Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಣೇಶ ಮೂರ್ತಿ ತಯಾರಿಸಲು ಪಿ.ಒ.ಪಿ ಮತ್ತು ರಾಸಾಯನಿಕಗಳ ಬಳಕೆ : ಪರಿಸರಕ್ಕೆ ಮತ್ತು ಜೀವಸಂಕುಲಕ್ಕೆ ಅಪಾರ ಹಾನಿ : ಪರಿಸರ ಅಧಿಕಾರಿ ಪಲ್ಲವಿ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಸೆ. 10 : ಗಣೇಶ ಚತುರ್ಥಿಯು ಭಾರತದಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಬ್ಬದ ಆಚರಣೆಯು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ, ಗಣೇಶನ ಮೂರ್ತಿಗಳನ್ನು ತಯಾರಿಸಲು ಬಳಸುವ ಪಿ.ಒ.ಪಿ ಮತ್ತು ರಾಸಾಯನಿಕ ಬಣ್ಣಗಳು ಜಲಮೂಲಗಳನ್ನು ಕಲುಷಿತಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಪರಿಸರವನ್ನು ರಕ್ಷಿಸಲು ಪರಿಸರ ಸ್ನೇಹಿ (ಮಣ್ಣಿನ) ಗಣಪತಿ ಮೂರ್ತಿಗಳ ಬಳಕೆ ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶ್ರೀಮತಿ ಪಲ್ಲವಿ ತಿಳಿಸಿದರು.

ಕರ್ನಾಟಕ ರಾಜ್ಯ ಮಾಯು ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ, ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯವತಿಯಿಂದ ಚಿತ್ರದುರ್ಗ ನಗರದ ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಮಕ್ಕಳ ಕೈಯಿಂದ ಗಣಪತಿ ನಿರ್ಮಾಣದ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಪಿ.ಒ.ಪಿ ಗಣೇಶ ಮೂರ್ತಿಗಳು ನೋಡಲು ಆಕರ್ಷಕವಾಗಿ, ಹಗುರವಾಗಿ ಮತ್ತು ಅಗ್ಗವಾಗಿ ಸಿಗುವುದರಿಂದ ಜನರು ಇವುಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಆದರೆ, ಇವುಗಳಿಂದ ಪರಿಸರಕ್ಕೆ ಮತ್ತು ಜೀವಸಂಕುಲಕ್ಕೆ ಆಗುವ ಹಾನಿ ಅಪಾರ ಪಿ.ಒ.ಪಿ ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಮೂರ್ತಿಗಳನ್ನು ವಿಸರ್ಜನೆ ಮಾಡಿದ ನಂತರವೂ ಅವು ತಿಂಗಳುಗಟ್ಟಲೆ ನೀರಿನಲ್ಲಿ ಹಾಗೇ ಉಳಿಯುತ್ತವೆ. ಇದರಿಂದ ಜಲಮೂಲಗಳು (ಕೆರೆ, ನದಿ, ಬಾವಿ) ಕಸದ ತೊಟ್ಟಿಗಳಂತಾಗುತ್ತವೆ. ಪಿ.ಒ.ಪಿ ಮೂರ್ತಿಗಳಿಗೆ ಹೊಳಪು ನೀಡಲು ಸೀಸ ಕ್ಯಾಡ್ಮಿಯಂ, ತಾಮ್ರ ಮತ್ತು ಮಕ್ರ್ಯುರಿಯಂತಹ ವಿಷಕಾರಿ ರಾಸಾಯನಿಕ ಬಣ್ಣಗಳನ್ನು ಬಳಸಲಾಗುತ್ತದೆ. ಇವು ನೀರಿನಲ್ಲಿ ಸೇರಿ ನೀರನ್ನು ಸಂಪೂರ್ಣವಾಗಿ ಕಲುಷಿತಗೊಳಿಸುತ್ತವೆ. ನೀರಿನಲ್ಲಿ ವಿಷಕಾರಿ ರಾಸಾಯನಿಕಗಳು ಮಿಶ್ರಣವಾಗು ವುದರಿಂದ ಮೀನುಗಳು ಮತ್ತು ಇತರ ಜಲಚರ ಜೀವಿಗಳು ಆಮ್ಲಜನಕ ಸಿಗದೆ ಸಾವನ್ನಪ್ಪುತ್ತವೆ. ಕಲುಷಿತ ಗೊಂಡ ನೀರಿನ ಮೂಲಗಳು ಮನುಷ್ಯರ ಬಳಕೆಗೆ ಬಂದರೆ ಚರ್ಮದ ಕಾಯಿಲೆಗಳು, ಕ್ಯಾನ್ಸರ್ ಹಾಗೂ ಇತರೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದರು.

ನೈಸರ್ಗಿಕ ಜೇಡಿಮಣ್ಣು ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿ ತಯಾರಿಸುವ ಗಣಪತಿಯನ್ನು ಪರಿಸರ ಸ್ನೇಹಿ ಗಣಪತಿ ಎನ್ನಲಾಗುತ್ತದೆ. ಮಣ್ಣಿನ ಗಣಪತಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿದ ಕೆಲವೇ ಗಂಟೆಗಳಲ್ಲಿ ಅದು ಸಂಪೂರ್ಣವಾಗಿ ಕರಗಿ ನೀರಿನೊಂದಿಗೆ ಒಂದಾಗುತ್ತದೆ. ಈ ಮೂರ್ತಿಗಳಿಗೆ ಅರಿಶಿನ, ಕುಂಕುಮ, ಮುಲ್ತಾನಿ ಮಿಟ್ಟಿ ಮತ್ತು ತರಕಾರಿಗಳಿಂದ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಹಚ್ಚುವುದರಿಂದ ನೀರು ಕಲುಷಿತಗೊಳ್ಳುವುದಿಲ್ಲ.ಪರಿಸರ ಸ್ನೇಹಿ ಮೂರ್ತಿಗಳನ್ನು ಮನೆಯಲ್ಲೇ ಒಂದು ಬಕೆಟ್ ನೀರಿನಲ್ಲಿ ವಿಸರ್ಜಿಸ ಬಹುದು. ಆ ನೀರನ್ನು ಮನೆಯ ಗಿಡಗಳಿಗೆ ಹಾಕಬಹುದು. ಇದರಿಂದ ಕೆರೆ-ನದಿಗಳಿಗೆ ಅಲೆಯುವ ಅಗತ್ಯವಿರುವುದಿಲ್ಲ.ಇತ್ತೀಚೆಗೆ ಮಣ್ಣಿನ ಮೂರ್ತಿಯೊಳಗೆ ಗಿಡದ ಬೀಜಗಳನ್ನು ಇಟ್ಟು ತಯಾರಿಸುವ ‘ಬೀಜದ ಗಣಪತಿ’ ಪರಿಕಲ್ಪನೆ ಜನಪ್ರಿಯವಾಗಿದೆ. ಮೂರ್ತಿ ಕರಗಿದ ನಂತರ ಆ ಮಣ್ಣಿನಿಂದ ಸುಂದರವಾದ ಗಿಡ ಮೊಳಕೆಯೊಡೆಯುತ್ತದೆ.ದೇವರಿಗೆ ಭಕ್ತಿ ಮುಖ್ಯವೇ ಹೊರತು ಮೂರ್ತಿಯ ಗಾತ್ರ ಅಥವಾ ಕೃತಕ ಹೊಳಪಲ್ಲ. ಪ್ರಕೃತಿಯನ್ನು ನಾಶಮಾಡಿ ಆಚರಿಸುವ ಹಬ್ಬ ಭಗವಂತನಿಗೂ ಪ್ರೀತಿಯಾಗಲಾರದು. ಆದ್ದರಿಂದ, ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳು ಪಿ.ಒ.ಪಿ ಮೂರ್ತಿಗಳ ಬಳಕೆಯನ್ನು ನಿಷೇಧಿಸುತ್ತಿವೆ. ನಾಗರಿಕರಾದ ನಾವು ಜವಾಬ್ದಾರಿಯಿಂದ ವರ್ತಿಸಿ, “ಪಿ.ಒ.ಪಿ ಗಣಪತಿಗೆ ಗುಡ್-ಬೈ ಹೇಳಿ, ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಮನೆಗೆ ತರೋಣ” ಮತ್ತು ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ಉಡುಗೊರೆಯಾಗಿ ನೀಡೋಣ ಗೌರಿ ಗಣೇಶ ಮೂರ್ತಿ ತಯಾರಿಕೆ ಮತ್ತು ಮಾರಾಟ ಮಳಿಗೆಗಳನ್ನು ಸ್ಥಳೀಯ ಸಂಸ್ಥೆಗಳ ಸಹಯೋಗ ದೊಂದಿಗೆ ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆಯೆಂದು ತಿಳಿಸಿದರು.

ನಗರ ಸಭೆಯ ಪರಿಸರ ಅಭಿಯಂತರರಾದ ಜಾಫರ್ ಮಾತನಾಡಿ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿ ಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ ನಂತರ ನಗರಸಭೆವತಿಯಿಂದ ತಾತ್ಕಾಲಿಕ ನೀರಿನ ತೊಟ್ಟಿಗಳನ್ನು ವ್ಯವಸ್ಥೆ ಮಾಡಲಾಗಿದ್ದು ಇದರ ಸದ್ಬಳಕೆ ಮಾಡಿಕೊಂಡು ಮೂರ್ತಿ ವಿಸರ್ಜಿಸುವಂತೆ ತಿಳಿಸಿದರು.

ಶಾಲೆಯ ಆವರಣದಲ್ಲಿ ಮಣ್ಣಿನಿಂದ ಗಣಪತಿ ಮೂರ್ತಿಗಳನ್ನು ತಯಾರಿಸುವ ಕುರಿತು ನಾಗರಾಜ್ ಬೇದ್ರೆ ಪ್ರಾತ್ಯಕ್ಷಿಕೆ ತೋರಿಸುವುದರೊಂದಿಗೆ ಶಾಲೆಯ ಮಕ್ಕಳಿಂದಲೇ ಗಣೇಶ ಮೂರ್ತಿಗಳನ್ನು ಮಾಡಿಸಿ ಅರಿವು ಮೂಡಿಸಲಾಯಿತು. ಈ ಸಮಯದಲ್ಲಿ ಉಪ ಪರಿಸರ ಅಧಿಕಾರಿಯಾದರಾಜೇಶ್ ಹಾಗೂ ಶಾಲೆಯ ಪ್ರಾಂಶು ಪಾಲರು ಜನಕರೆಡ್ಡಿ, ವ್ಯವಸ್ಥಾಪಕರಾದ ವಿಜಯಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉತ್ತಮವಾಗಿ ಗಣಪತಿಮೂರ್ತಿಯನ್ನು ತಯಾರು ಮಾಡಿದ ನಾಲ್ಕು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು,

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now