ಬೆಂಗಳೂರು.ಸೆಪ್ಟೆಂಬರ್.1 : ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ನೂತನವಾಗಿ ರೂಪಿಸಿರುವ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಅಭಿಯಾನ’ವು ಸೆಪ್ಟೆಂಬರ್ 5 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ.
ಜನರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯುವುದು ಹೊಸದಾಗಿ ರಚಿಸಲಾದ ‘ಪ್ರಜಾಸೇವಾ ಇಲಾಖೆ’ಯ ಪ್ರಮುಖ ಗುರಿಯಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಈ ಹಿಂದೆ ಸರ್ಕಾರದ ಸೇವೆಗಳನ್ನು ಪಡೆಯಲು ಸಾಧ್ಯವಾಗದೇ ಇದ್ದಾಗ ಅಥವಾ ಯೋಜನೆಯ ಪ್ರಯೋಜನಗಳು ತಲುಪದೇ ಇದ್ದ ಸಂದರ್ಭದಲ್ಲಿ ಕುಂದುಕೊರತೆಯನ್ನು ಅಧಿಕಾರಿಗಳ/ಜನಪ್ರತಿನಿಧಿಗಳ ಬಳಿ ಹೇಳಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಹರ ಸಾಹಸ ಪಡಬೇಕಾದ ಪರಿಸ್ಥಿತಿ ಇತ್ತು. ಆದರೆ, ಈಗ ಹಾಗಿಲ್ಲ. ಕ್ಷಣಾರ್ಧದಲ್ಲಿ ಯಾವುದೇ ರೀತಿಯ ಕುಂದುಕೊರತೆಗಳನ್ನು ಸರ್ಕಾರದ ಬಳಿ ಹೇಳಿಕೊಳ್ಳಬಹುದು. ಕರ್ನಾಟಕ ಸರ್ಕಾರದ ಪ್ರಜಾಸೇವಾ ಅಭಿಯಾನ ಎನ್ನುವುದು ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಅಥವಾ ನಿರ್ದಿಷ್ಟ ಅವಧಿಯಲ್ಲಿ ಪರಿಹಾರ ಒದಗಿಸುವ ಏಕೀಕೃತ ವ್ಯವಸ್ಥೆಯಾಗಲಿದೆ.
ಪ್ರಮುಖ ಉದ್ದೇಶಗಳು:
ನೇರ ಆಡಳಿತ: ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು.
ತ್ವರಿತ ಪರಿಹಾರ*: ವಿವಿಧ ಇಲಾಖೆಗಳಿಗೆ ಸಂಬAಧಿಸಿದ ದೂರುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು.
ಪಾರದರ್ಶಕತೆ*: ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವುದು.
ಪ್ರಜಾಸೇವಾ ಅಭಿಯಾನ ಸಭೆಗಳ ಆಯೋಜನೆ*:
ಜನರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆ ಯನ್ನು ಕಲ್ಪಿಸುವುದು ಹೊಸದಾಗಿ ರಚಿಸಿದ ಪ್ರಜಾಸೇವಾ ಇಲಾಖೆಯ ಉದ್ದೇಶವಾಗಿದೆ. ಪ್ರತಿ ಶನಿವಾರ ತಾಲ್ಲೂಕು/ಹೋಬಳಿ ಮಟ್ಟದ ಪ್ರಜಾಸೇವಾ ಅಭಿಯಾನ ಸಭೆಗಳನ್ನು ಪರ್ಯಾಯವಾಗಿ ರಾಜ್ಯಾದ್ಯಂತ ನಡೆಸಲು ಕ್ರಮವಹಿಸಲಾಗಿರುತ್ತದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು/ ಹೋಬಳಿ ಮಟ್ಟದಲ್ಲಿ ಸಭೆಯನ್ನು ಆಯೋಜಿಸಲಾಗುವುದು.
3-4 ತಿಂಗಳಲ್ಲಿ ಎಲ್ಲಾ ತಾಲ್ಲೂಕು/ಹೋಬಳಿ ಮಟ್ಟದ ಸಭೆಗಳನ್ನು ಏರ್ಪಡಿಸಲು ಏಕೀಕೃತ ಕ್ಯಾಲೆಂಡರ್ ಆಫ್ ಇವೆಂಟ್ಸ್ ಅನ್ನು ತಯಾರು ಮಾಡಲಾಗಿದೆ. ಯಾವುದೇ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆ ನಡೆಯುವ ಸಂದರ್ಭದಲ್ಲಿ ಅದೇ ದಿನ ಆ ಕ್ಷೇತ್ರದಲ್ಲಿ ಪ್ರತ್ಯೇಕ ಹೋಬಳಿ ಮಟ್ಟದ ಶಾಸಕರ ಸಭೆಯನ್ನು ನಡೆಸಲಾಗುವುದಿಲ್ಲ. ಬದಲಾಗಿ, ಸಂಬAಧಿಸಿದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಭಾಗವಹಿಸುತ್ತಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಭೆಗಳಿಗೆ ಸಂಬAಧಿಸಿದ ತಾಲ್ಲೂಕು ಅಧಿಕಾರಿಗಳೊಂದಿಗೆ ಹಾಜರಾಗುತ್ತಾರೆ. ಅದೇ ರೀತಿ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ತಾಲ್ಲೂಕು ಒಳಪಡುವ ಕ್ಷೇತ್ರದಲ್ಲಿ ನಡೆಯುವ ಶಾಸಕರ ಸಭೆಗಳಲ್ಲಿ ಭಾಗವಹಿಸುತ್ತಾರೆ. ಎಲ್ಲಾ ಸಭೆಗಳಲ್ಲಿ ಸ್ಥಳೀಯ ಮಾಜಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ಮುಖಂಡರಿಗೂ ಆಹ್ವಾನಿಸಲಾಗುತ್ತದೆ.
ಸಾರ್ವಜನಿಕರಿಗೆ ಮುಂಗಡ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆ ವ್ಯವಸ್ಥೆ:
ಪ್ರಜಾಸೇವಾ ಅಭಿಯಾನದಡಿ ಸಭೆಗಳ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನಗಳ ಮುಂಚಿತವಾಗಿ ಮನೆ-ಮನೆಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಲಾಗುತ್ತದೆ. ಈ ಕರಪತ್ರಗಳಲ್ಲಿ ಪೂರ್ವಮುದ್ರಿತ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳ ಪರಿಶೀಲನಾ ಪಟ್ಟಿಯನ್ನು ಒಳಗೊಂಡಿರುತ್ತದೆ. ಅಲ್ಲದೆ, ತಾಲ್ಲೂಕು ಅಥವಾ ಹೋಬಳಿ ವ್ಯಾಪ್ತಿಯ ನಿವಾಸಿಗಳಿಗೆ ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಅಧ್ಯಕ್ಷತೆ ವಹಿಸುವ ಜನಪ್ರತಿನಿಧಿಯ ವಿವರಗಳನ್ನು ತಿಳಿಸಲು ಕೃತಕ ಬುದ್ಧಿಮತ್ತೆ ಆಧಾರಿತ ಕಾಲ್ ಸೆಂಟರ್ ಮೂಲಕ ಹಿರಹೋಗುವ ಕರೆಗಳನ್ನು ಮಾಡಲಾಗುತ್ತದೆ. ಸಾರ್ವಜನಿಕರು ತಮ್ಮ ಅರ್ಜಿಗಳು ಹಾಗೂ ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರದಲ್ಲಿಯೇ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಪ್ರತಿ ಪ್ರಜಾಸೇವಾ ಅಭಿಯಾನ ಸಭೆಯ ಸ್ಥಳದಲ್ಲಿ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಿ, ಕಂಪ್ಯೂಟರ್ ಲ್ಯಾಪ್ಟಾಪ್, ಪ್ರಿಂಟರ್ ಹಾಗೂ ಇಂಟರ್ನೆಟ್ ಸೌಲಭ್ಯಗಳ ಸಾರ್ವಜನಿಕರಿಗೆ ನೇರವಾಗಿ ಆನ್ಲೈನ್ನಲ್ಲಿ ಅರ್ಜಿ ಹಾಗೂ ಅಹವಾಲುಗಳನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗುತ್ತದೆ.
ಪ್ರಜಾಸೇವಾ ಅಭಿಯಾನ ಸಭೆಯ ದಿನದಂದು ಅಹವಾಲುಗಳನ್ನು ಎರಡು ಪ್ರತ್ಯೇಕ ಸರತಿಗಳಲ್ಲಿ ನಿರ್ವಹಿಸಲಾಗುತ್ತದೆ. ಮೊದಲನೆಯದು ಹೊಸ ಅಹವಾಲುಗಳ ಸರತಿ. ಇದರಲ್ಲಿ ಸಾರ್ವಜನಿಕರು ಮೊದಲ ಬಾರಿಗೆ ನೋಂದಾಯಿಸುವ ಅಹವಾಲುಗಳನ್ನು ದಾಖಲಿಸಲಾಗುತ್ತದೆ.
ಎರಡನೆಯದು ಪರಿಹಾರವಾಗದ ಅಥವಾ ಅಸಮಾಧಾನಕರವಾಗಿ ಪರಿಹರಿಸಲಾದ ಅಹವಾಲುಗಳ ಸರತಿ. ಈಗಾಗಲೇ ಸಕಾಲ ಅಥವಾ ಏಕೀಕೃತ ದೂರು ನಿವಾರಣೆ ತಂತ್ರಾAಶದಲ್ಲಿ ನೋಂದಾಯಿಸಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಅಥವಾ 21 ದಿನಗಳ ನಂತರವೂ ಸಮರ್ಪಕ ಪರಿಹಾರ ದೊರೆಯದ ಅಹವಾಲುಗಳನ್ನು ಈ ಸರತಿಯಲ್ಲಿ ಪರಿಗಣಿಸಲಾಗುತ್ತದೆ.
ಈ ಸರತಿಯನ್ನು ಬಳಸಲು ಸಾರ್ವಜನಿಕರು ತಮ್ಮ ಸಕಾಲ, ಸಿಎಸ್ಸಿ ಅಥವಾ ಐಪಿಜಿಆರ್ಎಸ್ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಸಮಯದ ಅಭಾವವಿದ್ದಲ್ಲಿ ಇಂತಹ ಅಹವಾಲುದಾರರಿಗೆ ಸಭೆಯ ಅಧ್ಯಕ್ಷತೆ ವಹಿಸುವ ಜನಪ್ರತಿನಿಧಿಯೊಂದಿಗೆ ನೇರವಾಗಿ ಸಂವಹನ ನಡೆಸಲು ಆದ್ಯತೆ ನೀಡಲಾಗುತ್ತದೆ.














