆಗಳ ಈಡೇರಿಸುವುದು ಸರ್ಕಾರ ಹಾಗೂ ಅಧಿಕಾರಿಗಳ ಕರ್ತವ್ಯವೆಂದರು.
ಜೆ.ಎನ್. ಕೋಟೆ ಕೆರೆಗೆ ಭದ್ರೆ ನೀರು ಲಿಂಕ್ ಇದ್ದರೂ ಹರಿದು ಬರುತ್ತಿಲ್ಲ. ಗ್ರಾಮಸ್ಥರೇ ಜೆಸಿಬಿ ಯಂತ್ರದ ಸಹಾಯದಿಂದ ಕಾಲುವೆ ತೋಡಿದ್ದಾರೆ. ಅಧಿಕಾರಿಗಳು ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇದೂ ಕೂಡಾ ಸರ್ಕಾರಕ್ಕೆ ಅಧಿಕ ವೆಚ್ಚವಾಗುವುದಿಲ್ಲವೆಂದು ರೈತರು  ಮನವಿ ಮಾಡಿದರು.

ಈ ವೇಳೆ ಮಾತನಾಡಿದ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, 30 ವರ್ಷಗಳಿಂದೆ ಜಿಲ್ಲೆಯ ಜನ ಸಮುದಾಯಗಳು  ಹೋರಾಟ ಮಾಡಿ ನೀರು ತಂದಿದ್ದಾರೆ. ತಮ್ಮೂರ ಪಕ್ಕದಲ್ಲಿ ನೀರು ಹರಿದು ಹೋಗುವುದ  ಆಸೆ ಕಣ್ಗಳಿಂದ ನೋಡಿ ಸಂತಸ ಪಟ್ಟಿದ್ದಾರೆ. ಆದರೆ ನಮಗೆ ನೀರು ಇಲ್ಲವೆಂಬ ಕೊರಗು ಅವರದ್ದಾಗಿದೆ. ಶಾಖಾ ಕಾಲುವೆ ಸಮೀಪದ  ಹಳ್ಳಗಳಿಗೆ ಭದ್ರೆ ನೀರು ಹರಿಯುವಂತೆ ಮಾಡಿದರೆ ಅಂತರ್ಜಲ ಹೆಚ್ಚಳವಾಗುತ್ತದೆ. ಹಾಗಾಗಿ ಅಧಿಕಾರಿಗಳು ಕಾರ್ಯಸಾಧ್ಯತೆ ಬಗ್ಗೆ ಗಂಭೀರವಾಗಿ ದೃಷ್ಟಿ ಹಾಯಿಸಬೇಕೆಂದು ಮನವಿ ಮಾಡಿದರು.

ಮನವಿ ಆಲಿಸಿದ ಮುಖ್ಯ ಇಂಜಿನಿಯರ್ ರವಿಶಂಕರ್ ಮಾತನಾಡಿ, ಸೆಪ್ಟಂಬರ್ 24 ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರದುರ್ಗಕ್ಕೆ ಆಗಮಿಸಿ ಗೋನೂರು ಕೆರೆಗೆ ಪೂಜೆ ಸಲ್ಲಿಸಲಿದ್ದಾರೆ. ಅವರು ಬಂದು ಹೋದ ನಂತರ ಇಲಾಖೆಯ ಇಂಜಿನಿಯರ್ ತಂಡದೊಂದಿಗೆ ನಾನೇ ಸ್ಥಳಕ್ಕೆ ಖುದ್ದು ಆಗಮಿಸಿ ಜೆ.ಎನ್.ಕೋಟೆ ಹಾಗೂ ಕ್ಯಾದಿಗೆರೆ ಗೆ ನೀರು ಹರಿಸುವುದರ ಕುರಿತು ಪರಿಶೀಲಿಸುವೆ ಎಂದರು.

ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹಾಯಿಸಲು ಮೂರು ಟಿಎಂಸಿ ಹಂಚಿಕೆ ಮಾಡಿ ಸರ್ಕಾರ ಆದೇಶಿಸಿದೆ. ಇದುವರೆಗೂ ಒಂದು ಟಿಎಂಸಿ ಯಷ್ಟು ನೀರನ್ನು ಮಾತ್ರ ಲಿಪ್ಟ್ ಮಾಡಿ ಕಾಲುವೆಗೆ ಹರಿಸಲಾಗಿದೆ. ಇನ್ನೂ ಎರಡು ಟಿಎಂಸಿ ಬಾಕಿ ಇದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಅಧಿಕಾರಿಗಳು ಹಾಗೂ ರೈತರು ಕಾಲುವೆ ಸಮೀಪ ಕುಳಿತು  ನೀರು ಹರಿಸುವ ಸಾಧ್ಯತೆ ಬಗ್ಗೆ ಚರ್ಚಿಸೋಣ. ಗ್ರಾವಿಟಿ ಲೆವೆಲ್ ನಲ್ಲಿ ನೀರು ಹರಿಯುವುದಿದ್ದರೆ ತಕ್ಷಣ ತೀರ್ಮಾನ ಕೈಗೊಳ್ಳಬೇಕು. ಎಲ್ಲವೂ ಸರ್ಕಾರದ ಮಟ್ಟದಲ್ಲಿ ಆಗಬೇಕು ಎಂದೇನಿಲ್ಲ. ಆದರೆ ರೈತರು  ಕಾನೂನು ಮೀರಿ ನಡೆದುಕೊಳ್ಳಬಾರದು. ಕಾಲುವೆಗೆ ಹಾನಿ ಮಾಡುವಂತಹ ದೃಷ್ಕೃತ್ಯಗಳ ನಡೆಸಬಾರದೆಂದು ವಿನಂತಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕೇವಲ ಅರ್ಧದಷ್ಟು ಮಾತ್ರ ಮುಗಿದಿದೆ. ಪೂರ್ಣ ಪ್ರಮಾಣದ ಅನುಷ್ಠಾನಕ್ಕಾಗಿ ಮತ್ತಷ್ಟು ಹೋರಾಟದ ಹಾದಿ ಸವೆಸಬೇಕಿದೆ. ಚಾಕೋಲೇಟ್, ಸಿಹಿ ಹಂಚಿ ಸಂಭ್ರಮಿಸುವಂತಹ ವಾತಾವರಣ ಇನ್ನೂ ಸೃಷ್ಟಿಯಾಗಿಲ್ಲ. ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆಗೆ ನೀರು ಹಾಯಿಸಬೇಕಿದೆ. ಸಿಹಿ ಹಂಚಿ ಮೈಮರೆತರೆ ಸರ್ಕಾರ, ಅಧಿಕಾರಿಗಳು ಎಚ್ಚರ ತಪ್ಪುವ ಸಾಧ್ಯತೆ ಇರುತ್ತದೆ ಎಂದರು.
ಕ್ಯಾದಿಗೆರೆಯ ಗ್ರಾಪಂ ಸದಸ್ಯ ಮಂಜುನಾಥ್, ಸತೀಶ್, ಸೀತಾರೆಡ್ಡಿ, ಹೂವಿನ ಕಲ್ಲೇಶಿ, ಮಾರ್ಕಂಡಪ್ಪ, ಬಸವರಾಜಪ್ಪ, ದೇವರಾಜು,ಹಟ್ಟಿ  ತಿಪ್ಪೇಸ್ವಾಮಿ, ರಾಜಪ್ಪ, ರಾಮಣ್ಣ, ಜೆ.ಎನ್.ಕೋಟೆ ತಾಪಂ ಮಾಜಿ ಸದಸ್ಯ ಮಂಜುನಾಥ್, ಸಿದ್ದೇಶ್ ನಾಯಕ, ಪ್ರಸನ್ನ ಕುಮಾರ್, ಸಿರಿಗಿ ನಿಂಗಪ್ಪ ಈ ವೇಳೆ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now