ಬೆಂಗಳೂರು: ಜೆಡಿಎಸ್ ಕಾರ್ಯಕರ್ತರೊಬ್ಬರು ನೀಡಿದ್ದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಅವರಿಗೆ ಮತ್ತೊಂದು ಕಾನೂನುಬದ್ಧ ಪರಿಹಾರ ದೊರೆತಿದೆ. ಪ್ರಕರಣದ ಮರುತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಎರಡನೇ ಬಾರಿಗೆ ‘ಬಿ-ರಿಪೋರ್ಟ್’ ಸಲ್ಲಿಸಿದ್ದಾರೆ.
ಹೊಳೆನರಸೀಪುರದ ಗನ್ನಿಕಾಡ ಫಾರ್ಮ್‌ಹೌಸ್‌ನಲ್ಲಿ ಸೂರಜ್ ರೇವಣ್ಣ ತಮ್ಮ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಶಿವಕುಮಾರ್ ಎಂಬುವರು 2024ರ ಜೂನ್‌ನಲ್ಲಿ ದೂರು ನೀಡಿದ್ದರು. ಪ್ರಕರಣದ ಆಧಾರದ ಮೇಲೆ ಸೂರಜ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಈ ಹಿಂದೆ ‘ಬಿ-ರಿಪೋರ್ಟ್’ ಸಲ್ಲಿಸಿತ್ತು. ಆದರೆ ದೂರುದಾರರು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಆ ವರದಿಯನ್ನು ತಿರಸ್ಕರಿಸಿ ಮರುತನಿಖೆಗೆ ಆದೇಶಿಸಿತ್ತು.
ನ್ಯಾಯಾಲಯದ ಆದೇಶದ ಬಳಿಕ ಸಿಐಡಿ ಅಧಿಕಾರಿಗಳು ಪ್ರಕರಣವನ್ನು ಮತ್ತೊಮ್ಮೆ ತನಿಖೆ ನಡೆಸಿದ್ದಾರೆ. ತನಿಖೆಯ ವೇಳೆ ಎಫ್‌ಎಸ್‌ಎಲ್ ವರದಿ ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲಿಸಿರುವ ಅಧಿಕಾರಿಗಳು, ಸಮರ್ಪಕ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಇದೀಗ ಎರಡನೇ ಬಾರಿಗೆ ‘ಬಿ-ರಿಪೋರ್ಟ್’ ಸಲ್ಲಿಸಿದ್ದಾರೆ.ದೂರುದಾರ ಶಿವಕುಮಾರ್ ಸಲ್ಲಿಸಿದ್ದ ಆಕ್ಷೇಪಣೆ/ಮಾಫಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ ಸಿಐಡಿ ಮತ್ತೊಮ್ಮೆ ‘ಬಿ-ರಿಪೋರ್ಟ್’ ಸಲ್ಲಿಸಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಪ್ರಕರಣದ ಆರಂಭದಲ್ಲೇ ದೂರುದಾರನ ವಿರುದ್ಧ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪವೂ ಕೇಳಿಬಂದಿತ್ತು. ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ಎಂಬುವರು ಪ್ರತಿ ದೂರು ಸಲ್ಲಿಸಿ, ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹5 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ಆರೋಪಿಸಿದ್ದರು.
ಇದೀಗ ಸಿಐಡಿ ಎರಡನೇ ಬಾರಿಗೆ ‘ಬಿ-ರಿಪೋರ್ಟ್’ ಸಲ್ಲಿಸಿರುವುದರಿಂದ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.











