ಬೆಂಗಳೂರು.ಸೆಪ್ಟೆಂಬರ್.1 : ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಬಾಕಿ ಉಳಿದಿರುವ 33ನೇ ಕಂತಿನ ಗೃಹಲಕ್ಷ್ಮಿ ಹಣವನ್ನು ಸೆಪ್ಟೆಂಬರ್ ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.
ಅನರ್ಹ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಸರ್ವೆ ನಡೆಸಲು ಮುಂದಾಗಿದೆ. ಈ ಪರಿಷ್ಕರಣೆ ಕಾರ್ಯ ನಡೆಯುವ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡದಿರಲು ಈ ಹಿಂದೆ ಇಲಾಖೆ ನಿರ್ಧರಿಸಿತ್ತು. ಆದರೆ ಇದೀಗ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ 33ನೇ ಕಂತಿನ ಹಣವನ್ನು ಇದೇ ತಿಂಗಳೇ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಒಂದೆಡೆ ಅನರ್ಹರನ್ನು ಪತ್ತೆಹಚ್ಚಲು ಮನೆ-ಮನೆ ಸರ್ವೆ ನಡೆಯಲಿದ್ದರೆ, ಮತ್ತೊಂದೆಡೆ ಅರ್ಹ ಗೃಹಲಕ್ಷ್ಮಿ ಫಲಾನುಭವಿಗಳಿಗೆ 33ನೇ ಕಂತಿನ ಹಣ ಪಾವತಿಯಾಗಲಿದೆ. ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ಅರ್ಹ ಮಹಿಳಾ ಫಲಾನುಭವಿಗಳಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ.










