ದಾವಣಗೆರೆ. ಸೆಪ್ಟೆಂಬರ್.01 : ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ‘ಸೀಸನಲ್ ಇನ್ಫ್ಲುಯೆಂಜಾ’ (Seasonal Influenza / H1N1) ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಆರೋಗ್ಯ ಸಚಿವರ ಸೂಚನೆಯಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇನ್ಫ್ಲುಯೆಂಜಾ ಹರಡುವಿಕೆಯನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ರೋಗವು ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮುಖಾಂತರ ಇತರರಿಗೆ ಹರಡುತ್ತದೆ. ಸೋಂಕಿತರು ಬಳಸಿದ ಕರವಸ್ತ್ರ ಮತ್ತು ನ್ಯಾಪ್ಕಿನ್ಗಳನ್ನು ಸ್ಪರ್ಶಿಸುವುದರಿಂದ ಹರಡುತ್ತದೆ.

ರೋಗದ ಲಕ್ಷಣಗಳು ಜ್ವರ, ಕೆಮ್ಮು, ಗಂಟಲು ಕೆರೆತ, ಮೂಗು ಸೋರುವಿಕೆ, ಮೈ-ಕೈ ನೋವು, ಚಳಿ, ತಲೆನೋವು, ಭೇದಿ, ಆಯಾಸ ಮತ್ತು ವಾಂತಿಯಾಗುವುದು. ಉಸಿರಾಟಕ್ಕೆ ತೊಂದರೆಯಾಗುವುದು.
ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಸಲಹೆಯ ಮೇರೆಗೆ ಸೂಕ್ತ ಚಿಕಿತ್ಸೆ ಪಡೆಯಬೇಕು.
ಇನ್ಫ್ಲುಯೆಂಜಾ (H1N1) ಹರಡದಂತೆ ಅನುಸರಿಸಬೇಕಾದ ಕ್ರಮಗಳು:
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಕೈಗಳನ್ನು ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಪದೇ ಪದೇ ಸ್ವಚ್ಛಗೊಳಿಸಬೇಕು. ಸೋಂಕಿತ ವ್ಯಕ್ತಿಯಿಂದ ಕನಿಷ್ಠ ಎರಡು ಮೀಟರ್ ದೂರವಿರಬೇಕು. ಪೌಷ್ಟಿಕ ಆಹಾರ ಹಾಗೂ ಸಾಕಷ್ಟು ಒಳ್ಳೆಯ ಪಾನೀಯಗಳನ್ನು ಸೇವಿಸಬೇಕು. ILI & SARI ಲಕ್ಷಣಗಳನ್ನು ಹೊಂದಿದವರು (ಶೀತ, ಕೆಮ್ಮು, ಜ್ವರ) ಹಾಗೂ ಹೈರಿಸ್ಕ್ ಗುಂಪಿನವರು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಬೇಕು ಮತ್ತು ಫಲಿತಾಂಶ ಬರುವವರೆಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು.
ತೆರೆದ ಸ್ಥಳದಲ್ಲಿ ಉಗುಳಬಾರದು. ಬಳಸಿದ ಕರವಸ್ತ್ರ / ನ್ಯಾಪ್ಕಿನ್ಗಳನ್ನು ಮರುಬಳಕೆ ಮಾಡಬಾರದು. ಹಸ್ತಲಾಘವ ಮಾಡುವುದು, ತಬ್ಬಿಕೊಳ್ಳುವುದು ಹಾಗೂ ಕಣ್ಣು, ಮೂಗು, ಬಾಯಿಯನ್ನು ಆಗಾಗ ಕೈಯಿಂದ ಮುಟ್ಟುವುದನ್ನು ತಡೆಯಬೇಕು. ಜನನಿಬಿಡ ಪ್ರದೇಶಗಳಿಗೆ ಹೋಗಬಾರದು.
ಸಾಮಾಜಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಿ, ಇನ್ಫ್ಲುಯೆಂಜಾ ಸೋಂಕಿನಿಂದ ದೂರವಿರುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.











