ಹೈದರಾಬಾದ್: ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ (TTD) ಲಡ್ಡು ಪ್ರಸಾದಕ್ಕೆ ಪೂರೈಕೆಯಾದ ಎನ್ನಲಾದ ಕಲಬೆರಕೆ ತುಪ್ಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆ ಚುರುಕುಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೃತಿ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಪ್ರವರ್ತಕ ಕೈಲಾಶ್ ಚಂದ್ ಮಂಗ್ಲಾ ಅವರನ್ನು ಸೆಪ್ಟೆಂಬರ್ 17ರಂದು ಹೈದರಾಬಾದ್‌ನ ಇಡಿ ವಲಯ ಕಚೇರಿ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ಅವರನ್ನು ವಿಶಾಖಪಟ್ಟಣಂನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇಡಿ ತನಿಖೆಯ ಪ್ರಕಾರ, ಟಿಟಿಡಿಗೆ ‘ಅಗ್ಮಾರ್ಕ್ ಸ್ಪೆಷಲ್ ಗ್ರೇಡ್ ಕೌ ಗೀ’ ಎಂದು ಪೂರೈಕೆ ಮಾಡಲಾಗುತ್ತಿದ್ದ ಉತ್ಪನ್ನದಲ್ಲಿ ರಿಫೈನ್ಡ್ ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್, ಪಾಲ್ಮೋಲಿನ್ ಸೇರಿದಂತೆ ಎಂಜಿ-90, ಮೊನೊಗ್ಲಿಸರೈಡ್ಸ್, ಮೈವ್ಯಾಸೆಟ್ ಸಾಫ್ಟ್ 400 ಮತ್ತು ಅಸಿಟಿಕ್ ಆಸಿಡ್ ಎಸ್ಟರ್‌ನಂತಹ ರಾಸಾಯನಿಕಗಳನ್ನು ಬಳಸಲಾಗಿತ್ತು ಎಂದು ಆರೋಪಿಸಲಾಗಿದೆ.
2019ರಿಂದ 2024ರ ಅವಧಿಯಲ್ಲಿ ಟಿಟಿಡಿಗೆ ಪೂರೈಕೆಯಾದ ಎನ್ನಲಾದ ತುಪ್ಪದ ಒಟ್ಟು ಮೌಲ್ಯ ಸುಮಾರು ₹230 ಕೋಟಿ ಎಂದು ಇಡಿ ಹೇಳಿದೆ. ಈ ಪೈಕಿ ಸುಮಾರು ₹96 ಕೋಟಿ ಮೌಲ್ಯದ ಕಲಬೆರಕೆ ತುಪ್ಪವನ್ನು ಮಂಗ್ಲಾ ಅವರ ಕಾರ್ಖಾನೆಯಲ್ಲಿ ತಯಾರಿಸಲಾಗಿತ್ತು ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಇಡಿ ಪ್ರಕಾರ, ಮಂಗ್ಲಾ ಅವರು ಕಲಬೆರಕೆ ಪದಾರ್ಥಗಳ ಖರೀದಿಗೆ ಸಹಕರಿಸುವುದರ ಜೊತೆಗೆ ತಮ್ಮ ಕಾರ್ಖಾನೆಯಲ್ಲೇ ಕಲಬೆರಕೆ ತುಪ್ಪ ತಯಾರಿಸಿದ್ದರು ಎನ್ನಲಾಗಿದೆ. ಬಳಿಕ ಶ್ರೀ ವೈಷ್ಣವಿ ಡೈರಿ ಸ್ಪೆಷಾಲಿಟೀಸ್, ಮಾಲ್‌ಗಂಗಾ ಮಿಲ್ಕ್ ಆ್ಯಂಡ್ ಅಗ್ರೋ ಪ್ರಾಡಕ್ಟ್ಸ್ ಹಾಗೂ ಎ.ಆರ್. ಡೈರಿ ಫುಡ್ಸ್ ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ಪೂರೈಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.
ಅಸಲಿ ಹಸುವಿನ ತುಪ್ಪ ಉತ್ಪಾದನೆ ಮತ್ತು ಪೂರೈಕೆ ಮಾಡುತ್ತಿರುವಂತೆ ಬಿಂಬಿಸಲು ತುಪ್ಪ ಹಾಗೂ ರಿಫೈನ್ಡ್ ಪಾಮ್ ಆಯಿಲ್‌ನ ಖರೀದಿ-ಮಾರಾಟಕ್ಕೆ ಸಂಬಂಧಿಸಿದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಿರ್ವಹಿಸಲಾಗಿತ್ತು ಎಂದು ಇಡಿ ಆರೋಪಿಸಿದೆ. ಕಲಬೆರಕೆ ಪದಾರ್ಥಗಳ ನೈಜ ಬಳಕೆಯನ್ನು ಮರೆಮಾಚುವುದು ಇದರ ಉದ್ದೇಶವಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ. ಈ ಪ್ರಕರಣದಲ್ಲಿ ಇಡಿ ಬಂಧಿಸಿರುವ ಪ್ರಮುಖ ಆರೋಪಿಗಳ ಪೈಕಿ ಮಂಗ್ಲಾ ಎರಡನೇಯವರಾಗಿದ್ದಾರೆ. ಇದಕ್ಕೂ ಮುನ್ನ ಭೋಲೆ ಬಾಬಾ ಆರ್ಗಾನಿಕ್ ಡೈರಿ ಮಿಲ್ಕ್ ಸಂಸ್ಥೆಯ ಪ್ರವರ್ತಕ ಹಾಗೂ ನಿರ್ದೇಶಕ ವಿಪಿನ್ ಜೈನ್ ಅವರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ಮುಂದುವರಿದಿದೆ.











