ಬೆಂಗಳೂರು: ಪ್ರೌಢಶಾಲೆ ಹಾಗೂ ಪದವಿಪೂರ್ವ ಹಂತದ ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಮತ್ತು ಆರ್ಥಿಕ ಶಿಸ್ತನ್ನು ಬೆಳೆಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶಾಲೆಗಳಲ್ಲಿ ಬ್ಯಾಂಕಿಂಗ್ ಹಾಗೂ ಹಣಕಾಸು ನಿರ್ವಹಣೆ ಕುರಿತು ವಿಶೇಷ ಶಿಕ್ಷಣ ನೀಡಲು ನಿರ್ಧರಿಸಿದ್ದು, ವಿದ್ಯಾರ್ಥಿಗಳಲ್ಲಿ ಆರ್ಥಿಕ ವ್ಯವಹಾರಗಳ ಕುರಿತು ಜಾಗೃತಿ ಮೂಡಿಸಲು ರೂಪಿಸಲಾಗಿರುವ ಈ ಯೋಜನೆಗೆ ಒಟ್ಟು 47.80 ಲಕ್ಷ ರೂಪಾಯಿ ಅನುದಾನವನ್ನು ಮೀಸಲಿಡಲಾಗಿದೆ.
ಈ ಉಪಕ್ರಮದ ಭಾಗವಾಗಿ 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು, 307 ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಹಾಗೂ ಎಡಿಬಿ ಶಾಲೆಗಳು ಸೇರಿದಂತೆ ಒಟ್ಟು 956 ಶಾಲೆಗಳಲ್ಲಿ ಈ ಪಠ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ, ದೈನಂದಿನ ಜೀವನಕ್ಕೆ ಅಗತ್ಯವಿರುವ ಹಣಕಾಸಿನ ನಿರ್ವಹಣೆ ಮತ್ತು ಮೂಲಭೂತ ಬ್ಯಾಂಕಿಂಗ್ ವ್ಯವಸ್ಥೆಯ ಸಮಗ್ರ ಅರಿವು ಮೂಡಿಸಲಾಗುತ್ತದೆ.
ವಿಶೇಷವಾಗಿ ಸುರಕ್ಷಿತ ಡಿಜಿಟಲ್ ವಹಿವಾಟು, ಷೇರು ಮಾರುಕಟ್ಟೆಯ ಪ್ರಾಥಮಿಕ ಕಲ್ಪನೆ, ಹೂಡಿಕೆ ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಹಾಗೂ ಹಣಕಾಸು ವಂಚನೆಗಳನ್ನು ತಡೆಗಟ್ಟುವ ಕುರಿತು ಅಗತ್ಯ ಮಾರ್ಗದರ್ಶನ ನೀಡುವ ಪಠ್ಯಕ್ರಮವನ್ನು ರಚಿಸಲು ಸೂಚಿಸಲಾಗಿದೆ. ವಿದ್ಯಾರ್ಥಿ ದೆಸೆಯಲ್ಲೇ ಆರ್ಥಿಕ ಸಾಕ್ಷರತೆ ಹಾಗೂ ವ್ಯವಹಾರಿಕ ಜ್ಞಾನವನ್ನು ವೃದ್ಧಿಸಿ, ಭವಿಷ್ಯದ ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಈ ಯೋಜನೆ ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ.











