Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಹಸಿರಿನ ಹೊದಿಕೆಯೊಳಗೆ ಕಂಗೊಳಿಸುವ ಜೇನುಕಲ್ಲುಗವಿ ಹಾಗೂ ಕರಡಿಗುಡ್ಡ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಒಂದು ಅರೆ ಮಲೆನಾಡು ಪ್ರದೇಶವಾಗಿದೆ. ಮಲೆನಾಡಿನ ಪೂರ್ವ ಅಂಚಿಗೆ ಬರುವ ಈ ತಾಲೂಕಿನ ಬಹು ಭಾಗ ಮಲೆನಾಡಿನ ವಾತಾವರಣವನ್ನು ನೆನಪಿಸುತ್ತದೆ. ಉತ್ತಮ ಮಳೆಗಾಲದ ದಿನಗಳಲ್ಲಿ ಇಲ್ಲಿನ ಪರಿಸರವು ಹಚ್ಚಹಸುರಿನ ವಾತಾವರಣದಿಂದ ತುಂಬಿರುತ್ತದೆ. ಹಚ್ಚಹಸುರಿನ ಭೂ ಮೇಲ್ಮೈ ಹೊಂದಿರುವ ಗುಡ್ಡಗಳ ಸಾಲುಗಳು ಕೂಡ ಅಲ್ಲಲ್ಲಿ ಕಂಡುಬರುತ್ತವೆ. ಅದರಲ್ಲಿ ಚದುರಿದಂತೆ ಅಲ್ಲಲ್ಲಿ ಅಷ್ಟೇನೂ ಎತ್ತರವಿಲ್ಲದ 1000-1500 ಅಡಿಗಳಷ್ಟು ಎತ್ತರ (ಸಮುದ್ರಮಟ್ಟದಿಂದ ) ಇರುವ ಬಹಳಷ್ಟು ಗುಡ್ಡಗಳು ಬೆಟ್ಟಗಳು ಕಂಡುಬರುತ್ತವೆ.

ಅದರಲ್ಲಿ ಪ್ರಮುಖವಾಗಿ ಕಂಡು ಬರುವುದೇ ಜೇನುಕಲ್ಲುಗವಿ
ಹಾಗೂ ಕರಡಿಗುಡ್ಡ ಬೆಟ್ಟ ಎಂಬ ಜೋಡಿ ಗುಡ್ಡಗಳು. ಇವು ರಾಷ್ಟ್ರೀಯ ಹೆದ್ದಾರಿ 13 ಚಿತ್ರದುರ್ಗದಿಂದ ಹೊಳಲ್ಕೆರೆಗೆ ಹೋಗುವ ಮಾರ್ಗ ಮಧ್ಯದ ಕಣಿವೆ ಗ್ರಾಮದ ದಕ್ಷಿಣಕ್ಕೆ ಇದ್ದು ಹೊಳಲ್ಕೆರೆ ಪಟ್ಟಣದ ಪೂರ್ವ ದಿಕ್ಕಿನ ಕೊನೆಯ ಅಂಚಿಗೆ ದೊಡ್ಡ ತಡೆಗೋಡೆಯಂತೆ ಕಂಡುಬರುತ್ತದೆ.
ಇದು ಸುಮಾರು 400 ಎಕರೆಗಳಷ್ಟು ಜಾಗದಲ್ಲಿ ವ್ಯಾಪಿಸಿದ್ದು ಅಕ್ಕಪಕ್ಕದ ಜಾಗವು ಸಂಪೂರ್ಣ ಸಮತಟ್ಟು ಭೂ ಪ್ರದೇಶವಾಗಿದೆ.

ಹೆಸರೇ ಸೂಚಿಸುವಂತೆ ಇಲ್ಲಿ ಯಥೇಚ್ಛವಾಗಿ ಜೇನುಗೂಡುಗಳು ಕಂಡುಬರುವುದರಿಂದ ಇದಕ್ಕೆ ಜೇನುಕಲ್ಲುಗವಿ ಹಾಗೂ ಈ ಗುಡ್ಡದ ಅಕ್ಕಪಕ್ಕದ ಕುರುಚಲು ಗಿಡಗಳು ಹಾಗೂ ಗುಡ್ಡದ ಬಹುಭಾಗದಲ್ಲಿ ಕರಡಿಗಳು ಕಂಡುಬರುವುದರಿಂದ ಇದನ್ನು ಕರಡಿಗುಡ್ಡ ಎನ್ನಲಾಗುತ್ತದೆ.
ಮುಖ್ಯ ರಸ್ತೆಯಿಂದ ಸ್ವಲ್ಪವೇ ದೂರವಿದ್ದರೂ ಇಲ್ಲಿಗೆ ತಲುಪಲು ಕಚ್ಚಾ ರಸ್ತೆ ಒಂದೇ ಮಾರ್ಗ.
ಬೆಟ್ಟದ ಬುಡದ ತನಕ ಮಣ್ಣಿನ ರಸ್ತೆ ಇದ್ದು ಮೇಲ್ಭಾಗಕ್ಕೆ ಕಾಲುನಡಿಗೆಯಲ್ಲಿ ಮಾತ್ರ ತಲುಪಬಹುದು

ಹತ್ತಿರದ ಟಿ. ಎಮ್ಮಿಗನೂರು ಗ್ರಾಮದಿಂದ ನೈರುತ್ಯಕ್ಕೆ ಒಂದು ಕಿಲೋಮೀಟರ್ ದೂರದಲ್ಲಿರುವ ಈ ಸ್ಥಳಕ್ಕೆ ಬೆಟ್ಟ ಕಾಡುಗಳ ಹಾದಿಯಲ್ಲಿ ಸಾಗಬೇಕು. ಬೆಟ್ಟದ ಬುಡದವರೆಗೂ ಬೈಕ್ ಹಾದಿಯಿದ್ದು ನಂತರ ನಡಿಗೆಯಲ್ಲಿ ಬೆಟ್ಟವನ್ನು ಹತ್ತಬೇಕಾಗುತ್ತದೆ. ದೂರದಿಂದ ನೋಡಿದರೆ ಒಂದು ಸಣ್ಣ ಬೆಟ್ಟದಂತೆ ಕಂಡುಬರುವ ಈ ಬೆಟ್ಟ ಹತ್ತಿದಂತೆಲ್ಲ ತನ್ನ ಬೃಹದಾಕಾರದ ಎತ್ತರವನ್ನು ಅನಾವರಣ ಗೊಳಿಸಿ ಆಯಾಸವನ್ನು ಚಾರಣಿಗರಿಗೆ ಗೊತ್ತಾಗುವಂತೆ ಮಾಡುತ್ತದೆ. ಹತ್ತಿದಂತೆ ಏದುಸಿರು ಹೆಚ್ಚಾಗುತ್ತಾ ಸಾಗುತ್ತದೆ. ಎಷ್ಟೇ ಚಳಿ ಮಳೆ ಜಿನುಗುತ್ತಿದ್ದರೂ ಹತ್ತುವಾಗ ಬೆವರಿನಿಂದ ದೇಹವು ತೊಯ್ದು ಬಿಡುತ್ತದೆ.

ನೆಲಮಟ್ಟದಿಂದ ಸುಮಾರು 400 -600ಅಡಿ ಎತ್ತರವಿರುವ ಬೆಟ್ಟ ಇದಾಗಿದ್ದು ಈ ಜಾಗಕ್ಕೆ ಕಾಲ್ನಡಿಗೆಯಲ್ಲಿಯೇ ಹತ್ತಿ ತಲುಪಬೇಕಾಗುತ್ತದೆ. ಕಾರಣಕ್ಕೆ ಕನಿಷ್ಠ ಐದಾರು ಮಂದಿ ಹೋಗುವುದು ಉತ್ತಮ.ಇದು ಒಂದು ಮಧ್ಯಮ ಗಾತ್ರದ ಬೆಟ್ಟವಾಗಿದ್ದು ಇದರ ಮೇಲೆ ಸ್ವಯಂಭೂ ಆಂಜನೇಯ ಸ್ವಾಮಿಗಳ ಪಾದಗಳು ಕಂಡುಬರುತ್ತವೆ. ಸ್ಥಳೀಯ ಭಕ್ತರು ಇತ್ತೀಚಿನ ದಿನಗಳಲ್ಲಿ ಇದಕ್ಕೊಂದು ಪುಟ್ಟ ದೇವಾಲಯ ನಿರ್ಮಿಸಿದ್ದಾರೆ.

ಕಣ್ಣಿಗೆ ಹಬ್ಬ ನೀಡುವ ಹಸಿರು ಹೊದಿಕೆ, ದೂರದವರೆಗೆ ಹರಡಿಕೊಂಡಿರುವ ಹೊಲಗಳು, ಸಾಲುಸಾಲಾಗಿ ಬೆಳೆದಿರುವ ತೆಂಗಿನ ಮರಗಳು, ಅಲ್ಲಲ್ಲಿ ಕಾಣಿಸುವ ಮರಗಿಡಗಳು..
ಇವೆಲ್ಲವೂ ಸೇರಿ ಪರಿಸರದ ಅದ್ಭುತ ಸೌಂದರ್ಯವನ್ನು ಅನಾವರಣಗೊಳಿಸುತ್ತವೆ. ಮಳೆಯ ನಂತರ ಹಸಿರಿನಿಂದ ಕಂಗೊಳಿಸುವ ಪರಿಸರ,ದೂರದ ಭಾಗದಲ್ಲಿ ಕಾಣುವ ಬೆಟ್ಟಗುಡ್ಡಗಳು ಹಾಗೂ ಮಂಜಿನಿಂದ ಆವೃತವಾಗಿರುವ ಇಲ್ಲಿನ ನಯನ ಮನೋಹರ ವಾತಾವರಣವು ಪ್ರಕೃತಿಗೆ ಮತ್ತಷ್ಟು ಮನಮೋಹಕ ರೂಪ ನೀಡಿದೆ. ಮುಂಜಾನೆಯ ತಂಪಾದ ವಾತಾವರಣ, ಮೃದುವಾಗಿ ಬೀಸುವ ಗಾಳಿ..ಇವೆಲ್ಲವೂ ನಗರ ಜೀವನದ ಗದ್ದಲದಿಂದ ದೂರವಾದ ನೆಮ್ಮದಿಯ ಅನುಭವವನ್ನು ನೀಡುತ್ತವೆ.
ಇಂತಹ ನೈಸರ್ಗಿಕ ಪರಿಸರವು ಕೇವಲ ಕಣ್ಣಿಗೆ ಸೊಬಗು ನೀಡುವುದಷ್ಟೇ ಅಲ್ಲದೆ ಮನಸ್ಸಿಗೆ ನೆಮ್ಮದಿ, ಶಾಂತಿ ನೀಡುತ್ತದೆ. ಆಂಜನೇಯ ಸ್ವಾಮಿ ಪಾದವಿರುವ ಪುಟ್ಟ ಗುಡಿಯ ಮುಂದೆ ನಿಂತು ನೋಡಿದರೆ
ಪೂರ್ವ ದಿಕ್ಕಿಗೆ ವಿಶಾಲವಾಗಿ ಚಾಚಿಕೊಂಡಿರುವ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರು ಪ್ರದೇಶ ಸುಮಾರು ಇಲ್ಲಿಂದ 45km -50 km ದೂರವಿದ್ದು ದೇವಾಲಯದ ಮುಂಭಾಗದಿಂದ ವಾತಾವರಣವು ಶುಭ್ರವಾಗಿದ್ದಾಗ ಅತ್ಯಂತ ಸ್ಪಷ್ಟವಾಗಿ ಬರಿಗಣ್ಣಿಗೆ ಗೋಚರಿಸುತ್ತದೆ. ಸುತ್ತಲೂ ಇರುವ ಗುಡ್ಡ ಸಾಲುಗಳು, ಅಲ್ಲಿರುವ ನೂರಾರು ಗಾಳಿ ಯಂತ್ರಗಳು,360° ಸುತ್ತಮುತ್ತಲಿನ ಹತ್ತಾರು ಗ್ರಾಮಗಳನ್ನು ಗುರುತಿಸಬಹುದು.

ವಾರ್ಷಿಕವಾಗಿ ಗುಡ್ಡದ ಕೆಳಭಾಗದಲ್ಲಿ ಇರುವ ಅನ್ವೇರಪ್ಪನ ಕಟ್ಟೆಯಲ್ಲಿ ಭಕ್ತರಿಂದ ಮಳೆ ತಡವಾದರೆ,ಮಳೆಯು ಬಾರದಿದ್ದರೆ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.
ಖಾಸಗಿ ವಾಹನದಲ್ಲಿ ಇಲ್ಲಿಗೆ ಹೋಗುವುದು ಉತ್ತಮ. ಮುಖ್ಯ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಹೊಳಲ್ಕೆರೆ -ಚಿತ್ರದುರ್ಗ ಮಾರ್ಗದ ಮಧ್ಯದಲ್ಲಿ ಕಣಿವೆ ಗ್ರಾಮದಿಂದ ಟಿ. ಎಮ್ಮಿಗನೂರು ಗ್ರಾಮಕ್ಕೆ ತಲುಪಿ ಅಲ್ಲಿಂದ ನೈರುತ್ಯಕ್ಕೆ ಗುಡ್ಡದ ಹಾದಿಯಲ್ಲಿ ಸಾಗಬೇಕು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now