ಚಿತ್ರದುರ್ಗ, ಸೆ.10: ಚಿತ್ರದುರ್ಗತಾಲ್ಲೂಕಿನ ದಂಡಿನಕುರುಬನಹಟ್ಟಿ ಗ್ರಾಮದ ಗೇಟ್ ಬಳಿ ಅಕ್ರಮವಾಗಿ ಮಾರಾಟ ಮಾಡಲು ಇಟ್ಟುಕೊಂಡಿದ್ದ 4 ಕೆ.ಜಿ 170 ಗ್ರಾಂ ಒಣ ಗಾಂಜಾವನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯದ ಚಿನ್ನದೊಡ್ಡಿಗಲ್ಲು ಗ್ರಾಮದ ಕರಿ ಶ್ರೀನಿವಾಸ ಅಲಿಯಾಸ್ ಶ್ರೀನು ಬಂಧಿತ ಆರೋಪಿ.
ಚಿತ್ರದುರ್ಗದಿಂದ ಚಳ್ಳಕೆರೆಗೆ ಹೋಗುವ ರಾಜ್ಯ ಹೆದ್ದಾರಿ-48 ರ ದಂಡಿನಕುರುಬನಹಟ್ಟಿ ಗೇಟ್ ಬಳಿಯ ಬಸ್ ನಿಲ್ದಾಣದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಈ ಆಧಾರದ ಮೇಲೆ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸೆಪ್ಟೆಂಬರ್ 07 ರಂದು ಸ್ಥಳದ ಮೇಲೆ ದಾಳಿ ನಡೆಸಿತು. ಈ ವೇಳೆ ಆರೋಪಿಯ ಬ್ಯಾಗ್ ಪರಿಶೀಲಿಸಿದಾಗ ಸುಮಾರು ರೂ.50,000 ಮೌಲ್ಯದ 4.170 ಕೆ.ಜಿ ಒಣ ಗಾಂಜಾ ಪತ್ತೆಯಾಗಿದೆ. ಅಧಿಕಾರಿಗಳು ಗಾಂಜಾವನ್ನು ಜಪ್ತಿ ಮಾಡಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಅಬಕಾರಿ ನಿರೀಕ್ಷಕರು, ಚಿತ್ರದುರ್ಗ ವಲಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
ಅಪರ ಅಬಕಾರಿ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕ ಸುರೇಂದ್ರ ಆಚಾರ್, ಅಬಕಾರಿ ನಿರೀಕ್ಷಕರಾದ ಕೆ.ಆರ್.ರಶ್ಮಿ, ಶಿವಶಂಕರ್ ಆರಾಧ್ಯ, ಉಪ ನಿರೀಕ್ಷಕರಾದ ಹಸನಸಾಬ ನದಾಫ, ಬಿ.ಮೂರ್ತಿ, ಮಂಜುಳಮ್ಮ, ಸಿಬ್ಬಂದಿಗಳಾದ ಎಂ.ಮಾರುತಿ, ಜಿ.ರಂಗಪ್ಪ ಹಾಗೂ ಗೃಹ ರಕ್ಷಕ ಸಿಬ್ಬಂದಿ ಇದ್ದರು.










