Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ಕಕ್ಕೇಹರವು ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಕಕ್ಕೇಹರವು (ಕಕ್ಕೇರು) ಗ್ರಾಮವು ಅನ್ನೇಹಾಳ್ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಚಿತ್ರದುರ್ಗದಿಂದ 19 ಕಿಲೋಮೀಟರ್ ದೂರ ದಕ್ಷಿಣಕ್ಕೆ, ಚಿತ್ರದುರ್ಗ- ಜಾನುಕೊಂಡ- ಗೊಡಬನಹಾಳ್- ಮಹದೇವನಕಟ್ಟೆ – ಕಕ್ಕೇರು ಮಾರ್ಗದಲ್ಲಿದೆ.

ಹೆಸರಿನ ಮೂಲ :
ಗ್ರಾಮದ ಪೂರ್ವಕ್ಕೆ, ದಕ್ಷಿಣಕ್ಕೆ, ಉತ್ತರಕ್ಕೆ ವಿಶಾಲವಾಗಿ ಹರಡಿರುವ ಜೋಗಿಮಟ್ಟಿ ಗುಡ್ಡ ಸಾಲುಗಳಲ್ಲಿ ಹಿಂದಿನಿಂದಲೂ ಕಕ್ಕೆ ಮರಗಳು ಯಥೇಚ್ಛವಾಗಿ ಬೆಳವಣಿಗೆ ಹೊಂದಿದ್ದು, ಇದರ ಹರವು ಅಂದರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಗ್ರಾಮವೇ ಕಕ್ಕೇಹರವು.ಇದು ಆಡುಭಾಷೆಯಲ್ಲಿ ಕಕ್ಕೇರು ಆಗಿದೆ.

ಈ ಗ್ರಾಮದ ಹಳೆ ಗ್ರಾಮ ನಿವೇಶನವು ಗ್ರಾಮದಿಂದ ದಕ್ಷಿಣಕ್ಕೆ ಅರ್ಧ ಕಿಲೋಮೀಟರ್ ದೂರದಲ್ಲಿರುವ ರಾಂಪುರ ಗ್ರಾಮವಾಗಿದೆ. ಇಂದು ಇಲ್ಲಿ ಆಂಜನೇಯ ಸ್ವಾಮಿ ದೇವಾಲಯವನ್ನು ಮಾತ್ರ ಕಾಣಬಹುದು.ಇದರಲ್ಲಿ ಪಾಳೇಗಾರರ ಕಾಲದ ಆಂಜನೇಯ ಸ್ವಾಮಿ ಶಿಲ್ಪವಿದೆ.
ಶಿವರಾತ್ರಿ ಸಮಯದಲ್ಲಿ ಗ್ರಾಮದ ಪರವಾಗಿ ಇಲ್ಲಿ ಪರೇವು ಆಚರಣೆ ನಡೆಸಲಾಗುತ್ತದೆ.

ಗ್ರಾಮದ ಮಧ್ಯಭಾಗದಲ್ಲಿರುವ ಕರಿಗಲ್ಲು ಹಿಂದೆ ಗ್ರಾಮಕ್ಕೆ ಹುಗಿ ಹೊಯ್ದ ಸ್ಥಳವಾಗಿದ್ದು, ಗ್ರಾಮದ ಯಾವುದೇ ಜಾತ್ರೆ, ಮೆರವಣಿಗೆ, ಮದುವೆ ಸಮಾರಂಭಗಳಲ್ಲಿ ಇದನ್ನು ಪೂಜಿಸಿ ನಂತರವೇ ಮುಂದುವರಿಸಲಾಗುತ್ತದೆ. ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ ಹೊಂದಿದ್ದು, ಗ್ರಾಮದ ಉತ್ತರಕ್ಕೆ, ಪೂರ್ವಕ್ಕೆ, ದಕ್ಷಿಣಕ್ಕೆ ಜೋಗಿಮಟ್ಟಿ ಗಿರಿಸಾಲುಗಳಿಂದ ಆವೃತವಾಗಿದ್ದು, ಸುತ್ತಲೂ ಸಮತಟ್ಟು ಭೂ ಪ್ರದೇಶವಿದ್ದರೂ ಅಲ್ಲಲ್ಲಿ ಏರು ತಗ್ಗುಗಳ ಭೂಮಿಯನ್ನು ಕಾಣಬಹುದು.
ಈಗಿನ ಗ್ರಾಮವು ಸಂಪೂರ್ಣ ಗುಡ್ಡಗಳಿಂದ ಆವೃತವಾಗಿದ್ದು, ಇಳಿಜಾರಿನ ಮೈದಾನ ಪ್ರದೇಶದಲ್ಲಿದೆ.

ಸುತ್ತಲೂ ಇರುವ ಜೋಗಿಮಟ್ಟಿ ಸಾಲುಗಳ ಮೇಲೆ ಬಿದ್ದ ಮಳೆ ಹಳ್ಳಗಳ ಮೂಲಕ ಯಥೇಚ್ಛವಾಗಿ ಮಳೆಗಾಲದಲ್ಲಿ ರಭಸವಾಗಿ ಹರಿದು ಮುಂದೆ ಅನ್ನೇಹಾಳ್ ಕೆರೆಗೆ ತಲುಪುತ್ತದೆ.
ಮಳೆಗಾಲದಲ್ಲಿ ಇಲ್ಲಿನ ವಾತಾವರಣವು ಸಂಪೂರ್ಣ ಹಚ್ಚ ಹಸಿರಾಗಿ ಗೋಚರಿಸುತ್ತದೆ ಹಾಗೂ ಮಲೆನಾಡಿನ ಯಾವುದೋ ಒಂದು ಊರಿನಂತೆ ಭಾಸವಾಗುತ್ತದೆ.
ಹಳ್ಳಗಳಲ್ಲಿ ಹರಿಯುವ ಮೆಕ್ಕಲು ಮಣ್ಣಿನಿಂದಾಗಿ ಭೂಮಿಯು ಉತ್ತಮ ಫಲವತ್ತತೆಯಿಂದ ಕೂಡಿದೆ.
ಗ್ರಾಮದ ದಕ್ಷಿಣಕ್ಕೆ ಹರಡಿರುವ ಜೋಗಿಮಟ್ಟಿ ಗಿರಿಸಾಲುಗಳಲ್ಲಿ ಬರುವ ಭೈರವಗುಡ್ಡ (3863ಅಡಿ ), ಈಚಲು ಗುಡ್ಡ (3804 ಅಡಿ ) ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಎತ್ತರದ ಗಿರಿಶಿಖರಗಳಾಗಿದ್ದು, ಇವು ಗ್ರಾಮದ ಹತ್ತಿರದಲ್ಲಿವೆ. ಗ್ರಾಮದ ನೈರುತ್ಯಕ್ಕೆ ಬಸಳೆ ಗುಡ್ಡ, ದಕ್ಷಿಣಕ್ಕೆ ವಜ್ರಗುಡ್ಡ, ಆಗ್ನೇಯ ದಿಕ್ಕಿಗೆ ಮಹಾಲಿಂಗನ ಕೋಟೆಗುಡ್ಡ… ಗಳನ್ನು ಕಾಣಬಹುದು.

ವೀರಗಲ್ಲುಗಳು :
ಗ್ರಾಮವು ಹಿಂದಿನಿಂದಲೂ ಯೋಧರ ಭೂಮಿಯಾಗಿದ್ದು, ಯುದ್ಧಗಳಲ್ಲಿ ಹುತಾತ್ಮರಾದ ಹತ್ತಾರು ವೀರರ ವೀರಗಲ್ಲುಗಳನ್ನು ಗ್ರಾಮದಲ್ಲಿ ಇಂದಿಗೂ ಕಾಣಬಹುದು.
ಗ್ರಾಮದ ಮಾರಿ ಮಹೇಶ್ವರಿ ದೇವಾಲಯದ ಸಭಾಮಂಟಪದಲ್ಲಿ ಒಂದು ವೀರಮಾಸ್ತಿಗಲ್ಲನ್ನು ಕಾಣಬಹುದು.ಇದರಲ್ಲಿ ಯೋಧನು ಕುದುರೆ ಸವಾರನಾಗಿದ್ದಾನೆ ಹಾಗೂ ಆತನ ಹೆಂಡತಿ ಮಹಾಸತಿ ಆಗಿದ್ದಾಳೆ. ಇದು 16-17 ನೇ ಶತಮಾನಕ್ಕೆ ಸೇರಿದ್ದಾಗಿದೆ.
ದೇವಾಲಯದ ಹೊರಗಡೆ ಬಲಭಾಗದಲ್ಲಿ 16-17 ನೇ ಶತಮಾನಕ್ಕೆ ಸೇರಿದ ವೀರಗಲ್ಲು ಕಾಣಬಹುದು.
ಇದೇ ರೀತಿಯ 4-5 ವೀರಗಲ್ಲು ಹಿಂದೆ ಸಂರಕ್ಷಣೆ ಇಲ್ಲದೆ ಬೇರೆ ಕಡೆಗೆ ಹಾಕಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ರಾಶಿ ಹಬ್ಬ :
ಪ್ರತಿವರ್ಷ ಜನವರಿ ಸಮಯದಲ್ಲಿ ಈ ಗ್ರಾಮದಲ್ಲಿ ರಾಶಿ ಹಬ್ಬವೆಂಬ ವಿಶೇಷ ಆಚರಣೆ ನಡೆಸಲಾಗುತ್ತದೆ.
ಸಾಮಾನ್ಯವಾಗಿ ಇದನ್ನು ಹಿಂಗಾರು ಬೆಳೆಗಳ ಸುಗ್ಗಿ ಕಾಲದಲ್ಲಿ ನಡೆಸಲಾಗುತ್ತದೆ. ರೈತರು ಬೆಳೆದ ಬಿಳಿ ಜೋಳ, ಪೈರು ಜೋಳ…ಮುಂತಾದ ಕೆಲವು ಧಾನ್ಯಗಳನ್ನು ರಾಶಿ ಹಬ್ಬ ಮುಗಿಯುವ ತನಕ ಯಾರೂ ಅದನ್ನು ಬಳಸುವುದಿಲ್ಲ, ಮಾರುಕಟ್ಟೆಗಳಿಗೂ ಮಾರುವುದಿಲ್ಲ. ಬದಲಾಗಿ ಹೊಲಗಳಲ್ಲಿಯೇ ಬಣವೆ ಮಾಡಿ ಹಾಕಿ ಹಬ್ಬನಂತರ ಬಳಸುತ್ತಾರೆ. ಅಕ್ಕಪಕ್ಕದ ಗ್ರಾಮದವರು ಈ ಊರಿನ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದವರೂ ಕೂಡ ಇದೇ ಪದ್ಧತಿಯನ್ನು ಅನುಸರಿಸುತ್ತಾರೆ.

ಬೃಹತ್ ಶಿಲಾಯುಗದ ನಿಲಿಸುಗಲ್ಲು :
ಗ್ರಾಮದ ಮಾರಿಮಹೇಶ್ವರಿ ದೇವಾಲಯದ ಎದುರು ಸುಮಾರು 5 ಅಡಿ ಎತ್ತರದ 2 ಬೃಹತ್ ಶಿಲಾಯುಗದ ನಿಲುವುಗಲ್ಲು (ನಿಲಿಸುಗಲ್ಲು) ಇದ್ದು,ಇದು 3000 ವರ್ಷಗಳ ಹಿಂದೆ ಪ್ರಾಚೀನ ಮಾನವನು ಇಲ್ಲಿ ತನ್ನ ವಸತಿನೆಲೆ ಮಾಡಿ ಕೊಂಡಿದ್ದರ ಕುರುಹಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಮಹದೇವನಕಟ್ಟೆ ದೊಡ್ಡಪುರ ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ದೇವಾಲಯಗಳು :
1.ಆಂಜನೇಯ ಸ್ವಾಮಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ದಕ್ಷಿಣಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ರಾಮನವಮಿಯ ಸಮಯದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.

2.ಮಾರಿ ಮಹೇಶ್ವರಿ ದೇವಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ಉತ್ತರಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವಿದೆ.
ಯುಗಾದಿ ನಂತರ ದಿನಗಳಲ್ಲಿ ಈ ದೇವರ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ.
ಹಿಂದೆ ಇದ್ದ ದೇವಾಲಯವನ್ನು ತೆಗೆದು ಕಳೆದ ದಶಕದಲ್ಲಿ ನೂತನವಾಗಿ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವರ ಜಾತ್ರೆಯು ಈ ಭಾಗದ ಪ್ರಮುಖ ದೇವರ ಜಾತ್ರೆಯಾಗಿದೆ. ಅಕ್ಕಪಕ್ಕದ ಊರುಗಳು ಸೇರಿದಂತೆ ಹತ್ತಿರದ ತಾಲೂಕುಗಳಿಂದಲೂ ಈ ದೇವರಿಗೆ ಸಾವಿರಾರು ಭಕ್ತರು ನಡೆದುಕೊಳ್ಳುತ್ತಾರೆ.
ತಮಗೆ ಅನಾರೋಗ್ಯ ಕಾಡಿದಾಗ, ದುಷ್ಟ ಶಕ್ತಿಗಳಿಂದ ಮುಕ್ತಿ ಹೊಂದಲು ಈ ದೇವಾಲಯದ ಆವರಣದಲ್ಲಿಯೇ ವಾರದಿಂದ ತಿಂಗಳಿನವರೆಗೂ ವಾಸ್ತವ್ಯ ಹೂಡುತ್ತಾರೆ. ಗರ್ಭಗೃಹದಲ್ಲಿ ಉದ್ಭವ ದೇವಿಯ ಮೂರ್ತಿ ಇದ್ದು, ಉತ್ಸವ ಮೂರ್ತಿಯನ್ನು ಹೊಳೆಪೂಜೆಗೆ ಪ್ರತಿ ವರ್ಷ ದಶರಥ ರಾಮೇಶ್ವರ (ದೊಡ್ಡವಜ್ರ)ಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಹಬ್ಬ,ಜಾತ್ರೆ,
ಮೆರವಣಿಗೆ ಸಮಯದಲ್ಲಿ ಈ ದೇವರನ್ನು ಹೊರಡಿಸಿ ಅಪ್ಪಣೆ,ಕುರುಹುಗಳನ್ನು ಪಡೆಯಲಾಗುತ್ತದೆ.
ದೇವಾಲಯದ ಎದುರು ಭಾಗದಲ್ಲಿ ಪಾತಯ್ಯನ ಕಲ್ಲು ಇದೆ. ದೇವಾಲಯದ ಮುಂಭಾಗದಲ್ಲಿ ಮಾತಂಗಮ್ಮ ದೇವಿ ದೇವಸ್ಥಾನವಿದೆ.
ಹಿಂದೆ ಈ ದೇವಾಲಯದ ಸ್ಥಳದಲ್ಲಿ ಗೊಲ್ಲರು ತಮ್ಮ ರೊಪ್ಪವನ್ನು ಹಾಕಿದ್ದಾಗ ಮಾರಿ ಮಹೇಶ್ವರಿ ದೇವಿಯು ಅವರಿಗೆ ಗೋಚರವಾಗಿ ತನಗೆ ಇಲ್ಲೊಂದು ದೇವಾಲಯ ಕಟ್ಟಿಸಬೇಕೆಂದು ಹೇಳಿದಳಂತೆ.
ಕಟ್ಟಿಸಿದ ಮೇಲೆ ಮೂರು ತಿಂಗಳವರೆಗೆ ಈ ದೇವಾಲಯವನ್ನು ಹಿಂದೆ ತಿರುಗಿ ನೋಡದಂತೆ ಹೋಗಬೇಕೆಂದು ಹೇಳಿದಳಂತೆ. ಆದರೆ ಕಟ್ಟಿಸಿದವರು ಸ್ವಲ್ಪ ದೂರ ಹೋದ ಮೇಲೆ ಹಿಂದೆ ತಿರುಗಿ ನೋಡಿ ರಕ್ತಕಾರಿ ಅಲ್ಲೇ ಸತ್ತು ಬಿದ್ದರಂತೆ. ಸತ್ತು ಬಿದ್ದ ಜಾಗದಲ್ಲಿಯೇ ಅವರನ್ನು ಅಲ್ಲೇ ಸಮಾಧಿ ಮಾಡಲಾಗಿದೆ.ಅದನ್ನು ಈಗ ಗೊಲ್ಲರಗುಡ್ಡೆ ಎನ್ನಲಾಗುತ್ತದೆ. ಈ ಜಾಗಕ್ಕೆ ಪ್ರತಿ ವರ್ಷ ಜಾತ್ರೆಯ ಸಮಯದಲ್ಲಿ ದೇವರನ್ನು ಕರೆತಂದು ಪೂಜೆ ಮಾಡಲಾಗುತ್ತದೆ.

3. ದುರ್ಗಾಪರಮೇಶ್ವರಿ ದೇವಸ್ಥಾನ
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

4.ತಿಮ್ಮಪ್ಪ ದೇವಾಲಯ
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಗೌರಸಂದ್ರ ಮಾರಮ್ಮ, ಕೊಲ್ಲಾಪುರದಮ್ಮ ದೇವಾಲಯವಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now